ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಸೋಂಕಿತರ ಸಂಖ್ಯೆ ದಿಢೀರ್‌ ಏರಿಕೆ

ಜಿಲ್ಲೆಯಲ್ಲಿ ಮತ್ತೆ 121 ಮಂದಿಗೆ ಹರಡಿದ ಸೋಂಕು
Last Updated 27 ಆಗಸ್ಟ್ 2020, 16:38 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ದಿಢೀರ್‌ ಏರಿಕೆ ಕಂಡಿದ್ದು, ಗುರುವಾರ ಹೊಸದಾಗಿ ಪತ್ತೆಯಾದ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದೆ.

ಕಳೆದ ಮೂರು ವಾರಗಳಲ್ಲಿ ಪ್ರತಿನಿತ್ಯ ಹೊಸದಾಗಿ ಪತ್ತೆಯಾಗುತ್ತಿದ್ದ ಸೋಂಕಿತರ ಕೊಂಚ ತಗ್ಗಿತ್ತು. ಜತೆಗೆ ಸೋಂಕಿತರ ಸಾವಿನ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿತ್ತು. ಅಲ್ಲದೇ, ಸೋಂಕಿತರು ಗುಣಮುಖರಾಗುವ ಪ್ರಮಾಣ ಏರು ಗತಿಯಲ್ಲಿ ಸಾಗಿತ್ತು.

ಆದರೆ, ಗುರುವಾರ ಸೋಂಕಿನ ಚಿತ್ರಣವೇ ಬದಲಾಗಿದೆ. ಗುಣಮುಖರಾದವರ ಸಂಖ್ಯೆಗೆ ಹೋಲಿಸಿದರೆ ಹೊಸದಾಗಿ ಪತ್ತೆಯಾದ ಸೋಂಕಿತರ ಸಂಖ್ಯೆ ಆರು ಪಟ್ಟು ಹೆಚ್ಚಳವಾಗಿದೆ. ಹೊಸದಾಗಿ 121 ಮಂದಿಗೆ ಸೋಂಕು ಹರಡಿರುವುದು ದೃಢಪಟ್ಟಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 800ಕ್ಕೆ ಜಿಗಿದಿದೆ.

ವಿಷಮ ಶೀತ ಜ್ವರ ಮತ್ತು ಸೋಂಕಿತರ ಸಂಪರ್ಕವು ಜಿಲ್ಲೆಗೆ ಆತಂಕಕಾರಿಯಾಗಿ ಪರಿಣಮಿಸಿದೆ. ವಿಷಮ ಶೀತ ಜ್ವರದಿಂದ ಬಳಲುತ್ತಿರುವ 78 ಮಂದಿಗೆ ಮತ್ತು ಸೋಂಕಿತರ ಸಂಪರ್ಕದಿಂದ 35 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಜತೆಗೆ 6 ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ಪತ್ತೆಯಾಗಿರುವುದು ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದೆ.

ಕೋಲಾರದಲ್ಲಿ ಹೆಚ್ಚು: ಕೋಲಾರ ತಾಲ್ಲೂಕಿನಲ್ಲಿ ಅತಿ ಹೆಚ್ಚು 33 ಮಂದಿಗೆ ಸೋಂಕು ತಗುಲಿದೆ. ವಿಷಮ ಶೀತ ಜ್ವರಪೀಡಿತ 21 ಮಂದಿಗೆ, ಸೋಂಕಿತರ ಸಂಪರ್ಕದಿಂದ 11 ಮಂದಿಗೆ ಮತ್ತು ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಸೋಂಕು ಬಂದಿದೆ.

ಮಾಲೂರು ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರದಿಂದ ಬಳಲುತ್ತಿರುವ 18 ಮಂದಿಗೆ, ಸೋಂಕಿತರ ಸಂಪರ್ಕದಿಂದ 4 ಮಂದಿಗೆ ಹಾಗೂ ಇಬ್ಬರು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಹರಡಿರುವುದು ಗೊತ್ತಾಗಿದೆ. ಬಂಗಾರಪೇಟೆ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರಕ್ಕೆ ತುತ್ತಾಗಿರುವ 12 ಮಂದಿಗೆ ಮತ್ತು ಹೊರ ಜಿಲ್ಲೆಗೆ ಹೋಗಿದ್ದ ಒಬ್ಬರಿಗೆ ಸೋಂಕು ಬಂದಿದೆ.

ಕೆಜಿಎಫ್‌ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರದಿಂದ ಬಳಲುತ್ತಿರುವ 12 ಮಂದಿಗೆ, ಸೋಂಕಿತರ ಸಂಪರ್ಕದಿಂದ 18 ಮಂದಿಗೆ ಮತ್ತು ಇಬ್ಬರು ಆರೋಗ್ಯ ಕಾರ್ಯಕರ್ತರಿಗೆ, ಮುಳಬಾಗಿಲು ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರಪೀಡಿತ 11 ಮಂದಿಗೆ ಮತ್ತು ಇಬ್ಬರು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಗುಲಿದೆ.

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರವಿರುವ 4 ಮಂದಿಗೆ ಮತ್ತು ಸೋಂಕಿತರ ಸಂಪರ್ಕದಿಂದ ಇಬ್ಬರಿಗೆ ಸೋಂಕು ಬಂದಿರುವುದು ದೃಢಪಟ್ಟಿದೆ. ಸೋಂಕಿತರ ಮನೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸುರಕ್ಷತಾ ಕ್ರಮವಾಗಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT