ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಸಾರ್ಟ್‌ನಲ್ಲಿ ವೇಶ್ಯಾವಾಟಿಕೆ: ನಾಲ್ವರ ಬಂಧನ, ₹2 ಕೋಟಿ ಮೌಲ್ಯದ 10 ಕಾರು ವಶ

Published 26 ಜೂನ್ 2023, 13:55 IST
Last Updated 26 ಜೂನ್ 2023, 13:55 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕರ್ನಾಟಕ–ಆಂಧ್ರ ಗಡಿ ಭಾಗದ ರಾಕ್‌ ವ್ಯಾಲಿ ರೆಸಾರ್ಟ್‌ನಲ್ಲಿ ನಡೆಯುತ್ತಿದ್ದ ಹೈಟೆಕ್‌ ವೇಶ್ಯಾವಾಟಿಕೆ ಅಡ್ಡೆ ಮೇಲೆ ಭಾನುವಾರ ಮಧ್ಯರಾತ್ರಿ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.

ಮೂವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಶೋಧ ಕಾರ್ಯ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಆರು ಮಹಿಳೆಯನ್ನು ರಕ್ಷಿಸಲಾಗಿದೆ.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ, ‘ಈ ಮಹಿಳೆಯರನ್ನು ಹೈದರಾಬಾದ್‌ ಮೂಲದ ವಿಜಯ್‌ ಎಂಬಾತ ಆಂಧ್ರದ ವಿವಿಧೆಡೆಯಿಂದ ಕರೆತಂದು ರೆಸ್ಟೋರೆಂಟ್‌ ಮಾಲೀಕರೊಂದಿಗೆ ಸೇರಿ ವೇಶ್ಯಾವಾಟಿಕೆ ನಡೆಸುತ್ತಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ 14 ಜನರನ್ನು ವಶಕ್ಕೆ ಪಡೆದು ತನಿಖೆಗೊಳಪಡಿಸಿದೆವು. ರೆಸ್ಟೋರೆಂಟ್‌ ಮಾಲೀಕ, ಮ್ಯಾನೇಜರ್‌, ಸಪ್ಲೈಯರ್‌, ರಿಸೆಪ್ಷನಿಸ್ಟ್‌ ಹಾಗೂ ಮಹಿಳೆಯರನ್ನು ಕರೆತಂದಿದ್ದ ಏಜೆಂಟ್‌ ಸೇರಿದಂತೆ 7 ಮಂದಿ ವಿರುದ್ಧ ಕೋಲಾರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಏಜೆಂಟ್‌ ವಿಜಯ್‌, ಮಂಜುನಾಥ್‌, ಆಂಜಪ್ಪ, ಸತೀಶ್‌ ಎಂಬುವರನ್ನು ಬಂಧಿಸಿದ್ದು, ರೆಸ್ಟೋರೆಂಟ್‌ ಮಾಲೀಕ ಚಂದ್ರಹಾಸ ಸೇರಿದಂತೆ ಮೂವರು ತಲೆಮರೆಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯ ವಶಕ್ಕೆ ಒಪ್ಪಿಸಲಾಗಿದೆ’ ಎಂದರು.

‘ದಾಳಿ ವೇಳೆ ₹ 5,56,300 ನಗದು, ಸುಮಾರು ₹ 2 ಕೋಟಿ ಮೌಲ್ಯದ 10 ಐಷಾರಾಮಿ ಕಾರುಗಳು ಹಾಗೂ 14 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಮಾನವ ಕಳ್ಳಸಾಗಣೆ ನಿಯಂತ್ರಣ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋಲಾರ ಮಹಿಳಾ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಭೈರ ನೇತೃತ್ವದಲ್ಲಿ ವಿಶೇಷ ತಂಡ ದಾಳಿ ನಡೆಸಿದೆ. ನಂಗಲಿ ಪೊಲೀಸ್‌ ಠಾಣಾ ವ್ಯಾಪ್ತಿಯ ಬೈರಾಕೂರು ಹೋಬಳಿ ಎಚ್‌.ಬೈಯಪ್ಪನಹಳ್ಳಿ ಗ್ರಾಮ ವ್ಯಾಪ್ತಿಯ ಸುಮಾರು ಏಳೆಂಟು ಎಕರೆ ಪ್ರದೇಶದಲ್ಲಿ ಈ ರೆಸಾರ್ಟ್‌ ಇದೆ. ಆವರಣದಲ್ಲಿರುವ ರಾಕ್‌ ವ್ಯಾಲಿ ಬಾರ್‌ ಅಂಡ್‌ ರೆಸ್ಟೋರೆಂಟ್‌ ಕಟ್ಟಡದ ಕೊಠಡಿಗಳಲ್ಲಿ ಮಹಿಳೆಯರನ್ನು ಇರಿಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಲಾಗಿದೆ’ ಎಂದು ತಿಳಿಸಿದರು.

‘ಇಲ್ಲಿ ವೇಶ್ಯಾವಾಟಿಕೆ ಜೊತೆಗೆ ಡ್ಯಾನ್ಸ್‌ ಹಾಗೂ ಮೋಜು ಮಸ್ತಿ ನಡೆಯುತಿತ್ತು. ವಿಜಯವಾಡ, ಚಿತ್ತೂರು, ವಿಶಾಖಪಟ್ಟಣದಿಂದ ಮಹಿಳೆಯರನ್ನು ಕರೆತರಲಾಗಿತ್ತು. ಇವರಲ್ಲಿ ರೆಸ್ಟೋರೆಂಟ್‌ ಮಾಲೀಕ ಚಂದ್ರಹಾಸ ಕಿಂಗ್‌ಪಿನ್‌. ಸತೀಶ್‌ ಎಂಬಾತ ಪಾರ್ಟಿ ಆಯೋಜಿಸಿದ್ದ. ಮಹಿಳೆಯರೆಲ್ಲಾ ಸುಮಾರು 20, 21, 24, 30 ವರ್ಷ ವಯಸ್ಸಿನವರು. ಅವರನ್ನು ಸಖಿ ಕೇಂದ್ರದಲ್ಲಿ ಇರಿಸಲಾಗಿದೆ’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT