ಬುಧವಾರ, ಜನವರಿ 29, 2020
29 °C
ನುಡಿ ನಮನ ಕಾರ್ಯಕ್ರಮ

ಜನರಲ್ಲಿ ಭಾಷಾ ಕಾಳಜಿ ಮೂಡಿಸಿ: ಜಿಲ್ಲಾಧಿಕಾರಿ ಮಂಜುನಾಥ್‌ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಗಡಿ ಜಿಲ್ಲೆ ಕೋಲಾರದಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿರಂತವಾಗಿ ಕಾರ್ಯ ಚಟುವಟಿಕೆ ನಡೆಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡುತ್ತದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ಸಾಹಿತಿಗಳಾದ ದಿವಂಗತ ಕೆ.ಬಿ.ಸಿದ್ದಯ್ಯ ಹಾಗೂ ಚನ್ನಣ್ಣ ವಾಲೀಕಾರ ಅವರ ಸ್ಮರಣಾರ್ಥ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌, ದಲಿತ ಸಾಹಿತ್ಯ ಪರಿಷತ್ತು ಮತ್ತು ಆದಿಮ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಜಿಲ್ಲೆಯ ಸಾಂಸ್ಕೃತಿಕ ಕೇಂದ್ರಗಳು ಹೋರಾಟದ ಹಿನ್ನೆಲೆಯಿಂದ ಬಂದಿವೆ. ಸಮಾಜದ ಬದಲಾವಣೆಯಲ್ಲಿ ಆದಿಮ ಸಾಂಸ್ಕೃತಿಕ ಕೇಂದ್ರದ ಪಾತ್ರ ನಿರ್ಣಾಯಕವಾಗಿದೆ. ಕೇಂದ್ರಕ್ಕೆ ಮತ್ತಷ್ಟು ಜಮೀನು ನೀಡಿ ಅಭಿವೃದ್ಧಿಪಡಿಸಿ ಸಾಹಿತ್ಯಾಸಕ್ತರಿಗೆ ಅನೂಕೂಲ ಮಾಡಿಕೊಡುತ್ತೇವೆ’ ಎಂದು ಭರವಸೆ ನೀಡಿದರು.

‘ನಾಡಿನ ದಲಿತ ಹಾಗೂ ಬಂಡಾಯ ಸಾಹಿತಿಗಳ ವಿಚಾರವನ್ನು ಜಿಲ್ಲೆಯ ಸಾಹಿತ್ಯಾಸಕ್ತರಿಗೆ ತಲುಪಿಸಬೇಕಿದೆ. ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಿರಂತರವಾಗಿ ಚಟುವಟಿಕೆ ನಡೆಸಿ ಜನರಲ್ಲಿ ಭಾಷೆ ಮತ್ತು ನಾಡಿನ ಬಗ್ಗೆ ಕಾಳಜಿ ಮೂಡಿಸಬೇಕು’ ಎಂದು ಹೇಳಿದರು.

ಸಾಮಾಜಿಕ ಬದಲಾವಣೆ: ‘ದಲಿತ ಮತ್ತು ಬಂಡಾಯ ಸಾಹಿತಿಗಳು ತಮ್ಮ ಬದುಕು, ಸಮುದಾಯದಲ್ಲಿ ಅನುಭವಿಸಿದ ನೋವುಗಳಿಂದ ಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆ ತಂದರು. ಚಳವಳಿಯ ಇತಿಹಾಸ ಹಾಗೂ ಹೋರಾಟಗಳೇ ಇವರಿಗೆ ಸಂತೃಪ್ತಿ ನೀಡಿವೆ’ ಎಂದು ಆದಿಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಎನ್.ಮುನಿಸ್ವಾಮಿ ಅಭಿಪ್ರಾಯಪಟ್ಟರು.

‘ದೇಶದಲ್ಲಿ ಸಂವಿಧಾನದ ಆಶಯಕ್ಕೆ ತಕ್ಕಂತೆ ಆಡಳಿತ ನಡೆಸಬೇಕಾದವರು ಸಂವಿಧಾನವೇ ಇಲ್ಲದ ರೀತಿಯಲ್ಲಿ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿದ್ದಾರೆ. ದೇಶದಲ್ಲಿ ರಾಜಕೀಯ ಹಾಗೂ ಸಾಮಾಜಿಕ ಅರಾಜಕತೆ ಸೃಷ್ಟಿಯಾಗಿದೆ. ನೈತಿಕ ಚಳವಳಿಗಳು ನಾಶವಾಗಿವೆ. ದೇಶವನ್ನು ನ್ಯಾಯಬದ್ಧವಾಗಿ ಹೋರಾಟ ಮಾಡದ ಸ್ಥಿತಿಗೆ ತಂದಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಪಟ್ಟಭದ್ರ ಹಿತಾಸಕ್ತಿಗಳು ಸಮಾಜದಲ್ಲಿನ ನಿರಂತರ ಪ್ರಶ್ನೆ ಹಾಗೂ ಸಮಸ್ಯೆಗಳನ್ನು ಬಿಟ್ಟು ಭಾವನಾತ್ಮಕ ವಿಷಯಗಳನ್ನು ಜನರ ಮಧ್ಯೆ ತರುತ್ತಿವೆ. ಹೋರಾಟಗಾರರು ಕಾನೂನು ಚೌಕಟ್ಟಿನಲ್ಲಿ ಜನರನ್ನು ಜಾಗೃತಗೊಳಿಸಬೇಕು’ ಎಂದು ಕಿವಿಮಾತು ಹೇಳಿದರು.

ಗಟ್ಟಿ ಧ್ವನಿ: ‘ಸಿದ್ದಯ್ಯ ಹಾಗೂ ಚನ್ನಣ್ಣ ವಾಲೀಕಾರ ಅವರು ಬಂಡಾಯ ಮತ್ತು ದಲಿತ ಸಾಹಿತ್ಯದ ಗಟ್ಟಿ ಧ್ವನಿಯಾಗಿದ್ದರು. ಜತೆಗೆ ದಲಿತ ಚಳವಳಿ ಬೆಳಸಿದವರಲ್ಲಿ ಪ್ರಮುಖ ಪಾತ್ರ ವಹಿಸಿದರು. ಶೋಷಿತ ಸಮುದಾಯಗಳ ಏಳಿಗೆಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷರ್‌ ಅಧ್ಯಕ್ಷ ನಾಗನಂದ ಕೆಂಪರಾಜ್ ಸ್ಮರಿಸಿದರು.

ಕವಿ ವಡ್ಡಗೆರೆ ನಾಗರಾಜಯ್ಯ ಅವರು ಕೆ.ಬಿ.ಸಿದ್ದಯ್ಯರ ಮತ್ತು ಸಾಹಿತಿ ವಿ.ನಾಗರಾಜ್ ಅವರು ಚನ್ನಣ್ಣ ವಾಲೀಕಾರರ ಬದುಕು, -ಸಾಹಿತ್ಯ-, ಚಳವಳಿ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ಅಧ್ಯಕ್ಷ ಜ.ಮು.ಚಂದ್ರ, ಕವಿ ಶರಣಪ್ಪ ಗಬ್ಬೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕೋಶಾಧ್ಯಕ್ಷ ವೆಂಕಟಸ್ವಾಮಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು