ಶನಿವಾರ, ಜನವರಿ 25, 2020
28 °C
ಪ್ರತಿಭಟನೆಗೆ ಬಲ ತುಂಬಿದ ಕಾಂಗ್ರೆಸ್‌– ಜೆಡಿಎಸ್‌ ಮುಖಂಡರು

ಸಿಎಎ–ಎನ್‌ಆರ್‌ಸಿ ವಿರುದ್ಧ ಹೋರಾಟ ತೀವ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಪೌರತ್ವ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ನೋಂದಣಿ ಪ್ರಕ್ರಿಯೆ (ಎನ್‌ಆರ್‌ಸಿ) ವಿರುದ್ಧ ಜಿಲ್ಲೆಯಲ್ಲೂ ಹೋರಾಟ ತೀವ್ರಗೊಂಡಿದ್ದು, ಮುಸ್ಲಿಂ ಸಮುದಾಯದವರು, ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಇಲ್ಲಿ ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿದರು.

ಅಮ್ಮವಾರಿಪೇಟೆ ವೃತ್ತದಲ್ಲಿ ಜಮಾಯಿಸಿದ ಸಾವಿರಾರು ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ವಿವಿಧೆಡೆಯಿಂದ ಮೆರವಣಿಗೆ ಬಂದ ಮುಸ್ಲಿಂ ಸಮುದಾಯದವರು ಕಪ್ಪುಪಟ್ಟಿ ಧರಿಸಿ ಸಿಎಎ ವಿರುದ್ಧ ಕಿಡಿಕಾರಿದರು.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು, ನಗರಸಭಾ ಸದಸ್ಯರು, ಮಾಜಿ ಶಾಸಕರು ಸೇರಿದಂತೆ ರಾಜಕೀಯ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಬಲ ತುಂಬಿದರು. ಕರ್ನಾಟಕ ಪ್ರಾಂತ ರೈತ ಸಂಘ, ದಲಿತಪರ, ಸಿಪಿಎಂ, ಭೀಮಸೇನೆ ಸೇರಿದಂತೆ ಹಲವು ಸಂಘಟನೆಗಳ ಸದಸ್ಯರು ಹೋರಾಟಕ್ಕೆ ಕೈಜೋಡಿಸಿದರು.

ಗದಾ ಪ್ರಹಾರ: ‘ಕೇಂದ್ರ ಸರ್ಕಾರ ಪ್ರತಿ ಹಂತದಲ್ಲೂ ಬಡವರ, ದಲಿತರ, ಅಲ್ಪಸಂಖ್ಯಾತರ ಮೇಲೆ ಗದಾ ಪ್ರಹಾರ ನಡೆಸುತ್ತಿದೆ. ಕೇಂದ್ರವು ಸಾಧಕ ಬಾಧಕದ ಬಗ್ಗೆ ಚರ್ಚಿಸದೆ ತರಾತುರಿಯಲ್ಲಿ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದಿದೆ’ ಎಂದು ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ದೂರಿದರು.

‘ಸಂವಿಧಾನದಡಿ ಜಾರಿಯಾಗಿರುವ ಕಾನೂನುಗಳನ್ನು ದುರ್ಬಲಗೊಳಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಬಿಜೆಪಿಯ ನಾಯಕರು ಅಂಬೇಡ್ಕರ್‌ ಆಶಯಗಳನ್ನು ಮಣ್ಣು ಪಾಲು ಮಾಡಲು ಹೊರಟಿದ್ದಾರೆ. ಜಾತಿ, ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸಿ ವಿಷ ಬೀಜ ಬಿತ್ತುತ್ತಿದ್ದಾರೆ’ ಎಂದು ಗುಡುಗಿದರು.

‘ದೇಶದಲ್ಲಿ ಪ್ರತಿಯೊಬ್ಬರೂ ಸಮಾನತೆಯಿಂದ ಜೀವನ ನಡೆಸಬೇಕು ಎಂಬುದು ಸಂವಿಧಾನ ಮೂಲ ಉದ್ದೇಶ. ಅಂಬೇಡ್ಕರ್ ಒಂದೇ ದಿನದಲ್ಲಿ ಸಂವಿಧಾನ ರಚಿಸಿಲ್ಲ. ತಜ್ಞರೊಂದಿಗೆ ಚರ್ಚಿಸಿ ಭವಿಷ್ಯದ ಹಿತದೃಷ್ಟಿಯಿಂದ ಹಾಗೂ ಮುಂದಾಲೋಚನೆ ಇಟ್ಟುಕೊಂಡು ರಚನೆ ಮಾಡಿದ್ದಾರೆ. ಈ ಜ್ಞಾನ ಇಲ್ಲದವರು ಕಾಯ್ದೆಗಳಿಗೆ ತಿದ್ದುಪಡಿ ಮಾಡುತ್ತಿದ್ದಾರೆ. ಹೋರಾಟದ ಮೂಲಕ ಕೇಂದ್ರಕ್ಕೆ ಬಿಸಿ ಮುಟ್ಟಿಸಬೇಕು' ಎಂದು ಎಚ್ಚರಿಸಿದರು.

‘ಮುಸ್ಲಿಮರು ಎಂದಿಗೂ ಸಮಾಜದಲ್ಲಿ ಶಾಂತಿ ಕದಡಿಲ್ಲ. ಕಾಲಕ್ಕೆ ತಕ್ಕಂತೆ ಪ್ರತಿ ಧರ್ಮದವರು ಬದಲಾಗುತ್ತಿದ್ದಾರೆ. ಜನ ವಿರೋಧಿ ಚಟುವಟಿಕೆ ವಿರುದ್ಧ ಹೋರಾಟ ನಡೆಸಿದರೆ ಬಿಜೆಪಿಯವರು ದೇಶದ್ರೋಹದ ಪಟ್ಟ ಕಟ್ಟುತ್ತಾರೆ. ಕೇಂದ್ರವು ಪೌರತ್ವ ಕಾಯ್ದೆ ತಿದ್ದುಪಡಿ ನಿರ್ಧಾರವನ್ನು ಕೈಬಿಡಬೇಕು’ ಎಂದು ಎಚ್ಚರಿಕೆ ನೀಡಿದರು.

ಒಗ್ಗೂಡಬೇಕು: ‘ಭಾರತವು ವೈವಿಧ್ಯತೆಯಿಂದ ಕೂಡಿದ ರಾಷ್ಟ್ರವಾಗಿದೆ. ಸಂವಿಧಾನದ ಆಶಯದಂತೆ ಬದುಕುವ ವಾತಾವರಣ ತರಬೇಕು. ಜಾತ್ಯಾತೀತ ರಾಷ್ಟ್ರದಲ್ಲಿ ಎಲ್ಲರಿಗೂ ಸಮಾನ ಅವಕಾಶವಿದೆ. ಸಂವಿಧಾನ ಮತ್ತು ಅದರ ಆಶಯಗಳನ್ನು ಉಳಿಸಲು ಎಲ್ಲರೂ ಒಗ್ಗೂಡಬೇಕು’ ಎಂದು ಕೆಪಿಆರ್‌ಎಸ್‌ ರಾಜ್ಯ ಘಟಕದ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಸಲಹೆ ನೀಡಿದರು.

‘ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದಾಗ ಸಾಕಷ್ಟು ಹೋರಾಟ ನಡೆಯಿತು. ಆ ಹೋರಾಟದಲ್ಲಿ ಹಲವರು ಪ್ರಾಣ ಕಳೆದುಕೊಂಡರು. ಸಿಎಎ, ಎನ್‍ಆರ್‌ಸಿಯ ದುಷ್ಪರಿಣಾಮದ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ಕಾಯ್ದೆ ಹಿಂಪಡೆಯುವವರೆಗೂ ಹೋರಾಟ ನಡೆಸಬೇಕು’ ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷೆ ವಿ.ಗೀತಾ ಹೇಳಿದರು.

ಶಾಸಕರಾದ ಕೆ.ಶ್ರೀನಿವಾಸಗೌಡ, ಎಸ್.ಎನ್.ನಾರಾಯಣಸ್ವಾಮಿ, ವಿಧಾನ ಪರಿಷತ್‌ ಸದಸ್ಯ ನಸೀರ್‌ ಅಹಮ್ಮದ್‌, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಮಾಜಿ ಶಾಸಕ ವರ್ತೂರು ಆರ್.ಪ್ರಕಾಶ್, ಮಾಜಿ ಶಾಸಕ ನಿಸಾರ್‌ ಅಹಮ್ಮದ್‌, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್‌.ನಂಜುಂಡಪ್ಪ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ, ನಿರ್ದೇಶಕ ಎಂ.ಎಲ್‌.ಅನಿಲ್‌ಕುಮಾರ್‌, ನಗರಸಭೆ ಸದಸ್ಯ ಬಿ.ಎಂ.ಮುಬಾರಕ್‌, ಜಿಲ್ಲಾ ಅಂಜುಮಾನ್‌ ಇಸ್ಲಾಮಿಯಾ ಸಂಘಟನೆ ಅಧ್ಯಕ್ಷ ಜಮೀರ್‌ ಅಹಮ್ಮದ್‌ ಪಾಲ್ಗೊಂಡಿದ್ದರು,

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು