ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಾನ್‌ ಮಾಸದ ರಂಗು: ಸಮೋಸ ಘಮಲು

ಮನೆ ಮನದಲ್ಲಿ ಕುರಾನ್‌ ಪಠಣ: ಮಸೀದಿ ಮಿನಾರುಗಳಲ್ಲಿ ನಮಾಜ್‌ ನಿನಾದ
Last Updated 26 ಮೇ 2019, 19:30 IST
ಅಕ್ಷರ ಗಾತ್ರ

ಕೋಲಾರ: ನಗರದಲ್ಲಿ ರಂಜಾನ್‌ ಮಾಸದ ರಂಗು ಕಳೆಗಟ್ಟಿದೆ. ಮಸೀದಿ ಮಿನಾರುಗಳಲ್ಲಿ ನಮಾಜ್‌ನ ನಿನಾದ... ಬಡಾವಣೆಗಳಲ್ಲಿ ಸಮೋಸ ಘಮಲು... ಮುಸ್ಲಿಂ ಬಾಂಧವರ ಮನೆ ಮನದಲ್ಲಿ ಕುರಾನ್‌ ಪಠಣ...

ರಂಜಾನ್‌ ಮಾಸ ಆರಂಭವಾಗಿ ಈಗಾಗಲೇ 21 ದಿನ ಕಳೆದಿದೆ. ಉಪವಾಸ, ಪ್ರಾರ್ಥನೆ, ದುಡಿಮೆಯಲ್ಲಿ ಅಲ್ಲಾಹುನನ್ನು ಕಾಣುತ್ತಿರುವ ಮುಸ್ಲಿಮರು ಕೆಲವೇ ದಿನಗಳಲ್ಲಿ ಮತ್ತೆ ಮೂಡುವ ಚಂದ್ರನಿಗಾಗಿ ಕಾಯುತ್ತಿದ್ದಾರೆ.

ನಗರದಲ್ಲಿ 50ಕ್ಕೂ ಹೆಚ್ಚು ಮಸೀದಿಗಳಿವೆ. ಮೊಹಲ್ಲಾ, ಬಡಾವಣೆಗಳಲ್ಲಿ ಎಣಿಸುತ್ತಾ ಹೋದಂತೆ ಮಸೀದಿಗಳ ಲೋಕ ತೆರೆದುಕೊಳ್ಳುತ್ತದೆ. ಮನೆಯಂತೆ ಕಾಣುವ ಸಣ್ಣವು, ಮಹಲುಗಳಂತೆ ಕಾಣುವ ದೊಡ್ಡವು. ಎಲ್ಲಕ್ಕೂ ಗುಂಬಗಳು, ಮಿನಾರುಗಳೇ ಆಕರ್ಷಣೆ. ಮಸೀದಿಗಳು ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.

ಮಸೀದಿಗಳ ಮಿನಾರುಗಳಿಂದ ಹೊರಡುವ ಪ್ರಾರ್ಥನೆಯ ಕರೆಗೆ ಈಗ ದಿವ್ಯಶಕ್ತಿ. ಕರೆ ಕೇಳಿದ ಕೂಡಲೇ ವ್ರತನಿಷ್ಠ ಮುಸ್ಲಿಮರು ಕೆಲಸ ನಿಲ್ಲಿಸಿ, ಮಸೀದಿಗಳತ್ತ ಹೆಜ್ಜೆ ಹಾಕುತ್ತಾರೆ. ಪುಟ್ಟ ಮಕ್ಕಳೂ ಅವರೊಡನೆ ಸಜ್ಜಾಗುತ್ತಾರೆ. ದೊಡ್ಡವರಿಗೆ ಪ್ರಾರ್ಥನೆಯು ನಿಷ್ಠೆಯ ವಿಷಯ. ದೊಡ್ಡವರ ಮೌನ ಪ್ರಾರ್ಥನೆ ನಡುವೆ ಮಕ್ಕಳ ಬೆರಗುಗಂಗಳ ಚಂಚಲ ನೋಟದ ಬೆಳಕು ಆವರಣದಲ್ಲಿ ಹಾಸಿಕೊಂಡಿರುತ್ತದೆ.

