ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾತೆ ವಿವಾದ: ವರಿಷ್ಠರು ಸರಿಪಡಿಸುತ್ತಾರೆ: ಸಚಿವ ಮುನಿರತ್ನ ಹೇಳಿಕೆ

ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿಕೆ
Last Updated 12 ಆಗಸ್ಟ್ 2021, 13:35 IST
ಅಕ್ಷರ ಗಾತ್ರ

ಕೋಲಾರ: ‘ಸಚಿವ ಸಂಪುಟ ರಚನೆ ಹಾಗೂ ಖಾತೆ ಹಂಚಿಕೆ ವೇಳೆ ವಿವಾದ ಸಾಮಾನ್ಯ. ತುಂಬಾ ಅನುಭವಿಯಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಎಲ್ಲವನ್ನೂ ಬಗೆಹರಿಸುತ್ತಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಮುನಿರತ್ನ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಖಾತೆ ಹಂಚಿಕೆ ವಿಚಾರವಾಗಿ ಎದುರಾಗಿರುವ ಭಿನ್ನಾಭಿಪ್ರಾಯವನ್ನು ವರಿಷ್ಠರು ಸರಿಪಡಿಸುತ್ತಾರೆ. ಯಾವುದೇ ಕಾರಣಕ್ಕೂ ಪಕ್ಷಕ್ಕೆ ಮುಜುಗರವಾಗಲು ಬಿಡುವುದಿಲ್ಲ. ಜನರ ಸೇವೆ ಮಾಡಲು, ಕೆಲಸ ಮಾಡಲು ಯಾವ ಖಾತೆಯಾದರೇನು? ಇರುವುದರಲ್ಲೇ ತೃಪ್ತಿ ಪಡಬೇಕು’ ಎಂದರು.

‘ಕಾಯಕವೇ ಕೈಲಾಸವೆಂದು ದೊಡ್ಡವರು ಹೇಳಿದ್ದಾರೆ. ಕೊಟ್ಟಿರುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಅದೇ ಖಾತೆ ಬೇಕು, ಇದೇ ಬೇಕು ಎನ್ನುವುದು ಸರಿಯಿಲ್ಲ. ಖಾತೆ ಹಂಚಿಕೆಯು ವರಿಷ್ಠರ ತೀರ್ಮಾನವಾಗಿದ್ದು, ಅದಕ್ಕೆ ಎಲ್ಲರೂ ಬದ್ಧರಾಗಿರಬೇಕು’ ಎಂದು ತಿಳಿಸಿದರು.

‘ಜಿಲ್ಲೆಯ ರೈತರು ಬೆಲೆ ಕುಸಿತದ ಕಾರಣಕ್ಕೆ ಬೆಳೆಗಳನ್ನು ರಸ್ತೆ ಬದಿಯಲ್ಲಿ ಸುರಿದಿರುವುದು ನನ್ನ ಗಮನಕ್ಕೆ ಬಂದಿದೆ. ರೈತರ ನೋವಿನ ಅರಿವಿದೆ. ರೈತರ ಪರ ನಿಲ್ಲಬೇಕಿರುವುದು ನಮ್ಮ ಕರ್ತವ್ಯ. ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುತ್ತೇವೆ. ಅವರ ಕಷ್ಟಕ್ಕೆ ಖಂಡಿತ ಸ್ಪಂದಿಸುತ್ತೇವೆ’ ಎಂದು ಭರವಸೆ ನೀಡಿದರು.

ಸಂಧಾನಕ್ಕೆ ಪ್ರಯತ್ನ: ‘ಸಂಸದ ಮುನಿಸ್ವಾಮಿ ಹಾಗೂ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ನಡುವಿನ ವಾಕ್ಸಮರ ರಾಜಕೀಯಕ್ಕೆ ಸಂಬಂಧಿಸಿದ್ದು. ರಾಜಕೀಯದಲ್ಲಿ ಆರೋಪ ಪ್ರತ್ಯಾರೋಪ ಸಾಮಾನ್ಯ. ಆದರೆ, ಆರೋಪಗಳೆಲ್ಲಾ ಸತ್ಯವಲ್ಲ. ಸಂಪೂರ್ಣ ಮಾಹಿತಿಯಿಲ್ಲದೆ ಮಾತನಾಡುವುದು ತಪ್ಪು. ಹಿಂದಿನ ಉಸ್ತುವಾರಿ ಸಚಿವರಂತೆ ಸಂಸದರು ಮತ್ತು ಶಾಸಕರ ನಡುವೆ ಸಂಧಾನ ಮಾಡಿಸಲು ಪ್ರಯತ್ನಿಸುತ್ತೇನೆ’ ಎಂದರು.

‘ತಹಶೀಲ್ದಾರ್‌ ಶೋಭಿತಾ ಅವರು ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿ ತಮ್ಮ ಪೋಷಕರ ಷಷ್ಠಿ ಕಾರ್ಯಕ್ರಮ ನಡೆಸಿರುವುದರ ಬಗ್ಗೆ ಮಾಹಿತಿಯಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು. ಯಾರೇ ತಪ್ಪು ಮಾಡಿದ್ದರೂ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಮುಖ್ಯಮಂತ್ರಿಗಳು ನನಗೆ ಕೋಲಾರ ಜಿಲ್ಲೆಯ ಜವಾಬ್ದಾರಿ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ನೆರವೇರಿಸಲು ಕೋಲಾರದಲ್ಲಿ ನನಗೆ ಅವಕಾಶ ಸಿಕ್ಕಿದೆ. ಸಿನಿಮಾ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಚರ್ಚಿಸಿಲ್ಲ. ಕೋವಿಡ್ ನಿಯಂತ್ರಣದ ಕೆಲಸ ಪೂರ್ಣಗೊಳಿಸಿ ಬಳಿಕ ಉಳಿದ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT