ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಾತ್ಮಕ ಫಲಿತಾಂಶದಲ್ಲಿ ಕೋಲಾರ ಜಿಲ್ಲೆ ಪ್ರಥಮ ಸ್ಥಾನಕ್ಕೇರಲಿ: ಡಿಡಿಪಿಐ

ಎಸ್ಸೆಸ್ಸೆಲ್ಸಿ ಪ್ರಶ್ನೋತ್ತರ ಕೋಠಿ ತಯಾರಿಕೆ ಕಾರ್ಯಾಗಾರದಲ್ಲಿ ಡಿಡಿಪಿಐ ಕೃಷ್ಣಮೂರ್ತಿ ಕಿವಿಮಾತು
Last Updated 4 ಮಾರ್ಚ್ 2021, 11:42 IST
ಅಕ್ಷರ ಗಾತ್ರ

ಕೋಲಾರ: ‘ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಗುಣಾತ್ಮಕತೆ ಬದಲಾವಣೆ ತರುವ ನಿಟ್ಟಿನಲ್ಲಿ ‘ನನ್ನನ್ನೊಮ್ಮೆ ಗಮನಿಸಿ’ ಪ್ರಶ್ನೋತ್ತರ ಕೋಠಿ ಸಿದ್ಧಪಡಿಸಿ. ಜಿಲ್ಲೆ ಈ ಬಾರಿ ಫಲಿತಾಂಶ ಮತ್ತು ಗುಣಾತ್ಮಕತೆಯಲ್ಲಿ ಪ್ರಥಮ ಸ್ಥಾನಕ್ಕೆ ಬರಬೇಕು’ ಎಂದು ಡಿಡಿಪಿಐ ಕೃಷ್ಣಮೂರ್ತಿಕಿವಿಮಾತು ಹೇಳಿದರು.

ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ತಾಲ್ಲೂಕಿನ ಕೆಂಬೋಡಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ನನ್ನನ್ನೊಮ್ಮೆ ಗಮನಿಸಿ’ ಪ್ರಶ್ನೋತ್ತರ ಕೋಠಿ ತಯಾರಿಕೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಹಿಂದಿನ ವರ್ಷ ಕೋವಿಡ್ ಸಂಕಷ್ಟದಲ್ಲೂ ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 5ನೇ ಹಾಗೂ ಗುಣಾತ್ಮಕತೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದುಕೊಂಡಿತು. ಈ ಗೌರವಕ್ಕೆ ಚ್ಯುತಿ ಬಾರದಂತೆ ಎಚ್ಚರ ವಹಿಸಿ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಕನಿಷ್ಠ ತೇರ್ಗಡೆಯಾಗುವಷ್ಟು ಅಂಕ ಗಳಿಸಲು ಅನುಕೂಲವಾಗುವಂತೆ ಪ್ರಶ್ನೆಕೋಠಿ ಸಿದ್ಧಪಡಿಸಿ ಮತ್ತು ಇದನ್ನು ಶಾಲೆಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಿ’ ಎಂದು ಸೂಚಿಸಿದರು.

‘ಈ ಬಾರಿ ಕೋವಿಡ್ ಹಾಗೂ ಲಾಕ್‌ಡೌನ್‌ ಕಾರಣಕ್ಕೆ ಪಠ್ಯಕ್ರಮದಲ್ಲಿ ಶೇ 30ರಷ್ಟು ಕಡಿತಗೊಳಿಸಿ ಪ್ರೌಢ ಶಿಕ್ಷಣ ಮಂಡಳಿ ಆದೇಶ ಹೊರಡಿಸಿದೆ. ಇದನ್ನು ಗಮನಿಸಿ ಪ್ರಶ್ನೆಕೋಠಿ ಸಿದ್ಧಪಡಿಸಿ. ನನ್ನನ್ನೊಮ್ಮೆ ಗಮನಿಸಿ ಪ್ರಶ್ನೆಕೋಠಿಯಲ್ಲಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಪ್ರಶ್ನೆಪತ್ರಿಕೆಯ ನೀಲನಕ್ಷೆಗೆ ಅನುಗುಣವಾಗಿ ಮತ್ತು ಮಂಡಳಿ ನೀಡಿರುವ ಮಾದರಿ ಪ್ರಶ್ನೆಪತ್ರಿಕೆ ಹೋಲುವಂತೆ ಪ್ರಶ್ನೆಗಳು, ಉತ್ತರಗಳನ್ನು ಸಿದ್ಧಗೊಳಿಸಿ. ಕಠಿಣತೆ ಪ್ರಮಾಣ ಶೇ 10ರಷ್ಟು ಮಾತ್ರ ಇರಲಿ’ ಎಂದು ಸಲಹೆ ನೀಡಿದರು.

ಅನುಭವಿ ಶಿಕ್ಷಕರು: ‘ಪ್ರತಿ ಬಾರಿ ನನ್ನನ್ನೊಮ್ಮೆ ಗಮನಿಸಿ ಕೇವಲ ಸಂಭಾವ್ಯ ಪ್ರಶ್ನೆಗಳ ಕೋಠಿಯಾಗಿತ್ತು. ಆದರೆ, ಈ ಬಾರಿ ಪ್ರಶ್ನೆಗಳಿಗೆ ಉತ್ತರವನ್ನೂ ಸಿದ್ಧಪಡಿಸಿ ಮಕ್ಕಳಿಗೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಕಾರ್ಯಕ್ಕೆ ಅನುಭವಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ’ ಎಂದು ಜಿಲ್ಲಾ ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ವಿವರಿಸಿದರು.

‘ಈ ಬಾರಿ ಅಭ್ಯಾಸದಲ್ಲಿನ ಪ್ರಶ್ನೆಗಳನ್ನೇ ಕೇಳುವುದರಿಂದ ಹೆಚ್ಚು ಗಮನಹರಿಸಿ. ವಾರದೊಳಗೆ ಪ್ರಶ್ನೆ, ಉತ್ತರಗಳ ಕೋಠಿ ಸಿದ್ಧಗೊಳ್ಳಬೇಕು. ಪ್ರಶ್ನೆಗಳು ನೇರ ಮತ್ತು ಸರಳವಾಗಿರಲಿ. ಧ್ವಂಧ್ವ ಉತ್ತರಗಳಿಗೆ ಅವಕಾಶ ನೀಡದಿರಿ. ನೀಲನಕ್ಷೆಯಂತೆ ಯಾವ ಅಧ್ಯಾಯದಲ್ಲಿ ಯಾವ ರೀತಿಯ ಪ್ರಶ್ನೆ ಕೇಳಲು ಅವಕಾಶವಿದೆಯೋ ಅದೇ ಮಾದರಿ ಪ್ರಶ್ನೆಪತ್ರಿಕೆ ರೂಪಿಸಿ. ಪ್ರಶ್ನೆಪತ್ರಿಕೆ ಮಕ್ಕಳಿಗೆ ಮುಖ್ಯ ಪರೀಕ್ಷೆಗೆ ನೆರವಾಗುವಂತಿರಲಿ’ ಎಂದರು.

ವ್ಯಾಕರಣಾಂಶ ಪಟ್ಟಿ: ‘ಭಾಷಾ ಶಿಕ್ಷಕರು ಅಧ್ಯಾಯವಾರು ಪ್ರಶ್ನೆಪತ್ರಿಕೆ ತಯಾರಿಸಿದ ನಂತರ ಭಾಷಾ ವಿಷಯಕ್ಕೆ ಸಂಬಂಧಿಸಿದ ಪ್ರಮುಖ ವ್ಯಾಕರಣಾಂಶ ಪಟ್ಟಿ ಮಾಡಿ. ವಿಜ್ಞಾನ ವಿಷಯದಲ್ಲಿ ಚಿತ್ರಗಳು, ರಾಸಾಯನಿಕ ಸಮೀಕರಣ, ಗಣಿತದಲ್ಲಿ ಸೂತ್ರಗಳನ್ನು ಪಟ್ಟಿ ಮಾಡಿ’ ಎಂದು ತಿಳಿಸಿದರು.

ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ಕೃಷ್ಣಪ್ಪ, ಇಸಿಒ ಸಿರಾಜುದ್ದೀನ್, ವಿವಿಧ ಶಾಲೆಗಳ ವಿಷಯವಾರು ಶಿಕ್ಷಕರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT