ಶನಿವಾರ, ಏಪ್ರಿಲ್ 1, 2023
23 °C
ಶಿಕ್ಷಕರ ದಿನಾಚರಣೆಯಲ್ಲಿ ಸಂಸದ ಮುನಿಸ್ವಾಮಿ ಭರವಸೆ

ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿಗೆ ಒತ್ತಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಗೆ ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಜಾರಿಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ತರುತ್ತೇವೆ’ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ‘ಶಿಕ್ಷಕರು ದೇಶ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ದೇಶಕ್ಕೆ ಅಮೂಲ್ಯ ಮಾನವ ಸಂಪನ್ಮೂಲ ನೀಡುವ ಶಿಕ್ಷಕರ ಆಶಯ ಶಿಷ್ಯರ ಅಭ್ಯುದಯವಾಗಿದೆ’ ಎಂದರು.

‘ಶಿಕ್ಷಕರ ಕುಟುಂಬದಲ್ಲಿ ಗಂಡ ಒಂದೆಡೆ ಪತ್ನಿ ಮತ್ತೊಂದೆಡೆ ಕರ್ತವ್ಯ ನಿರ್ವಹಿಸುತ್ತಿದ್ದರೆ ಮಾನಸಿಕ ನೆಮ್ಮದಿ ಇರುವುದಿಲ್ಲ. ವರ್ಗಾವಣೆ ನೀತಿ ಮೂಲಕ ಶಿಕ್ಷಕರು ಖುಷಿಯಿಂದ ಕೆಲಸ ಮಾಡುವ ವಾತಾವರಣ ಸೃಷ್ಟಿಸಬೇಕು. ಗುರುಭವನ ನಿರ್ಮಾಣಕ್ಕೆ ಸಹಕಾರ ನೀಡುತ್ತೇವೆ. ಈಗಾಗಲೇ ಲೋಕೋಪಯೋಗಿ ಇಲಾಖೆ ಹಳೆ ಕಟ್ಟಡಗಳ ತೆರವಿಗೆ ಮುಂದಾಗಿದ್ದು, ಶೀಘ್ರವೇ ಕಾಮಗಾರಿ ಆರಂಭಿಸುತ್ತೇವೆ’ ಎಂದು ತಿಳಿಸಿದರು.

‘ಶಾಲೆಗಳಲ್ಲಿ ಮಕ್ಕಳಿಲ್ಲದೆ ಶಿಕ್ಷಕರ ಮೊಗದಲ್ಲಿ ಮಂದಹಾಸವಿಲ್ಲ. ವಿದ್ಯಾರ್ಥಿಗಳ ಸಾಧನೆಯ ಚಿಂತೆಯಲ್ಲಿರುವ ಶಿಕ್ಷಕ ವೃತ್ತಿಯ ಘನತೆ ಹೆಚ್ಚಿನದು. ಗುರುವಿನ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಪೋಷಕರು ಮಕ್ಕಳನ್ನು ಸ್ವಇಚ್ಛೆಯಿಂದ ಸರ್ಕಾರಿ ಶಾಲೆಗಳಿಗೆ ಸೇರಿಸುವ ವಾತಾವರಣ ಸೃಷ್ಟಿಸಬೇಕು. ಖಾಸಗಿ ಶಾಲಾ ವ್ಯಾಮೋಹ ದೂರ ಮಾಡಿ ಸರ್ಕಾರಿ ಶಾಲೆಗಳನ್ನು ಉಳಿಸಲು ಶಿಕ್ಷಕರು ಬದ್ಧತೆಯಿಂದ ಕೆಲಸ ಮಾಡಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಕಿವಿಮಾತು ಹೇಳಿದರು.

ಸಂಸ್ಕಾರ ಕಲಿಸಿ: ‘ಮುಂದಿನ ವರ್ಷದಿಂದ ಉತ್ತಮ ಶಿಕ್ಷಕರ ಆಯ್ಕೆಯಲ್ಲಿ ಜಿಲ್ಲೆಯ ಒಬ್ಬ ಶಿಕ್ಷಕರಿಗೆ ₹ 50 ಸಾವಿರ ಬಹುಮಾನ ನೀಡುತ್ತೇನೆ. ವಿದ್ಯಾವಂತರೆಲ್ಲಾ ಬುದ್ಧಿವಂತರಲ್ಲ. ವಿದ್ಯೆಯ ಜತೆಗೆ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಅಕ್ಷರದ ಜತೆಗೆ ಇತರೆ ಚಟುವಟಿಕೆಗಳ ಬೋಧನೆಯೂ ಆಗಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಸಲಹೆ ನೀಡಿದರು.

‘ರಾಜ್ಯ ಸರ್ಕಾರ ಇದೀಗ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಕ್ಕೆ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ. ಕೇವಲ ಅಂಕ ಗಳಿಕೆಗೆ ಕಲಿಕೆ ಬೇಡ. ಮಕ್ಕಳ ಪ್ರತಿಭೆಗೆ ತಕ್ಕಂತೆ ವಿವಿಧ ಚಟುವಟಿಕೆ ಕಲಿಸಬೇಕು’ ಎಂದು ತಿಳಿಸಿದರು.

57 ಮಂದಿ ನಿವೃತ್ತ ಶಿಕ್ಷಕರು ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ 18 ಶಿಕ್ಷಕರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ಡಿಡಿಪಿಐ ಕೆ.ಎಂ.ಜಯರಾಮರೆಡ್ಡಿ, ಶಿಕ್ಷಣಾಧಿಕಾರಿಗಳಾದ ಎ.ಎನ್.ನಾಗೇಂದ್ರಪ್ರಸಾದ್, ಸಿ.ಆರ್.ಅಶೋಕ್, ಬಿಇಒ ನಾಗರಾಜಗೌಡ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು