ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿತ್ತನೆ ಬೀಜ–ರಸಗೊಬ್ಬರಕ್ಕೆ ಸಚಿವ ಬಿಸಿ ಪಾಟೀಲ್‌ಗೆ ಮನವಿ

Last Updated 12 ಜೂನ್ 2021, 15:57 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಆರಂಭವಾಗಿದ್ದು, ರೈತರ ಅಗತ್ಯಕ್ಕೆ ತಕ್ಕಂತೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಸಬೇಕೆಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಶನಿವಾರ ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

‘ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಆದರೆ, ಜಿಲ್ಲೆಯ ಬೇಡಿಕೆಗೆ ತಕ್ಕಂತೆ ರಸಗೊಬ್ಬರ- ಮತ್ತು ಬಿತ್ತನೆ ಬೀಜ ಸರಬರಾಜಾಗುತ್ತಿಲ್ಲ. ಇದರಿಂದ ಬಿತ್ತನೆಗೆ ಸಮಸ್ಯೆಯಾಗಲಿದೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಹೇಳಿದರು.

‘ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜ ಮಾರಾಟಕ್ಕೆ ಸೀಮಿತ ಸಮಯಾವಕಾಶ ನೀಡಿರುವುದರಿಂದ ಖರೀದಿಗೆ ಸಮಸ್ಯೆಯಾಗುತ್ತಿದೆ. ಡೀಲರ್‌ಗಳು ಹಾಗೂ ಅಂಗಡಿ ಮಾಲೀಕರು ಇದನ್ನೇ ಬಂಡವಾಳ ಮಾಡಿಕೊಂಡು ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ಹೆಚ್ಚಿನ ಬೆಲೆಗೆ ಮಾಡುತ್ತಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ಒಂದೆರೆಡು ಅಂಗಡಿಗಳ ಮೇಲೆ ದಾಳಿ ನಡೆಸಿ ಕೈಚೆಲ್ಲಿದ್ದಾರೆ’ ಎಂದು ದೂರಿದರು.

‘ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಮತ್ತು ಬಿತ್ತನೆ ಬೀಜ ಮಾರುವ ಅಂಗಡಿಗಳ ಮೇಲೆ ಆಗಾಗ್ಗೆ ದಾಳಿ ನಡೆಸಬೇಕು. ಈ ಕಾರ್ಯಕ್ಕೆ ವಿಶೇಷ ತಂಡ ರಚಿಸಬೇಕು. ಕೃಷಿ ಯಂತ್ರೋಪಕರಣ ಖರೀದಿ ಮತ್ತು ಕೃಷಿ ಹೊಂಡ ನಿರ್ಮಾಣಕ್ಕೆ ಸಹಾಯಧನ ಮುಂದುವರಿಸಬೇಕು’ ಎಂದು ಮನವಿ ಮಾಡಿದರು.

ಜಾಲ ಸಕ್ರಿಯ: ‘ಜಿಲ್ಲೆಯಲ್ಲಿ ನಕಲಿ ಬಿತ್ತನೆ ಬೀಜ ಮಾರಾಟ ಜಾಲ ಸಕ್ರಿಯವಾಗಿದೆ. ನಕಲಿ ಬಿತ್ತನೆ ಬೀಜಗಳಿಂದ ರೈತರು ಮೋಸ ಹೋಗುತ್ತಿದ್ದಾರೆ. ಕೋವಿಡ್‌ ಸಂಕಷ್ಟ ಮತ್ತು ಕೃಷಿ ಸಲಕರಣೆಗಳ ಬೆಲೆ ಏರಿಕೆ ನಡುವೆಯೂ ರೈತರು ಬಡ್ಡಿ ಸಾಲ ಮಾಡಿ ಬೆಳೆ ಬೆಳೆಯುತ್ತಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳಿಗೆ ಬೆಲೆಯಿಲ್ಲ’ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ಸಂಘಟನೆ ಸದಸ್ಯರಾದ ತಿಮ್ಮಣ್ಣ, ಮುನಿಯಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT