ಬುಧವಾರ, ಅಕ್ಟೋಬರ್ 21, 2020
24 °C
ನಗರಸಭೆ ಅಧ್ಯಕ್ಷ– ಉಪಾಧ್ಯಕ್ಷಗಾದಿ ಮೀಸಲಾತಿ ಪ್ರಕಟ: ಅಧಿಕಾರಕ್ಕಾಗಿ ತಂತ್ರ– ಪ್ರತಿತಂತ್ರ

ಕೋಲಾರ ನಗರಸಭೆ: ಪಕ್ಷೇತರರ ‘ಕೈ’ ಕುಲುಕಲು ಮುಂದಾದ ಕಾಂಗ್ರೆಸ್‌

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷಗಾದಿಯ ಮೀಸಲಾತಿ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸದಸ್ಯರು ಪಕ್ಷದ ವರಿಷ್ಠರ ಮಟ್ಟದಲ್ಲಿ ಲಾಬಿ ಆರಂಭಿಸಿದ್ದಾರೆ.

ಜಿಲ್ಲಾ ಕೇಂದ್ರವಾದ ಕೋಲಾರ ನಗರಸಭೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತವಿಲ್ಲದ ಕಾರಣ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಕ್ಷೇತರ ಸದಸ್ಯರ ಓಲೈಕೆ ಕಸರತ್ತು ಜೋರಾಗಿದೆ. ಅಧಿಕಾರದ ಸನಿಹಕ್ಕೆ ಬಂದು ನಿಂತಿರುವ ಕಾಂಗ್ರೆಸ್‌ ಪಾಳಯವು ಪಕ್ಷೇತರ ಸದಸ್ಯರ ‘ಕೈ’ ಕುಲುಕಲು ಮುಂದಾಗಿದೆ.

ನಗರಸಭೆಯ ಹಿಂದಿನ ಅವಧಿಯಲ್ಲಿ ಜೆಡಿಎಸ್‌ ಪಕ್ಷವು ಸಿಪಿಎಂ ಬೆಂಬಲದೊಂದಿಗೆ ಎರಡೂವರೆ ವರ್ಷ ಅಧಿಕಾರ ನಡೆಸಿತ್ತು. ನಂತರ ಕಾಂಗ್ರೆಸ್‌ ಪಾಳಯವು ಮಾಜಿ ಶಾಸಕ ವರ್ತೂರು ಪ್ರಕಾಶ್‌ ಬಣದ ಸದಸ್ಯರ ಬೆಂಬಲದೊಂದಿಗೆ ಅಧಿಕಾರ ಹಿಡಿದಿತ್ತು. ಇದೀಗ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಶತಾಯಗತಾಯ ಗದ್ದುಗೆ ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿವೆ. ಉಭಯ ಪಕ್ಷಗಳು ಅಧಿಕಾರಕ್ಕಾಗಿ ತಂತ್ರ– ಪ್ರತಿತಂತ್ರ ರೂಪಿಸುತ್ತಿದ್ದು, ಪಕ್ಷೇತರ ಸದಸ್ಯರು ನಿರ್ಣಾಯಕರಾಗಿದ್ದಾರೆ.

ಪಕ್ಷಗಳ ಬಲಾಬಲ: ಕೋಲಾರ ನಗರಸಭೆಯಲ್ಲಿ 35 ವಾರ್ಡ್‌ಗಳಿದ್ದು, ಕಾಂಗ್ರೆಸ್‌ 12 ಸದಸ್ಯ ಬಲ ಹೊಂದಿದೆ. ಉಳಿದಂತೆ ಜೆಡಿಎಸ್‌ 8, ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) 4, ಬಿಜೆಪಿ 3 ಸದಸ್ಯ ಬಲ ಹೊಂದಿವೆ. 8 ಮಂದಿ ಪಕ್ಷೇತರ ಸದಸ್ಯರಿದ್ದಾರೆ.‌

ನಗರಸಭೆಯ 35 ಮಂದಿ ಚುನಾಯಿತ ಸದಸ್ಯರು, ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರು ಸೇರಿದಂತೆ ಒಟ್ಟಾರೆ 38 ಮಂದಿಗೆ ಮತದಾನದ ಹಕ್ಕಿದೆ. ಅಧಿಕಾರದ ಗದ್ದುಗೆ ಏರಲು 20 ಸದಸ್ಯರ ಬೆಂಬಲ ಬೇಕಿದೆ. ಕೈ ಪಾಳಯಕ್ಕೆ ಆಡಳಿತದ ಚುಕ್ಕಾಣಿ ಹಿಡಿಯಲು 8 ಸದಸ್ಯರ ಬೆಂಬಲ ಬೇಕಿದೆ. ಹೀಗಾಗಿ ಕಾಂಗ್ರೆಸ್‌, ಪಕ್ಷೇತರರು ಹಾಗೂ ಎಸ್‌ಡಿಪಿಐ ಸದಸ್ಯರ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆ ಏರಲು ರಣತಂತ್ರ ರೂಪಿಸಿದೆ.

8ನೇ ವಾರ್ಡ್‌ನಿಂದ ಗೆದ್ದಿರುವ ಕಾಂಗ್ರೆಸ್‌ನ ಜಿ.ಎಸ್.ಪಾವನ ಮತ್ತು 27ನೇ ವಾರ್ಡ್‌ನ ಕಾಂಗ್ರೆಸ್‌ ಸದಸ್ಯೆ ಕೆ.ಲಕ್ಷ್ಮೀದೇವಮ್ಮ ಅವರು ಅಧ್ಯಕ್ಷಗಾದಿಯ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್‌ ಪಾಳಯದಲ್ಲಿ 1ನೇ ವಾರ್ಡ್‌ ಸದಸ್ಯೆ ಆರ್‌.ಶ್ವೇತಾ ಅವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಪ್ರಬಲವಾಗಿ ಕೇಳಿಬರುತ್ತಿದೆ.

ಹಂಚಿಕೆ ಸೂತ್ರ: ನಗರಸಭೆಯ ಅಧ್ಯಕ್ಷಗಾದಿ ಹಿಂದುಳಿದ ವರ್ಗ–ಎ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ. ವಿಧಾನ ಪರಿಷತ್‌ ಸದಸ್ಯ ನಸೀರ್‌ ಅಹಮ್ಮದ್‌ ಹಾಗೂ ಶಾಸಕ ರಮೇಶ್‌ಕುಮಾರ್‌ ಬಣದಲ್ಲಿ ಗುರುತಿಸಿಕೊಂಡಿರುವ ಕೈ ಪಾಳಯದ ಮೂರ್ನಾಲ್ಕು ಸದಸ್ಯರು ತೆರೆಮರೆಯಲ್ಲೇ ಜೆಡಿಎಸ್‌ ಜತೆ ಕೈಜೋಡಿಸುವ ಗುಸು ಗುಸು ಕೇಳಿಬರುತ್ತಿದೆ.

ತಲಾ ಎರಡೂವರೆ ವರ್ಷ ಅಧಿಕಾರ ಹಂಚಿಕೆಯ ಸೂತ್ರದೊಂದಿಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಮೈತ್ರಿ ಕಸರತ್ತು ನಡೆದಿದೆ. ಮೈತ್ರಿ ಲೆಕ್ಕಾಚಾರ ತಲೆಕೆಳಗಾದರೆ ‘ಪ್ಲಾನ್‌ ಬಿ’ ರೂಪಿಸಿರುವ ಜೆಡಿಎಸ್‌ ಪಾಳಯವು ಪಕ್ಷೇತರರು, ಎಸ್‌ಡಿಪಿಐ ಹಾಗೂ ಬಿಜೆಪಿ ಸದಸ್ಯರನ್ನು ಸೆಳೆದು ಅಧಿಕಾರ ಹಿಡಿಯುವ ಉತ್ಸಾಹದಲ್ಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು