ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿ ಮಾರಾಟ: ವಿನಾಯಿತಿಗೆ ಮನವಿ

ಮುಖ್ಯಮಂತ್ರಿಗಳಿಗೆ ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಪತ್ರ
Last Updated 6 ಮೇ 2021, 12:56 IST
ಅಕ್ಷರ ಗಾತ್ರ

ಕೋಲಾರ: ಕೋವಿಡ್‌ ಹಾಗೂ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕುಕ್ಕುಟ ಉದ್ಯಮವು ಸಂಕಷ್ಟಕ್ಕೆ ಸಿಲುಕಿದ್ದು, ಕೋಳಿ ಮತ್ತು ಕೋಳಿ ಉತ್ಪನ್ನಗಳ ಮಾರಾಟಕ್ಕೆ ಸರ್ಕಾರ ವಿನಾಯಿತಿ ನೀಡಬೇಕೆಂದು ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಕೋಳಿ ಸಾಕಾಣಿಕೆ ಮತ್ತು ಅದರ ಪೂರಕ ಉದ್ದಿಮೆಗಳಿಗೆ ಲಾಕ್‌ಡೌನ್‌ ಬಿಸಿ ತಟ್ಟಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೆಳಿಗ್ಗೆ 6 ಗಂಟೆಯಿಂದ 10ರವರೆಗೆ ಮಾತ್ರ ಕೋಳಿ ಮತ್ತು ಮೊಟ್ಟೆ ಮಾರಾಟಕ್ಕೆ ಸೀಮಿತ ಕಾಲಾವಕಾಶ ನೀಡಲಾಗಿದೆ. ಇದರಿಂದ ವಹಿವಾಟು ಕುಸಿದು ಕೋಳಿ ಬೆಲೆ ಇಳಿಕೆಯಾಗುತ್ತಿದೆ ಎಂದು ಗೋವಿಂದರಾಜು ಪತ್ರದಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಕುಕ್ಕುಟ ಉದ್ಯಮ ನಂಬಿಕೊಂಡು ಸಾವಿರಾರು ಕುಟುಂಬಗಳು ಬದುಕು ಸಾಗಿಸುತ್ತಿವೆ. ಕೋಳಿ ಉದ್ದಿಮೆಯಲ್ಲಿ ರೈತರು, ಉತ್ಪಾದಕರು, ವಿತರಕರು ಹಾಗೂ ಮಾರಾಟಗಾರರು ತೊಡಗಿಸಿಕೊಂಡಿದ್ದಾರೆ. ಪ್ರತಿನಿತ್ಯ ಕೋಟ್ಯಂತರ ರುಪಾಯಿ ವಹಿವಾಟು ನಡೆಸುವ ಕುಕ್ಕುಟ ಉದ್ಯಮಕ್ಕೆ ಲಾಕ್‌ಡೌನ್ ವ್ಯವಸ್ಥೆ ದೊಡ್ಡ ಪೆಟ್ಟು ಕೊಟ್ಟಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಸಾಧಾರಣಾ ದಿನಗಳಲ್ಲಿ ನಿತ್ಯ ಸುಮಾರು 60 ಲಕ್ಷ ಕೋಳಿಗಳು ಮಾರಾಟವಾಗುತ್ತಿದ್ದವು. ಆದರೆ, ಲಾಕ್‌ಡೌನ್‌ ಜಾರಿ ನಂತರ ಅರ್ಧದಷ್ಟು ಕೋಳಿಗಳು ಮಾರಾಟವಾಗುತ್ತಿಲ್ಲ. ಒಂದು ಕೆ.ಜಿ ಗಾತ್ರದ ಕೋಳಿ ಸಾಕಾಣಿಕೆಗೆ ಕನಿಷ್ಠ ₹ 90 ವೆಚ್ಚವಾಗುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಕೋಳಿ ಸಗಟು ದರ ಕೆ.ಜಿಗೆ ₹ 30 ಸಹ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ಕೋವಿಡ್‌ 2ನೇ ಅಲೆ ಸಾಕಷ್ಟು ಸಮಸ್ಯೆ ಉಂಟು ಮಾಡಿದೆ. ಅದರಲ್ಲೂ ಕುಕ್ಕುಟ ಉದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಕೋಳಿ ಸಾಕಾಣಿಕೆದಾರರಿಗೆ ಉದ್ಯಮಕ್ಕೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ ಕೋಳಿಗಳನ್ನು ಅಂಗಡಿಗಳಿಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಉದ್ಯಮ ನಿರ್ವಹಣೆ ಕಷ್ಟವಾಗಿದೆ ಎಂದು ವಿವರಿಸಿದ್ದಾರೆ.‌

ಫಾರಂನಲ್ಲೇ ಉಳಿದಿವೆ: ಒಂದೆಡೆಯಿಂದ ಮತ್ತೊಂದು ಕಡೆಗೆ ಬೆಳಿಗ್ಗೆ 10 ಗಂಟೆಯೊಳಗೆ ಕೋಳಿ ಪೂರೈಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಟಾವಿಗೆ ಬಂದಿರುವ ಕೋಳಿಗಳಲ್ಲಿ ಶೇ 70ರಷ್ಟು ಮಾರಾಟವಾಗದೆ ಫಾರಂಗಳಲ್ಲಿ ಉಳಿದಿವೆ. ಕೋಳಿಗಳಿಗೆ ನೀಡುವ ಆಹಾರದ ಬೆಲೆ ಗಗನಕ್ಕೇರಿದ್ದು, ಬೆಳೆದು ನಿಂತಿರುವ ಕೋಳಿಗಳಿಗೆ ಆಹಾರ ನೀಡಲು ಕಷ್ಟವಾಗುತ್ತಿದೆ. ಜತೆಗೆ ಫಾರಂಗಳಲ್ಲಿ ಕೋಳಿ ಮರಿಗಳ ಸಂಖ್ಯೆ ಹೆಚ್ಚಿರುವುದರಿಂದ ಹೊಸದಾಗಿ ಹುಟ್ಟುತ್ತಿರುವ ಮರಿಗಳ ಸಾಕಾಣಿಕೆಗೆ ಜಾಗ ಇಲ್ಲದಾಗಿದೆ ಎಂದು ತಿಳಿಸಿದ್ದಾರೆ.

ಕೋಳಿ ಮತ್ತು ಮೊಟ್ಟೆ ಬೆಲೆ ವೇಗವಾಗಿ ಕುಸಿಯುತ್ತಿದೆ. ಪ್ರತಿನಿತ್ಯ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2ರವರೆಗೆ ಕೋಳಿ ವಹಿವಾಟಿಗೆ ಕಾಲಾವಕಾಶ ನೀಡಿದರೆ ಕುಕ್ಕುಟ ಉದ್ಯಮ ಚೇತರಿಸಿಕೊಳ್ಳುತ್ತದೆ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT