ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಲ್ಕ ಹೆಚ್ಚಳ ವಿರೋಧಿಸಿ ಪ್ರತಿಭಟನೆ

ಖಾಸಗಿ ಶಾಲೆಗಳ ವಿರುದ್ಧ ಕ್ರಮಕ್ಕೆ ರೈತ ಸಂಘದ ಮುಖಂಡರ ಆಗ್ರಹ
Last Updated 2 ಜುಲೈ 2021, 4:30 IST
ಅಕ್ಷರ ಗಾತ್ರ

ಮುಳಬಾಗಿಲು: ಕಳೆದ ಎರಡು ವರ್ಷಗಳಿಂದ ಕೋವಿಡ್ ಮಹಾಮಾರಿಗೆ ದೇಶದೆಲ್ಲೆಡೆ ಜನಜೀವನ ಹದಗೆಟ್ಟಿದೆ. ಈ ನಡುವೆಯೇ ಖಾಸಗಿ ಶಾಲೆಗಳಲ್ಲಿ ಈ ವರ್ಷವೂಶುಲ್ಕ ಹೆಚ್ಚಿಸಿರುವುದು ತೀವ್ರ ತೊಂದರೆಯಾಗಿದೆ ಎಂದು ಆರೋ‍ಪಿಸಿ ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಬುಧವಾರ ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಯಿತು.

ಬಳಿಕ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಶೇ 70ರಷ್ಟು ಬೋಧನಾ ಶುಲ್ಕವನ್ನು ಪೋಷಕರಿಂದ ಪಡೆಯಬೇಕೆಂದು ಸರ್ಕಾರ ಆದೇಶ ಮಾಡಿದೆ. ಖಾಸಗಿ ಶಾಲೆಗಳು ಈ ಆದೇಶವನ್ನು ಗಾಳಿಗೆ ತೂರಿ ಕಳೆದ ವರ್ಷಕ್ಕಿಂತ ಈ ವರ್ಷ ಶೇಕಡ 50ರಷ್ಟು ಹೆಚ್ಚು ಶುಲ್ಕವನ್ನು ಪಾಲಕರಿಂದ ಪಡೆಯುತ್ತಿವೆ. ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಖಾಸಗಿ ಶಾಲೆಗಳ ಪರವಾಗಿ ಕೆಲಸ ನಿರ್ವಹಿಸುತ್ತಿದ್ದು, ಯಾವುದೇ ಶಾಲೆ ವಿರುದ್ಧ ಕಾನೂನು ಕ್ರಮಕೈಗೊಂಡಿಲ್ಲ ಎಂದು ದೂರಿದರು.

ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದರೂ ಯಾವುದೇ ಪ್ರಯೋಜವಿಲ್ಲ. ಡಿಡಿಪಿಐಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ. ನಗರದ ಶಾಲೆಯೊಂದರ ವಿರುದ್ಧ ದೂರು ನೀಡಿದ ಪಾಲಕರ ಮಕ್ಕಳ ವರ್ಗಾವಣೆ ಪತ್ರ ತೆಗೆದುಕೊಂಡು ಹೋಗಿ ಎಂದು ವಿಡಿಯೊ ಮೂಲಕ ಪಾಲಕರಿಗೆ ಹೇಳಿದ್ದಾರೆ ಎಂದು ಆರೋಪಿಸಿದರು.

ಖಾಸಗಿ ಶಾಲೆಗಳಿಗೆ 80ರಷ್ಟು ಶುಲ್ಕ ಪಾವತಿಸಿದ್ದರೂ ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಲ್ಲ. ಸರ್ಕಾರದ ಆದೇಶದಂತೆ ಶುಲ್ಕದ ವಿವರವನ್ನು ಶಾಲೆಯ ಮುಂಭಾಗದಲ್ಲಿ ಪ್ರಕಟಿಸುವಂತೆ ತಿಳಿಸಿದ್ದರೂ ತಾಲ್ಲೂಕಿನಾದ್ಯಂತ ಯಾವುದೇ ಖಾಸಗಿ ಶಾಲೆಯಲ್ಲಿ ಶುಲ್ಕದ ವಿವರ ನಮೂದಿಸಿರುವುದಿಲ್ಲ. ಪ್ರತಿವರ್ಷವೂ ಪಠ್ಯಕ್ರಮ ಬದಲಾಯಿಸುತ್ತಿರುವುದು ಕಾನೂನುಬಾಹಿರವಾಗಿದೆ. ಮನ ಬಂದಂತೆ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಶೀಘ್ರವೇ, ಖಾಸಗಿ ಶಾಲೆಗಳ ಶುಲ್ಕದ ಬಗ್ಗೆ ಕ್ರಮಕೈಗೊಳ್ಳದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ಕೆ.ಎನ್. ರಾಜಶೇಖರ್ ಪ್ರತಿಕ್ರಿಯಿಸಿ, ‘ಜಿಲ್ಲಾಧಿಕಾರಿಗೆ ಕೂಡಲೇ ಪತ್ರ ಬರೆದು ಸೂಕ್ತ ಕ್ರಮ ಜರುಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಉಪಾಧ್ಯಕ್ಷ ನಂದಕುಮಾರ್, ಜಿಲ್ಲಾ ಕಾರ್ಯಾಧ್ಯಕ್ಷ ಗಣೇಶ್, ನಗರ ಘಟಕದ ಅಧ್ಯಕ್ಷ ಶ್ರೀನಾಥ್, ಪೋಷಕರಾದ ವಿಶ್ವನಾಥ್, ಸುರೇಶ್, ನಾಗೇಶ್, ಸುಮಂತ್‌ ಗೌಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT