ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ತಡೆ: ಡಿ.ಸಿ ವಿರುದ್ಧ ಆಕ್ರೋಶ

ಮಕ್ಕಳ ಉದ್ಯಾನದ ಜಮೀನು ಒತ್ತುವರಿ ತೆರವಿಗೆ ಒತ್ತಾಯ
Last Updated 22 ಜನವರಿ 2020, 16:23 IST
ಅಕ್ಷರ ಗಾತ್ರ

ಕೋಲಾರ: ನಗರದ ಟೇಕಲ್‌ ರಸ್ತೆ ಸಮೀಪ ಮಕ್ಕಳ ಉದ್ಯಾನಕ್ಕೆ ಮೀಸಲಾಗಿರುವ ಜಮೀನಿನ ಒತ್ತುವರಿ ತೆರವುಗೊಳಿಸಿ ಶೀಘ್ರವೇ ಉದ್ಯಾನದ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿ ಮಕ್ಕಳ ಉದ್ಯಾನ ಹಿತರಕ್ಷಣಾ ಸಮಿತಿ ಸದಸ್ಯರು ಬುಧವಾರ ರಸ್ತೆ ತಡೆ ಮಾಡಿ ಧರಣಿ ನಡೆಸಿದರು.

‘ನಗರದ 14ನೇ ವಾರ್ಡ್‌ ವ್ಯಾಪ್ತಿಯ ಮಕ್ಕಳ ಉದ್ಯಾನದ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಕೆಲ ಖಾಸಗಿ ವ್ಯಕ್ತಿಗಳು ಉದ್ಯಾನದ ಜಾಗ ಕಬಳಿಸಿದ್ದಾರೆ. ಉದ್ಯಾನದಲ್ಲಿನ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿ ಏಳೆಂಟು ತಿಂಗಳಾದರೂ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿಲ್ಲ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಕೆಲ ಖಾಸಗಿ ವ್ಯಕ್ತಿಗಳು ಹಿಂದೆಯೇ ಉದ್ಯಾನದ ಜಾಗ ಒತ್ತುವರಿ ಮಾಡಿ ಗುಡಿಸಲು ನಿರ್ಮಿಸಿದ್ದರು. ಬಳಿಕ ಆ ಗುಡಿಸಲುಗಳನ್ನು ತೆರವು ಮಾಡಲಾಗಿತ್ತು. ಪುನಃ ಆ ವ್ಯಕ್ತಿಗಳು ನಕಲಿ ದಾಖಲೆಪತ್ರ ಸೃಷ್ಟಿಸಿ ಜಾಗ ಅತಿಕ್ರಮಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿಯವರಿಗೆ ಈ ಸಂಗತಿ ಗೊತ್ತಿದ್ದರೂ ಒತ್ತುವರಿ ತೆರವು ಮಾಡಲು ಮೀನಮೇಷ ಎಣಿಸುತ್ತಿದ್ದಾರೆ’ ಎಂದು ನಗರಸಭೆ ಸದಸ್ಯ ಎಸ್‌.ಆರ್‌.ಮುರಳಿಗೌಡ ದೂರಿದರು.

‘ಹಿಂದಿನ ಜಿಲ್ಲಾಧಿಕಾರಿಯು 2017ರಲ್ಲಿ ಮಕ್ಕಳ ಉದ್ಯಾನಕ್ಕಾಗಿ ಜಮೀನು ಮಂಜೂರು ಮಾಡಿದ್ದರು. ಅಲ್ಲದೇ, ಜಮೀನಿನ ದಾಖಲೆಪತ್ರಗಳನ್ನು ನಗರಸಭೆಗೆ ಹಸ್ತಾಂತರಿಸಿದ್ದರು. ಈ ಜಮೀನು ಈಗಾಗಲೇ ನಗರಸಭೆ ಹೆಸರಿಗೆ ಅಧಿಕೃತವಾಗಿ ನೋಂದಣಿಯಾಗಿದೆ. ಆದರೆ, ಒತ್ತುವರಿದಾರರು ನಗರಸಭೆ ಅಧಿಕಾರಿಗಳ ನೆರವಿನಿಂದ ಜಮೀನಿನ ನಕಲಿ ದಾಖಲೆಪತ್ರ ಸೃಷ್ಟಿಸಿದ್ದಾರೆ’ ಎಂದು ಆರೋಪಿಸಿದರು.

ಮೌನಕ್ಕೆ ಶರಣು: ‘ಅಮೃತ್ ಯೋಜನೆಯಡಿ ಮಕ್ಕಳ ಉದ್ಯಾನಕ್ಕೆ ₹ 75 ಲಕ್ಷ ಮೀಸಲಿಡಲಾಗಿದೆ. ಉದ್ಯಾನದ ಜಾಗದಲ್ಲಿದ್ದ  ಹಳೆಯ ಕಟ್ಟಡ ತೆರವುಗೊಳಿಸಿ ಸುತ್ತಲೂ ತಡೆಗೋಡೆ ನಿರ್ಮಿಸಲಾಗಿದೆ. ನಗರಸಭೆ ನಿರ್ಲಕ್ಷ್ಯದಿಂದ ಮೈದಾನಕ್ಕೆ ಮೀಸಲಿಟ್ಟಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಜಾಗ ಖಾಸಗಿ ವ್ಯಕ್ತಿಗಳ ಪಾಲಾಗಿದೆ. ಅಧಿಕಾರಿಗಳಿಗೆ ಈ ಸಂಗತಿ ಗೊತ್ತಿದ್ದರೂ ಒತ್ತುವರಿ ತೆರವು ಮಾಡದೆ ಮೌನಕ್ಕೆ ಶರಣಾಗಿದ್ದಾರೆ’ ಎಂದು ಧರಣಿನಿರತರು ಕಿಡಿಕಾರಿದರು.

‘ಉದ್ಯಾನ ಕಾಮಗಾರಿ ಪೂರ್ಣಗೊಂಡು ಸೇವೆಗೆ ಮುಕ್ತವಾದರೆ ಮಕ್ಕಳಿಗೆ, ವಯೋವೃದ್ಧರಿಗೆ ಹಾಗೂ ನಾಗರಿಕರಿಗೆ ಅನುಕೂಲವಾಗುತ್ತದೆ. ಉದ್ಯಾನದಲ್ಲಿ ಮತ್ಸ್ಯಾಲಯ ಹಾಗೂ ಗ್ರಂಥಾಲಯ ನಿರ್ಮಿಸಬೇಕು. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಬೇರೆಯವರಿಗೆ ಟೆಂಡರ್ ಕೊಡಬೇಕು. ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ನಗರಸಭೆ ಸದಸ್ಯರಾದ ರಾಕೇಶ್‌, ಮಂಜುನಾಥ್‌, ಪ್ರವೀಣ್‌ಗೌಡ, ಮಂಜು, ಮಾಜಿ ಸದಸ್ಯ ಸೋಮಶೇಖರ್‌, ಪೇಟೆಚಾಮನಹಳ್ಳಿ, ಜಯನಗರ, ಚೌಡೇಶ್ವರಿನಗರ, ಕಠಾರಿಪಾಳ್ಯ ಸೇರಿದಂತೆ ವಿವಿಧ ಬಡಾವಣೆ ನಿವಾಸಿಗಳು ಧರಣಿಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT