ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ: ವರಿಷ್ಠರ ಮೆಚ್ಚಿಸಲು ಮೆರವಣಿಗೆ

ನಳಿನ್‌ಕುಮಾರ್‌ ಕಟೀಲ್‌ ಆಕ್ಷೇಪವಿತ್ತು: ಬಿಜೆಪಿ ಮೂಲಗಳ ಮಾಹಿತಿ
Last Updated 5 ಜನವರಿ 2020, 13:55 IST
ಅಕ್ಷರ ಗಾತ್ರ

ಕೋಲಾರ: ಪೌರತ್ವ (ತಿದ್ದುಪಡಿ) ಕಾಯ್ದೆ ಬೆಂಬಲಿಸಿ ಬಿಜೆಪಿ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನಾಂದೋಲನ ಕಾರ್ಯಕ್ರಮಕ್ಕೆ ಬಂದಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರು ಬಹಿರಂಗ ಸಭೆಗೂ ಮುನ್ನ ಮೆರವಣಿಗೆ ನಡೆಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ಅಧಿಕಾರಿಗಳು ಬಹಿರಂಗ ಸಭೆಗೂ ಮುನ್ನ ಪ್ರವಾಸಿ ಮಂದಿರದಲ್ಲಿದ್ದ ನಳಿನ್‌ಕುಮಾರ್‌ ಕಟೀಲ್‌ ಅವರನ್ನು ಭೇಟಿಯಾಗಿ ಪರಿಸ್ಥಿತಿ ವಿವರಿಸಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮೆರವಣಿಗೆ ನಡೆಸದಂತೆ ಮನವಿ ಮಾಡಿದ್ದರು. ಮೆರವಣಿಗೆ ನಿರ್ಧಾರ ಕೈಬಿಡಲು ಕಾರ್ಯಕರ್ತರ ಮನವೊಲಿಸುವಂತೆಯೂ ಅಧಿಕಾರಿಗಳು ಕಟೀಲ್‌ ಅವರನ್ನು ಕೋರಿದ್ದರು ಎಂದು ಮೂಲಗಳು ಹೇಳಿವೆ.

ಅಧಿಕಾರಿಗಳ ಮನವಿಗೆ ಪೂರಕವಾಗಿ ಕಟೀಲ್‌ ಅವರು ಬಿಜೆಪಿ ಸ್ಥಳೀಯ ಮುಖಂಡರಿಗೆ ಮೆರವಣಿಗೆ ನಡೆಸದಂತೆ ಸೂಚಿಸಿದ್ದರು. ಆದರೆ, ಪಕ್ಷದ ಕೆಲ ಮುಖಂಡರು ಕಟೀಲ್‌ ಮತ್ತು ಕಂದಾಯ ಸಚಿವ ಆರ್‌.ಅಶೋಕ್‌ ಅವರನ್ನು ಮೆಚ್ಚಿಸುವ ಉದ್ದೇಶಕ್ಕಾಗಿ ಮೆರವಣಿಗೆ ವಿಚಾರವನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ಪರಿಗಣಿಸಿ ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರಿಗೆ ಮೆರವಣಿಗೆ ನಡೆಸುವಂತೆ ಪ್ರಚೋದನೆ ನೀಡಿದರು ಎಂದು ಗೊತ್ತಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಸೂಚಿಸಿದಂತೆ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಬಹಿರಂಗ ಸಭೆ ಆಯೋಜಿಸಬೇಕೆಂದು ಸಂಸದ ಮುನಿಸ್ವಾಮಿ ಹಾಗೂ ಪಕ್ಷದ ಸ್ಥಳೀಯ ಮುಖಂಡರಿಗೆ ಕಾರ್ಯಕ್ರಮಕ್ಕೂ ಮುನ್ನವೇ ಸ್ಪಷ್ಟ ನಿರ್ದೇಶನ ಕೊಟ್ಟಿದ್ದರು. ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶದಲ್ಲಿ ಮೆರವಣಿಗೆ ನಡೆಸುವುದಾದರೆ ಕಾರ್ಯಕ್ರಮವನ್ನೇ ರದ್ದುಪಡಿಸುವಂತೆ ಯಡಿಯೂರಪ್ಪ ಸೂಚಿಸಿದ್ದರು ಎಂದು ಪಕ್ಷದ ಮೂಲಗಳು ಹೇಳಿವೆ.

1 ಸಾವಿರ ಪೊಲೀಸ್‌

ಶನಿವಾರದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಬಿಗುವಿನ ಪರಿಸ್ಥಿತಿಯಿದ್ದು, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಇಬ್ಬರು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, 9 ಡಿವೈಎಸ್ಪಿ, 26 ಇನ್‌ಸ್ಪೆಕ್ಟರ್‌, 48 ಎಸ್‌ಐಗಳು ಸೇರಿದಂತೆ ಸುಮಾರು 1 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ರಾಜ್ಯ ಮೀಸಲು ಪೊಲೀಸ್‌ ಪಡೆಯ 8 ತುಕಡಿ ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ 3 ತುಕಡಿಗಳು, ಗೃಹರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT