ಶನಿವಾರ, ಸೆಪ್ಟೆಂಬರ್ 21, 2019
21 °C
13ಕ್ಕೆ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ

ಕೋಚಿಮುಲ್‌ಗೆ ಚುನಾವಣೆ: ಮತದಾನಕ್ಕೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ

Published:
Updated:
Prajavani

ಕೋಲಾರ: ‘ಕೋಲಾರ– ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ಆಡಳಿತ ಮಂಡಳಿಯ 9 ನಿರ್ದೇಶಕರ ಸ್ಥಾನಕ್ಕೆ ಮೇ 13ರಂದು ನಡೆಯುವ ಚುನಾವಣೆಗೆ ನಗರದ ಗೋಕುಲ ವಿದ್ಯಾಸಂಸ್ಥೆಯಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ಮತದಾನ ನಡೆಯುವ ಗೋಕುಲ ಕಾಲೇಜಿಗೆ ಶುಕ್ರವಾರ ಭೇಟಿ ನೀಡಿ ಕೊಠಡಿ ಪರಿಶೀಲಿಸಿ ಮಾತನಾಡಿ, ‘ಕೋಚಿಮುಲ್‌ನ 13 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿತ್ತು. ಈ ಪೈಕಿ 4 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಕೋಲಾರ ಜಿಲ್ಲೆಯ 5 ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ’ ಎಂದರು.

‘ಮತದಾನಕ್ಕೆ ಕಾಲೇಜಿನ 9 ಕೊಠಡಿ ಆಯ್ಕೆ ಮಾಡಲಾಗಿದೆ. ಅವಳಿ ಜಿಲ್ಲೆಗಳಿಂದ 1,200 ಮತದಾರರು ಮತದಾನ ಮಾಡಲಿದ್ದಾರೆ. ಈಗಾಗಲೇ ಆಯಾ ಗ್ರಾಮೀಣ ಹಾಲು ಉತ್ಪಾದಕರ ಸಹಕಾರ ಸಂಘಗಳ ನಿರ್ದೇಶಕ ಮಂಡಳಿಯು ನಾಮನಿರ್ದೇಶನ ಮಾಡಿರುವ ಮತದಾರರಿಗೆ ಡೆಲಿಗೇಟ್ ಫಾರಂ ಹಾಗೂ ಗುರುತಿನ ಚೀಟಿ ನೀಡಲಾಗಿದೆ’ ಎಂದು ವಿವರಿಸಿದರು.

‘ಡೆಲಿಗೇಟ್‌ ಫಾರಂ, ಗುರುತಿನ ಚೀಟಿ ಹೊಂದಿರುವವರ ಮಾತ್ರ ಮತ ಚಲಾಯಿಸಬಹುದು. ಬೆಳಿಗ್ಗೆ 9 ಗಂಟೆಯಿಂದ ಸಂಜೆ 4ರವರೆಗೆ ಮತದಾನ ನಡೆಯುತ್ತದೆ. ನಂತರ ಮತ ಎಣಿಕೆ ಮಾಡಿ ಸಂಜೆ 5.-30ಕ್ಕೆ ಫಲಿತಾಂಶ ಘೋಷಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ನಿಷೇಧಾಜ್ಞೆ ಜಾರಿ: ‘ಮತದಾನ ಮತ್ತು ಮತ ಎಣಿಕೆ ಕಾರ್ಯ ನಡೆಯುವ ಗೋಕುಲ ಕಾಲೇಜು ಸುತ್ತಮುತ್ತ ಮೇ 13ರಂದು ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು. ಫಲಿತಾಂಶ ಘೋಷಣೆ ನಂತರ ವಿಜಯೋತ್ಸವ ಆಚರಿಸುವಂತಿಲ್ಲ’ ಎಂದು ಹೇಳಿದರು.

‘ಚುನಾವಣೆ ಸ್ಥಳದಲ್ಲಿ ಗುಂಪುಗೂಡುವಂತಿಲ್ಲ. ಗೊಂದಲಕ್ಕೆ ಅವಕಾಶ ನೀಡದಂತೆ ಪೊಲೀಸರಿಗೆ ಸೂಚಿಸಲಾಗಿದೆ. ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಶಾಂತಿಯುತ ಚುನಾವಣೆಗೆ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

‘ಚುನಾವಣೆ ಹಿನ್ನಲೆಯಲ್ಲಿ ಗೋಕುಲ ಕಾಲೇಜು ಪಕ್ಕದ ರಸ್ತೆಯಲ್ಲಿ ಮತದಾನದ ದಿನ ಸಾರ್ವಜನಿಕರ ಓಡಾಟ ಹಾಗೂ ವಾಹನ ಸಂಚಾರ ನಿರ್ಬಂಧಿಸಲಾಗುತ್ತದೆ. ಒಂದು ದಿನದ ಮಟ್ಟಿಗೆ ಸ್ಥಳೀಯರು ಹಾಗೂ ವಾಹನ ಸವಾರರು ಪರ್ಯಾಯ ರಸ್ತೆಯಲ್ಲಿ ಸಂಚರಿಸಬೇಕು’ ಎಂದು ಕೋರಿದರು.

ತಡೆಗೋಡೆ ನಿರ್ಮಾಣ: ‘ಚುನಾವಣೆ ಶಾಂತಿಯುತವಾಗಿ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಮತಗಟ್ಟೆ ಸುತ್ತ ತಡೆಗೋಡೆ ನಿರ್ಮಿಸಲಾಗುವುದು. ಚುನಾವಣಾ ಪ್ರಕ್ರಿಯೆ ನಿಭಾಯಿಸಲು ಪೊಲೀಸ್ ಇಲಾಖೆಯ ಸಹಕಾರ ಪಡೆಯಲಾಗಿದೆ’ ಎಂದು ಚುನಾವಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಸೋಮಶೇಖರ್ ತಿಳಿಸಿದರು.

ಪರಿಶೀಲನಾಧಿಕಾರಿ ನೇಮಕ: ‘ಮತದಾನದ ಅರ್ಹತೆಗಾಗಿ ಎಂಪಿಸಿಎಸ್‌ಗಳಿಂದ ನಾಮನಿರ್ದೇಶಿತಗೊಂಡ ಮತದಾರರಿಗೆ ನೀಡುವ ಡೆಲಿಗೇಟ್ ಫಾರಂನಲ್ಲಿ ತಪ್ಪಾಗದಂತೆ ಪರೀಶೀಲನೆಗಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಪರಿಶೀಲನಾಧಿಕಾರಿ ನೇಮಿಸಲಾಗಿದೆ’ ಎಂದು ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಸ್ವಾಮಿ ಹೇಳಿದರು.

ನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಬಿ.ಪಿ.ನಾಗರಾಜ್, ಎಸ್‍ಐ ಶಂಕರಪ್ಪ, ಸಹಕಾರ ಸಂಘಗಳ ಸಹಾಯಕ ನಿಬಂಧಕ ನಾಗರಾಜಗೌಡ, ಕೋಚಿಮುಲ್ ಉಪ ವ್ಯವಸ್ಥಾಪಕರಾದ ನಾಗೇಶ್, ಮಲ್ಲಿಕಾರ್ಜುನ್, ರಮೇಶ್‌ಬಾಬು ಹಾಜರಿದ್ದರು.

Post Comments (+)