ಪುರುಷರು ಮಸೀದಿಗಳ ಕಡೆಗೆ ಹೆಜ್ಜೆ ಹಾಕುವ ವೇಳೆಯಲ್ಲೇ ಮಹಿಳೆಯರು, ಬಾಲಕಿಯರು ಮನೆಯನ್ನೇ ಮಸೀದಿ ಎಂದು ಭಾವಿಸಿ ಪ್ರಾರ್ಥನೆಗೆ ಸಜ್ಜಾಗುತ್ತಾರೆ. ಹೀಗೆ ಮುಸ್ಲಿಮರ ಮನೆ ಮತ್ತು ಮಸೀದಿಗಳು ಪ್ರಾರ್ಥನೆಯ ಮೌನದಲ್ಲಿ ಅಲ್ಲಾಹುವನ್ನು ನೆನೆಯುತ್ತಿವೆ.

ಕುರಾನ್‌ ಸಂದೇಶ: ರಂಜಾನ್ ಮಾಸವೆಂದರೆ ಬಹುಪಾಲು ಮುಸ್ಲಿಂ ಮಹಿಳೆಯರಿಗೆ ಉಪವಾಸ, ಪ್ರಾರ್ಥನೆ ಅಷ್ಟೇ ಅಲ್ಲ. ನಿತ್ಯ ಕುರಾನ್ ಪಠಣ, ವಿಶ್ರಾಂತಿ ಇಲ್ಲದ ದುಡಿಮೆ. ಅವರ ದಿನಚರಿ ಆರಂಭವಾಗುವುದು ಬೆಳಗಿನ ಜಾವ. ಮುಗಿಯುವುದು ಮಧ್ಯ ರಾತ್ರಿ ಅಥವಾ ಬೆಳಗಿನ ಮೊದಲ ಜಾವದ ಹೊತ್ತಿಗೆ. ಪತಿ, ಮನೆಯ ಹಿರಿಯರು, ಮಕ್ಕಳಿಗಾಗಿ ಇಡೀ ದಿನ ಮೀಸಲು. ಉಪವಾಸದ ಜತೆಗೆ ಸತತ ಕೆಲಸ. ಆದರೂ ಭಕ್ತಿ ಕುಂದಿಲ್ಲ. ಕುರಾನ್ ಕೈ ಬಿಡುವುದಿಲ್ಲ, ನಮಾಜು ತಪ್ಪುವುದಿಲ್ಲ.

ರಂಜಾನ್ ಮಾಸದಲ್ಲಿ ದಿನಕ್ಕೆ 5 ಬಾರಿ ಪ್ರಾರ್ಥನೆ (ನಮಾಜ್) ಮಾಡುವುದು ಕಡ್ಡಾಯ. ಮಕ್ಕಳು- ಗಂಡಸರು ಐದು ಬಾರಿ ಪ್ರಾರ್ಥಿಸಿ ಸುಮ್ಮನಾದರೆ, ಮಹಿಳೆಯರು ಪ್ರಾರ್ಥನೆ ಜತೆ ಕುರಾನ್ ಓದುತ್ತಾರೆ. ಕೆಲವರು ಇಡೀ ಮಾಸದಲ್ಲಿ ಒಂದು ಬಾರಿ ಕುರಾನ್ ಓದಿದರೆ, ಮತ್ತೆ ಕೆಲವರು ಮೂರ್ನಾಲ್ಕು ಬಾರಿ ಕುರಾನ್ ಓದುತ್ತಾರೆ. ಮನೆಯಲ್ಲಿ ಕುರಾನ್ ಸಂದೇಶ ಪ್ರತಿಧ್ವನಿಸುತ್ತದೆ.

ಸಹೋದರತ್ವದ ಪ್ರತೀಕ: ಪ್ರೀತಿ ಸಹೋದರತ್ವದ ಪ್ರತೀಕವಾದ ರಂಜಾನ್‌ ಹಬ್ಬವನ್ನು ಕುತುಬ್‌-–ಎ–ರಂಜಾನ್‌, ಈದ್‌ ಉಲ್‌ ಫಿತರ್‌ ಹೀಗೆ ಮೊದಲಾದ ಹೆಸರುಗಳಿಂದ ಕರೆಯಲಾಗುತ್ತದೆ. ರಂಜಾನ್‌ಗೆ ಭಾವೈಕ್ಯದ ಪ್ರಭಾವಳಿ ಉಂಟು. ಸಮಬಾಳು ಸಮಪಾಲಿನ ಅರ್ಥ ತಿಳಿಸುವ ಅಪೂರ್ವ ಹಬ್ಬವಾಗಿದೆ. ವೈಷಮ್ಯ, ವೈರತ್ವ ತೊಡೆದು ಹಾಕಿ ಸ್ನೇಹ ಮತ್ತು ಪ್ರೀತಿಯಿಂದ ಒಂದಾಗುವುದು ರಂಜಾನ್ ಮಾಸಾಚರಣೆ ಮುಖ್ಯ ಉದ್ದೇಶ. ಸಾಮೂಹಿಕ ನಮಾಜ್, ಉಪವಾಸದಷ್ಟೇ ನಿಷ್ಠೆಯಿಂದ ಸ್ನೇಹಿತರನ್ನು ಮತ್ತು ಬಂಧುಗಳನ್ನು ಸತ್ಕರಿಸಬೇಕು ಎಂಬುದು ಆ ಆಚರಣೆಯ ಮುಖ್ಯ ನಿಯಮ.

ಪಂಚ ತತ್ವ: ಕಲ್ಮಾ (ಮನಸ್ಸಿನಲ್ಲಿ ದೇವರ ಸ್ಮರಣೆ), ನಮಾಜ್‌ (ಪ್ರಾರ್ಥನೆ), ರೋಜಾ (ಉಪವಾಸ), ಜಕಾತ್‌ (ದಾನ) ಹಾಗೂ ಹಜ್‌ (ಮೆಕ್ಕಾ ಯಾತ್ರೆ) ಇವು ಇಸ್ಲಾಂ ಧರ್ಮದ ಪಂಚ ತತ್ವಗಳು. ಪ್ರತಿಯೊಬ್ಬರು ನಿತ್ಯ ಕಲ್ಮಾ ಆಚರಿಸಬೇಕು. ನಿತ್ಯವೂ ಐದು ಬಾರಿ ಮಸೀದಿಗೆ ತೆರಳಿ ಪಾರ್ಥನೆ ಸಲ್ಲಿಸಬೇಕು. ರಂಜಾನ್‌ ಮಾಸದಲ್ಲಿ ಉಪವಾಸ ಆಚರಿಸಬೇಕು, ತಮ್ಮ ಆದಾಯದಲ್ಲಿ ಶೇಕಡಾ 2.5ರಷ್ಟು ಭಾಗವನ್ನು ಬಡವರಿಗೆ ದಾನ ಮಾಡಬೇಕು, ಪವಿತ್ರ ಮೆಕ್ಕಾಗೆ ಯಾತ್ರೆ ಹೋಗಬೇಕು ಎಂಬುದೇ ಈ ತತ್ವಗಳ ಸಾರಾಂಶ.

ಉಪವಾಸವು ರಂಜಾನ್‌ ಆಚರಣೆಯ ಅತ್ಯಂತ ಕಠಿಣ ಭಾಗ. ಸೂರ್ಯಾಸ್ತಕ್ಕೆ ಮುಂಚೆಯೇ ಊಟ ಮಾಡಿದ ಬಳಿಕ ಸೂರ್ಯ ಮುಳುಗುವವರೆಗೂ ಏನನ್ನೂ ಸೇವಿಸುವಂತಿಲ್ಲ. ಗರ್ಭಿಣಿಯರು, ಮಕ್ಕಳು ಮತ್ತು ವೃದ್ಧರಿಗೆ ಮಾತ್ರ ವಿನಾಯಿತಿ ಇದೆ. ಬಾಯಿ ಒಣಗಿ, ಹೊಟ್ಟೆ ಚುರುಗುಡುತ್ತಿದ್ದರೂ ನೀರು ಸಹ ಕುಡಿಯುವಂತಿಲ್ಲ.

ಮಕ್ಕಳ ಸಂಭ್ರಮ: ರಂಜಾನ್‌ ತಿಂಗಳು ಶುರುವಾದರೆ ಮಕ್ಕಳಿಗೆ ಸಂಭ್ರಮ. ಬೆಳಗಿನ ಜಾವದಲ್ಲೇ ನಿದ್ದೆಯಿಂದ ಎದ್ದು ಇಡೀ ಬಡಾವಣೆಯಲ್ಲಿ ಕೂಗುತ್ತಾ ಉಪವಾಸ ಇರುವವರನ್ನು ಎಚ್ಚರಗೊಳಿಸುತ್ತಾರೆ. ರಂಜಾನ್‌ ತಿಂಗಳನ್ನು ಕುರಾನ್‌ ತಿಂಗಳೆಂದೇ ಕರೆಯಲಾಗುತ್ತದೆ. ಈ ತಿಂಗಳ 26ನೇ ದಿನ ಕುರಾನ್‌ ಪಠಣ ಅಂತ್ಯಗೊಳ್ಳುತ್ತದೆ.

ಭರ್ಜರಿ ವ್ಯಾಪಾರ: ಮಸೀದಿಗಳ ಬಳಿ ಹಣ್ಣಿನ ಅಂಗಡಿ, ಸಿಹಿ ಖಾದ್ಯ ಮತ್ತು ಮಾಂಸಾಹಾರದ ಮಳಿಗೆಗಳು ತಲೆಯೆತ್ತಿವೆ. ಹಲೀಮ್‌, ಕಬಾಬ್‌, ತೀತರ್‌ ಘೋಷ್‌, ಫಿಶ್‌ ಫ್ರೈ, ಚಿಕನ್‌ ಕಬಾಬ್‌, ಫಾಲ್‌ ಗರಮಾ ಗರಂ ಮಾಂಸಾಹಾರ ಭಕ್ಷ್ಯಗಳ ಅಂಗಡಿಗಳು ಸಾಲುಸಾಲಾಗಿವೆ.

ಸಿಹಿ ತಿನಿಸು ಮತ್ತು ಹರೀರಾಗಳು ರಂಜಾನ್ ಕಳೆ ಹೆಚ್ಚಿಸಿವೆ. ಆಹಾರ ಮಳಿಗೆಗಳು ಸಂಜೆಯ ಪ್ರಾರ್ಥನೆ ನಂತರ ಪುಟ್ಟಪುಟ್ಟ ದೀಪ ಹಚ್ಚಿಕೊಂಡು ಝಗಮಗಿಸುತ್ತಾ ವ್ಯಾಪಾರಕ್ಕೆ ಸಿದ್ಧವಾಗುತ್ತದೆ. ಪ್ರತಿ ಅಂಗಡಿಯಲ್ಲೂ ಭರ್ಜರಿ ವ್ಯಾಪಾರ.

ದಿನವಿಡೀ ಉಪವಾಸ ವ್ರತನಿರತರು ಸಂಜೆ ಮಸೀದಿಯಲ್ಲಿ ಪ್ರಾರ್ಥನೆ ಬಳಿಕ ಸೇವಿಸುವ ಆಹಾರದಲ್ಲಿ ಸಮೋಸಕ್ಕೆ ಅಗ್ರಸ್ಥಾನ. ಪ್ರತಿ ಮಸೀದಿ ಬಳಿ ಹಣ್ಣು, ಸಮೋಸ, ಕಚೋರಿ, ಬಟಾಟೆ ವಡಾ, ಪಾವ್‌ಬಾಜಿ, ಬೋಂಡ, ಮೆಣಸಿನಕಾಯಿ ಬಜ್ಜಿ ಖರೀದಿಗೆ ಜನ ಅಂಗಡಿಗಳ ಮುಂದೆ ಸಂತೆಯಂತೆ ಸೇರಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT