ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸಾದ ದುರಂತ ಪ್ರಕರಣ ಅಸ್ವಸ್ಥರು ಚೇತರಿಕೆ: ಪ್ರಾಣಾಪಾಯದಿಂದ ಪಾರು

ಚಿಂತಾಮಣಿಯ ಗಂಗಮ್ಮ ದೇವಾಲಯದ ಪ್ರಸಾದ ಪ್ರಕರಣ
Last Updated 28 ಜನವರಿ 2019, 15:19 IST
ಅಕ್ಷರ ಗಾತ್ರ

ಕೋಲಾರ: ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಗಂಗಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿ ಅಸ್ವಸ್ಥರಾಗಿದ್ದ 5 ಮಂದಿ ಚೇತರಿಸಿಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜ.25ರಂದು ದೇವಾಲಯದ ಪ್ರಸಾದ ತಿಂದು ಅಸ್ವಸ್ಥಗೊಂಡಿದ್ದ ಚಿಂತಾಮಣಿಯ ಗಂಗಾಧರ್‌, ರಾಧಾ, ರಾಜ, ಗಾನವಿ ಮತ್ತು ಶರಣ್ಯ ಅವರಿಗೆ ನಗರದ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ಐದೂ ಮಂದಿಯ ಆರೋಗ್ಯ ಸುಧಾರಿಸಿದ್ದು, ಮಂಗಳವಾರ (ಜ.29) ಮಧ್ಯಾಹ್ನ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲು ವೈದ್ಯರು ನಿರ್ಧರಿಸಿದ್ದಾರೆ.

‘5 ಮಂದಿಯೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರಿಗೆ ಇನ್ನೂ ನಾಲ್ಕೈದು ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸುತ್ತೇವೆ’ ಎಂದು ಆರ್‌.ಎಲ್‌.ಜಾಲಪ್ಪ ಆಸ್ಪತ್ರೆ ವೈದ್ಯಕೀಯ ಸೂಪರಿಂಟೆಂಡೆಂಟ್‌ ಡಾ.ಎಂ.ಎಸ್.ಲಕ್ಷ್ಮಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಪಾಠ ಕಲಿತಿಲ್ಲ: ‘ಚಾಮರಾಜನಗರ ಜಿಲ್ಲೆ ಸುಳ್ವಾಡಿ ಮಾರಮ್ಮ ದೇವಾಲಯ ದುರಂತದಿಂದ ಸರ್ಕಾರ ಪಾಠ ಕಲಿತಿಲ್ಲ. ಪ್ರಸಾದ ತಿಂದು ಭಕ್ತರು ಸಾಯುತ್ತಿರುವ ಪ್ರಕರಣಗಳು ವರದಿಯಾಗುತ್ತಿದ್ದರೂ ಸರ್ಕಾರ ಕಾಯ್ದೆ ರೂಪಿಸಲು ವಿಫಲವಾಗಿದೆ’ ಎಂದು ರಾಜ್ಯ ಬಿಜೆಪಿ ಎಸ್ಸಿ ಘಟಕದ ಅಧ್ಯಕ್ಷ ಡಿ.ಎಸ್.ವೀರಯ್ಯ ಆರೋಪಿಸಿದರು.

ಚಿಂತಾಮಣಿಯ ಗಂಗಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿ ಅಸ್ವಸ್ಥಗೊಂಡಿರುವವರ ಚಿಕಿತ್ಸೆಗೆ ಜಾಲಪ್ಪ ಆಸ್ಪತ್ರೆಯಲ್ಲಿ ಸೋಮವಾರ ₹ 25 ಸಾವಿರ ನೆರವಿನ ಚೆಕ್‌ ನೀಡಿ ಮಾತನಾಡಿ, ‘ಸುಳ್ವಾಡಿ ದುರಂತದ ಕಹಿ ನೆನಪು ಮಾಸುವ ಮುನ್ನವೇ ಅದೇ ರೀತಿಯ ಮತ್ತೊಂದು ಘಟನೆ ನಡೆದಿದೆ. ಸರ್ಕಾರ ದೇವಾಲಯಗಳನ್ನು ಹಿಡಿತಕ್ಕೆ ತೆಗೆದುಕೊಂಡಿದ್ದರೆ ಈ ಘಟನೆ ಸಂಭವಿಸುತ್ತಿರಲಿಲ್ಲ’ ಎಂದು ದೂರಿದರು.

‘ದೇವಾಲಯಗಳಲ್ಲಿ ಪ್ರಸಾದ ವಿನಿಯೋಗ ಸಂಬಂಧ ಸರ್ಕಾರ ಕಾಯ್ದೆ ಜಾರಿ ಮಾಡಬೇಕು.ಈ ಸಂಬಂಧ ಬಜೆಟ್ ಅಧಿವೇಶನದಲ್ಲಿ ಹೋರಾಟ ನಡೆಸುವಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡುತ್ತೇವೆ’ ಎಂದು ವಿವರಿಸಿದರು.

ಪರಿಹಾರ ಘೋಷಿಸಲಿ: ‘ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತಿರುತ್ತವೆ. ಚಿಂತಾಮಣಿ ಪ್ರಕರಣ ಸಂಬಂಧ ಶೀಘ್ರವೇ ವರದಿ ಪಡೆದು, ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಬೇಕು. ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಇದೇ ರೀತಿಯ ಘಟನೆಗಳು ನಡೆದಾಗ ಸರ್ಕಾರ ಮೃತರ ಕುಟುಂಬಕ್ಕೆ ₹ 5 ಲಕ್ಷ ಘೋಷಿಸಿತ್ತು. ಆದರೆ, ಚಿಂತಾಮಣಿ ಪ್ರಕರಣದಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಲು ಮೀನಮೇಷ ಎಣಿಸುತ್ತಿದೆ’ ಎಂದು ಕಿಡಿಕಾರಿದರು.

ಕಾಂಗ್ರೆಸ್‌ನವರೇ ಶತ್ರುಗಳು: ‘ದುರಾಡಳಿತ ನಡೆಸಿದರೆ ಖಂಡಿತ ತೊಂದರೆಯಾಗುತ್ತದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್‌ನಿಂದ ತೊಂದರೆಯೇ ಹೊರತು ಬಿಜೆಪಿಯಿಂದಲ್ಲ. ಕಾಂಗ್ರೆಸ್‌ನವರೇ ಅವರ ಶತ್ರುಗಳು’ ಎಂದು ಲೇವಡಿ ಮಾಡಿದರು.

‘ಬಿಜೆಪಿಯು ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ನೀಡುತ್ತಿಲ್ಲ. ಮೈತ್ರಿ ಸರ್ಕಾರ ಸರ್ಕಸ್‌ ಕಂಪನಿಯಂತೆ ನಡೆಯುತ್ತಿದೆ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದ್ದು, ಸರ್ಕಾರದ ಭರವಸೆಗಳೆಲ್ಲಾ ಘೋಷಣೆಗಷ್ಟೇ ಸೀಮಿತವಾಗಿವೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT