ಮಂಗಳವಾರ, ಮೇ 17, 2022
27 °C
ಸಭೆಯಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ್‌ಬಾಬು ಹೇಳಿಕೆ

ನೌಕರರ ಕ್ರೀಡಾಕೂಟಕ್ಕೆ ಸಕಲ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ತೀರ್ಪುಗಾರರಾದ ದೈಹಿಕ ಶಿಕ್ಷಣ ಶಿಕ್ಷಕರು ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟದ ಯಶಸ್ಸಿನ
ರೂವಾರಿಗಳು. ತೀರ್ಪುಗಾರರು ನಿಷ್ಪಕ್ಷಪಾತ ತೀರ್ಪು ನೀಡಬೇಕು ಮತ್ತು ಸಂಯಮ ಕಾಯ್ದುಕೊಳ್ಳಬೇಕು’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಕಿವಿಮಾತು ಹೇಳಿದರು.

ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯಲಿರುವ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟದ ಸಿದ್ಧತೆಯನ್ನು ಮಂಗಳವಾರ ಪರಿಶೀಲಿಸಿ ಮಾತನಾಡಿ, ‘ಜಿಲ್ಲೆಯಲ್ಲಿ ಈ ಬಾರಿ ಕ್ರೀಡಾಕೂಟದ ಆಯೋಜನೆ ವಿಶೇಷವಾಗಿದೆ. ಸರ್ಕಾರಿ ನೌಕರರು ಹಾಗೂ ಸಂಘದ ಪದಾಧಿಕಾರಿಗಳು ಕ್ರೀಡಾಕೂಟದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಬೇಕು’ ಎಂದು ಮನವಿ ಮಾಡಿದರು.

‘ಕ್ರೀಡಾಕೂಟದಲ್ಲಿ ಎರಡೂವರೆ ಸಾವಿರಕ್ಕೂ ಹೆಚ್ಚು ನೌಕರರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕ್ರೀಡಾಕೂಟದ ಉದ್ಘಾಟನೆಗೆ ಆಗಮಿಸುವ ಜಿಲ್ಲೆಯ ಜನಪ್ರತಿನಿಧಿಗಳನ್ನು ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಬೇಕು. ಕ್ರೀಡಾಕೂಟವು ಶಿಸ್ತಿಗೆ ಸಾಕ್ಷಿಯಾಗಬೇಕು. ಜಿಲ್ಲೆಯ ಕ್ರೀಡಾಕೂಟ ರಾಜ್ಯಕ್ಕೆ ಮಾದರಿಯಾಗುವಂತೆ ನಡೆಸಬೇಕು’ ಎಂದರು.

‘ಜಿಲ್ಲಾಡಳಿತವು ಕ್ರೀಡಾಕೂಟಕ್ಕೆ ಸಂಪೂರ್ಣ ಸಹಕಾರ ನೀಡಿದೆ. ಊಟ, ಕುಡಿಯುವ ನೀರು, ಸಮವಸ್ತ್ರ ಹಂಚಿಕೆಯಲ್ಲಿ ಗೊಂದಲ ಆಗಬಾರದು. ಪ್ರತಿ ನೌಕರರು ಪಥಸಂಚಲನದಲ್ಲಿ ಪಾಲ್ಗೊಳ್ಳುವ ಮೂಲಕ ಸಂಘಟನೆಯ ಶಕ್ತಿ ಸಾರೋಣ’ ಎಂದು ಹೇಳಿದರು.

ತೀರ್ಪು ಗೌರವಿಸಿ: ‘ತೀರ್ಪುಗಾರರ ತೀರ್ಮಾನ ಪ್ರತಿಯೊಬ್ಬರೂ ಗೌರವಿಸಬೇಕು. ತೀರ್ಪುಗಾರರು ಯಾರ ಪರವೂ ಅಲ್ಲ. ಕ್ರೀಡಾಕೂಟದ ಯಶಸ್ವಿ ಮತ್ತು ಜಿಲ್ಲೆಯ ಘನತೆ ಕಾಪಾಡುವ ಹೊಣೆ ತೀರ್ಪುಗಾರರ ಮೇಲಿದೆ’ ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್‌.ಮಂಜುನಾಥ್‌ ತಿಳಿಸಿದರು.

‘ದೈಹಿಕ ಶಿಕ್ಷಣ ಶಿಕ್ಷಕರ ಹಲವು ತಂಡ ರಚಿಸಲಾಗಿದೆ. ಒಂದು ತಂಡ ಕ್ರೀಡಾಪಟುಗಳ ನೋಂದಣಿ ಕಾರ್ಯ ನಿರ್ವಹಿಸಲಿದೆ. ಈ ಉದ್ದೇಶಕ್ಕೆ 6 ಕೌಂಟರ್‌ ತೆರೆಯಲಾಗಿದೆ. ಮಧ್ಯಾಹ್ನದ ನಂತರ ಇದೇ ಕೌಂಟರ್‌ನಲ್ಲಿ ಊಟ ವಿತರಿಸಲಾಗುತ್ತದೆ’ ಎಂದು ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಚೌಡಪ್ಪ ವಿವರಿಸಿದರು.

‘ಉಳಿದ ತಂಡಗಳು ವೇದಿಕೆ ಸಜ್ಜುಗೊಳಿಸುವ ಹಾಗೂ ಪಥಸಂಚಲನದ ಉಸ್ತುವಾರಿ ಜವಾಬ್ದಾರಿ ನಿರ್ವಹಿಸಲಿವೆ. ದೈಹಿಕ ಶಿಕ್ಷಣ ಶಿಕ್ಷಕರು ಮಂಗಳವಾರ ಬೆಳಿಗ್ಗೆ 7-.30ಕ್ಕೆ ಕ್ರೀಡಾಂಗಣದಲ್ಲಿ ಹಾಜರಿರಬೇಕು’ ಎಂದು ಸೂಚಿಸಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ರವಿಚಂದ್ರ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪೇಗೌಡ, ತಾಲ್ಲೂಕು ಅಧ್ಯಕ್ಷ ಅಶ್ವತ್ಥನಾರಾಯಣ, ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.