ಕೋಲಾರ: ‘ನಾನು ಕಾಂಗ್ರೆಸ್‌ನಲ್ಲಿ ಇದ್ದೇನೆ, ಕೆ.ಎಚ್.ಮುನಿಯಪ್ಪ ಸಹ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಗಂಡಸು ಗಂಡಸು ಹೊಂದಾಣಿಕೆ ಮಾಡಿಕೊಂಡರೆ ಮಕ್ಕಳು ಆಗುತ್ತಾ?’ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ಪರೋಕ್ಷವಾಗಿ ಮುನಿಯಪ್ಪರ ಜತೆಗಿನ ಹೊಂದಾಣಿಕೆ ಸಾಧ್ಯತೆ ತಳ್ಳಿ ಹಾಕಿದರು.
ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನನಗೆ ಒಬ್ಬಳೇ ಹೆಂಡತಿ, ನಾನು ಬೇರೆ ಹೆಂಗಸಿನ ಜತೆ ಮಲಗುವುದಿಲ್ಲ. ಅದರಲ್ಲೂ ಗಂಡಸರ ಜತೆ ಮಲಗುವುದಿಲ್ಲ. ಪುರುಷ ಪ್ರಾಧಾನ್ಯತೆಯಲ್ಲಿ ನಂಬಿಕೆ ಇಲ್ಲದವನಲ್ಲ, ಹೆಣ್ಣು ಮಕ್ಕಳ ಸ್ವಾತಂತ್ರ್ಯವನ್ನು ಬಲವಾಗಿ ಗೌರವಿಸುತ್ತೇನೆ. ಸಂಸಾರದಲ್ಲಿ ಅವರೊಬ್ಬರು ಇವರೊಬ್ಬರು ಇದ್ದರೆ ಮಕ್ಕಳು ಆಗುತ್ತೆ’ ಎಂದು ಮುನಿಯಪ್ಪರ ವಿರುದ್ಧ ಮುನಿಸು ಹೊರ ಹಾಕಿದರು.
‘ಕ್ಷೇತ್ರದ ಜನರಿಂದ ಕಾಂಗ್ರೆಸ್ ತಿರಸ್ಕೃತಗೊಂಡಿದೆ. ಕಾಂಗ್ರೆಸ್ ಪಕ್ಷ ಜನರ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಜನರು ಮತ್ತೆ ಪಕ್ಷವನ್ನು ಸ್ವೀಕಾರ ಮಾಡಬೇಕಿದೆ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು. ಮುನಿಯಪ್ಪ ಅವರು ಸಹಕಾರ ಕೊಟ್ಟರೆ ಪಕ್ಷಕ್ಕಾಗಿ ಎಲ್ಲರೂ ಕೈ ಜೋಡಿಸಿ ಕೆಲಸ ಮಾಡುತ್ತೇವೆ’ ಎಂದರು.
ಶಕ್ತಿ ಹೆಚ್ಚುತ್ತದೆ: ‘ಕಾಂಗ್ರೆಸ್ ಒಂದು ದೊಡ್ಡ ಸಂಸ್ಥೆ. ಶಾಸಕ ಶ್ರೀನಿವಾಸಗೌಡರು ಈ ಸಂಸ್ಥೆ ಸೇರಲು ತೀರ್ಮಾನಿಸಿದ್ದರೆ ಸೇರುತ್ತಾರೆ. ಅವರು ಆಕಾಶದಿಂದ ಉದುರಿ ಬಂದವರಲ್ಲ ಅಥವಾ ಗಾಳಿಯಲ್ಲಿ ತೇಲಿ ಬಂದವರಲ್ಲ. ಅವರು ಗ್ರಾಮ ಪಂಚಾಯಿತಿಯಿಂದ ಜನರ ಮಧ್ಯೆ ಆಯ್ಕೆಯಾಗಿ ಬಂದವರು. ಅವರಿಗೆ ಆದ ಶಕ್ತಿ ಸಾಮರ್ಥ್ಯವಿದೆ. ಯಾರು ಯಾವ ಪಕ್ಷಕ್ಕೆ ಬೇಕಾದರೂ ಹೋಗಬಹುದು. ಕೃಪೆ ತೋರಲು ನಾನು ಈಶ್ವರನಾ? ನನ್ನಂತಹವರ ಕೃಪಾಕಟಾಕ್ಷ ಶ್ರೀನಿವಾಸಗೌಡರಿಗೆ ಬೇಕಿಲ್ಲ’ ಎಂದರು.
‘ಶ್ರೀನಿವಾಸಗೌಡರು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಹಾಗೂ ಸಚಿವರಾಗಿ ರಾಜಕೀಯದಲ್ಲಿ ಕೆಲಸ ಮಾಡಿದ್ದಾರೆ. ಇಷ್ಟು ಹಳೆ ಮನುಷ್ಯ, ಅನುಭವಿಯು ಕಾಂಗ್ರೆಸ್‌ಗೆ ಬಂದರೆ ಪಕ್ಷದ ಶಕ್ತಿ ಹೆಚ್ಚುತ್ತದೆ. ಶ್ರೀನಿವಾಸಗೌಡರು ಜಾತ್ಯಾತೀತರಾಗಿ ಕೆಲಸ ಮಾಡಬೇಕೆಂದು ತೀರ್ಮಾನಿಸಿದ್ದಾರೆ. ಸ್ವತಂತ್ರವಾಗಿ ಅವರು ದೊಡ್ಡ ನಾಯಕರು’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.