ಗುರುವಾರ , ಜುಲೈ 29, 2021
24 °C
ಇತಿಹಾಸದಲ್ಲೇ ಪ್ರಥಮ ಬಾರಿಗೆ ನಗರಸಭೆ ಮಳಿಗೆಗಳ ಬಹಿರಂಗ ಹರಾಜು

ಕೋಲಾರ ನಗರಸಭೆ ಮಳಿಗೆಗಳ ಹರಾಜು: ಕೋಟ್ಯಂತರ ರೂಪಾಯಿ ಆದಾಯ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ನಗರಸಭೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನಗರಸಭೆ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ನಡೆಸಲಾಗಿದ್ದು, ಬಾಡಿಗೆ ಹಾಗೂ ಠೇವಣಿ ರೂಪದಲ್ಲಿ ಕೋಟ್ಯಂತರ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ.

ನಗರಸಭೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ನಗರದ ವಿವಿಧೆಡೆ 226 ವಾಣಿಜ್ಯ ಮಳಿಗೆ ನಿರ್ಮಿಸಿದೆ. ವಾಣಿಜ್ಯ ಮಳಿಗೆಗಳ ಬಾಡಿಗೆಯು ನಗರಸಭೆಯ ಪ್ರಮುಖ ಆದಾಯ ಮೂಲವಾಗಿದೆ. ಆದರೆ, ಹಳೇ ಬಾಡಿಗೆದಾರರು ಮಳಿಗೆಗಳನ್ನು ಹೊಸದಾಗಿ ಹರಾಜು ಮಾಡಲು ಅವಕಾಶ ನೀಡದೆ ದಶಕಗಳಿಂದ ಅಕ್ರಮವಾಗಿ ಮುಂದುವರಿದಿದ್ದರು.

ಕೆಲ ಬಾಡಿಗೆದಾರರು ಸಕಾಲಕ್ಕೆ ಬಾಡಿಗೆ ಕಟ್ಟದೆ ಸತಾಯಿಸುತ್ತಿದ್ದರು. ಅಲ್ಲದೇ, ಮಳಿಗೆಗಳನ್ನು ನಿಯಮಬಾಹಿರವಾಗಿ ಉಪ ಗುತ್ತಿಗೆಗೆ ನೀಡಿದ್ದರು. ಹೊಸದಾಗಿ ಮಳಿಗೆಗಳ ಹರಾಜು ನಡೆಸಿ ಮರು ಹಂಚಿಕೆ ಮಾಡಲು ಅವಕಾಶ ನೀಡಿರಲಿಲ್ಲ. ಇದರಿಂದ ನಗರಸಭೆ ಬೊಕ್ಕಸಕ್ಕೆ ಆದಾಯ ಖೋತಾ ಆಗಿತ್ತು.

ಮಳಿಗೆಗಳ ಹಳೇ ಬಾಡಿಗೆದಾರರ ಅಕ್ರಮಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟ ನಗರಸಭೆ ಆಡಳಿತಾಧಿಕಾರಿಯೂ ಆದ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಮಳಿಗೆಗಳನ್ನು ಹರಾಜು ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಆದೇಶಿಸಿದ್ದರು. ಈ ಆದೇಶದನ್ವಯ ಅಧಿಕಾರಿಗಳು ಮೇ ತಿಂಗಳಲ್ಲಿ ಮಳಿಗೆಗಳ ಹರಾಜು ನಡೆಸಲು ಮುಂದಾಗಿದ್ದರು. ಆದರೆ, ಹಾಲಿ ಬಾಡಿಗೆದಾರರು ಶತಾಯಗತಾಯ ಹರಾಜು ನಿಲ್ಲಿಸಲು ರಾಜಕೀಯ ಮುಖಂಡರಿಂದ ಅಧಿಕಾರಿಗಳ ಮೇಲೆ ಒತ್ತಡ ತಂದಿದ್ದರು. ಈ ಪ್ರಯತ್ನ ಫಲ ಕೊಡದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಹಸಿರು ನಿಶಾನೆ: ನಗರಸಭೆ ಅಧಿಕಾರಿಗಳು ಕೇವಿಯಟ್ ಹಾಕಿದ್ದರಿಂದ ನ್ಯಾಯಾಲಯ ತಡೆಯಾಜ್ಞೆ ನೀಡದೆ ನಗರಸಭೆಯ ವಾದ ಆಲಿಸಿ ಮಳಿಗೆಗಳ ಹರಾಜಿಗೆ ಹಸಿರು ನಿಶಾನೆ ತೋರಿತ್ತು. ಠೇವಣಿ ಮತ್ತು ಬಾಡಿಗೆ ಆಧಾರದಲ್ಲಿ ಮಳಿಗೆಗಳ ಹರಾಜು ನಡೆಸಿ, ಅದಕ್ಕೆ ಸಂಬಂಧಪಟ್ಟ ವಿವರವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಹೈಕೋರ್ಟ್ ಅಧಿಕಾರಿಗಳು ನಿರ್ದೇಶಿಸಿತ್ತು.

ಆ ನಂತರವೂ ಕೆಲ ಬಾಡಿಗೆದಾರರು ಕಾನೂನುಬಾಹಿರವಾಗಿ ನಗರಸಭೆ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ದೂರು ಕೊಟ್ಟಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಆಯೋಗದ ಆಯುಕ್ತರು ವಿವರಣೆ ನೀಡುವಂತೆ ನಗರಸಭೆ ಆಯುಕ್ತರಿಗೆ ಪತ್ರ ಬರೆದಿದ್ದರು.

ನಿಯಮವೇನು: ಕರ್ನಾಟಕ ಪುರಸಭೆ ಕಾಯ್ದೆ 1964ರ ಕಲಂ 72(2) ಪ್ರಕಾರ ನಗರಸಭೆಯು ಕಾಲಕಾಲಕ್ಕೆ ಹೊಸದಾಗಿ ಟೆಂಡರ್ ನಡೆಸಿ ಮಳಿಗೆಗಳನ್ನು ಬಹಿರಂಗ ಹರಾಜು ಮಾಡಬೇಕು. ಆದರೆ, ರಾಜಕಾರಣಿಗಳು ಅಧಿಕಾರಿಗಳ ಮೇಲೆ ಒತ್ತಡ ತಂದು ಮಳಿಗೆಗಳು ತಮ್ಮ ಆಪ್ತರು ಹಾಗೂ ಪರಿಚಿತರ ಹಿಡಿತದಲ್ಲೇ ಇರುವಂತೆ ನೋಡಿಕೊಂಡಿದ್ದರು. ಇದರಿಂದ ಮಳಿಗೆಗಳು ಹೊಸದಾಗಿ ಬೇರೆ ವ್ಯಕ್ತಿಗಳಿಗೆ ಬಾಡಿಗೆಗೆ ಸಿಗುತ್ತಿರಲಿಲ್ಲ.

ನಗರಸಭೆ ಅಧಿಕಾರಿಗಳ ಪರಿಶ್ರಮ ಹಾಗೂ ಜಿಲ್ಲಾಧಿಕಾರಿಯವರ ಮುತುವರ್ಜಿಯಿಂದ ಕಡೆಗೂ ಮಂಗಳವಾರ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಚಾಲನೆ ಸಿಕ್ಕಿತು. ಇನ್ನೂ 2 ದಿನಗಳ ಕಾಲ ಹರಾಜು ನಡೆಯಲಿದ್ದು, ಮಳಿಗೆ ಬಾಡಿಗೆಗೆ ಪಡೆಯಲು ಪೈಪೋಟಿ ಹೆಚ್ಚಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.