ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇರಿಯಾ ಮುಕ್ತ ರಾಷ್ಟ್ರಕ್ಕೆ ಸಂಕಲ್ಪ

ಅರಿವು ಕಾರ್ಯಾಗಾರದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ರಮ್ಯ ದೀಪಿಕಾ ಹೇಳಿಕೆ
Last Updated 16 ಜೂನ್ 2021, 15:34 IST
ಅಕ್ಷರ ಗಾತ್ರ

ಕೋಲಾರ: ‘ಭಾರತವನ್ನು 2025ರ ವೇಳೆಗೆ ಮಲೇರಿಯಾ ಮುಕ್ತ ರಾಷ್ಟ್ರವಾಗಿಸಲು ಜನರು ದೃಢ ಸಂಕಲ್ಪ ಮಾಡಬೇಕು. ಮುನ್ನೆಚ್ಚರಿಕೆ ವಹಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಮ್ಯ ದೀಪಿಕಾ ಕಿವಿಮಾತು ಹೇಳಿದರು.

ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮದ ಭಾಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಕೋವಿಡ್‌ ಮತ್ತು ಲಾಕ್‌ಡೌನ್‌ ಸಂದರ್ಭದಲ್ಲಿ ಜನರಿಗೆ ಮಲೇರಿಯಾ ತಡೆ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮಲೇರಿಯಾ ಸಾಂಕ್ರಾಮಿಕ ಕಾಯಿಲೆಯಾಗಿದೆ. ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯಿಂದ ಈ ಕಾಯಿಲೆಗೆ ಮನುಷ್ಯರಿಗೆ ಹರಡುತ್ತದೆ. ಸೊಳ್ಳೆ ಕಚ್ಚಿದ 2ರಿಂದ 14 ದಿನದೊಳಗೆ ಚಳಿ, ಜ್ವರ, ಮೈಕೈ ನೋವು, ತಲೆ ನೋವಿನ ಲಕ್ಷಣ ಕಾಣಿಸಿಕೊಳ್ಳುತ್ತವೆ’ ಎಂದು ವಿವರಿಸಿದರು.

‘ಮಲೇರಿಯಾ ಮಾದರಿಯಲ್ಲಿ ಸೊಳ್ಳೆಗಳಿಂದ ಡೆಂಗಿ, ಮಿದುಳು ಜ್ವರ, ಚಿಕೂನ್‌ ಗುನ್ಯ, ಆನೆಕಾಲು ರೋಗ ಬರಲಿವೆ. ರಕ್ತ ಪರೀಕ್ಷೆ ಮೂಲಕ ಈ ಕಾಯಿಲೆಗಳನ್ನು ಗುರುತಿಸಬಹುದು. ಇವು ಗುಣಪಡಿಸಬಹುದಾದ ಕಾಯಿಲೆಗಳಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧ ನೀಡಲಾಗುತ್ತದೆ. ಈ ಕಾಯಿಲೆಗಳಿಗೆ ಆರಂಭದಲ್ಲೇ ಚಿಕಿತ್ಸೆ ಪಡೆಯುವುದರಿಂದ ಹೆಚ್ಚಿನ ಅನಾಹುತ ತಪ್ಪಿಸಬಹುದು’ ಎಂದು ಹೇಳಿದರು.

‘ಮಲೇರಿಯಾ ರೋಗ ಸಾಮಾನ್ಯವಾಗಿ ಮುಂಗಾರು ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಈ ರೋಗವು ಪ್ಲಾಸ್ಮೋಡಿಯಾ ಎಂಬ ರೋಗಾಣು ಹೊಂದಿದೆ. ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಸಿಹಿ ನೀರಿನಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಿರುತ್ತದೆ. ಬಾವಿ, ಕೆರೆ, ಹೊಂಡ, ಮನೆಗಳ ಡ್ರಮ್‌, ತೊಟ್ಟಿ, ಕಟ್ಟಣ ನಿರ್ಮಾಣದ ಟ್ಯಾಂಕ್‌ಗಳಲ್ಲಿ ಸೊಳ್ಳೆಯು ಮೊಟ್ಟೆಯಿಟ್ಟು ವಂಶಾಭಿವೃದ್ಧಿ ಮಾಡುತ್ತದೆ’ ಎಂದು ಆರೋಗ್ಯ ಇಲಾಖೆ ಕೀಟಶಾಸ್ತ್ರ ತಜ್ಞ ವೇಣುಗೋಪಾಲ್ ಮಾಹಿತಿ ನೀಡಿದರು.

ಸೊಳ್ಳೆ ನಿಯಂತ್ರಣ: ‘ಗಪ್ಪಿ ಮತ್ತು ಗಂಬೂಸಿಯಾ ಮೀನಿನ ಮರಿಗಳನ್ನು ನೀರಿನಲ್ಲಿ ಬಿಟ್ಟು ಸೊಳ್ಳೆಗಳ ಉತ್ಪತ್ತಿ ನಿಯಂತ್ರಿಸಬಹುದು. ಮನೆಗಳಲ್ಲಿ ಮುಂಜಾನೆ ಮತ್ತು ಸಂಜೆ ವೇಳೆ ಧೂಪ, ಬೇವಿನ ಹೊಗೆಯ ಜೈವಿಕ ವಿಧಾನಗಳಿಂದ ಹಾಗೂ ಮನೆಯ ಕಿಟಕಿಗಳಿಗೆ ಜಾಲರಿ, ಸೊಳ್ಳೆ ಪರದೆ ಅಳವಡಿಸುವ ಮೂಲಕ ಸೊಳ್ಳೆ ನಿಯಂತ್ರಿಸಬಹುದು. ಇತ್ತೀಚೆಗೆ ಸೊಳ್ಳೆ ಬತ್ತಿ ಬಳಸಲಾಗುತ್ತಿದೆ’ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ಪತ್ರಕರ್ತ ಬಿ.ವಿ.ಗೋಪಿನಾಥ್‌, ಆರೋಗ್ಯಾಧಿಕಾರಿ ಸತ್ಯನಾರಾಯಣಗೌಡ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT