ಬುಧವಾರ, ಜುಲೈ 28, 2021
21 °C
ವಿಶ್ವ ಪರಿಸರ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಹೇಳಿಕೆ

1.36 ಕೋಟಿ ಸಸಿ ನೆಡುವ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನಲ್ಲಿ ರಾಜ್ಯದೆಲ್ಲೆಡೆ 1.36 ಕೋಟಿ ಸಸಿ ನೆಡುವ ಗುರಿ ಹೊಂದಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್ ತಿಳಿಸಿದರು.

ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಟಮಕದ ನಗರಸಭೆ ಉದ್ಯಾನದಲ್ಲಿ ಸಸಿ ನೆಟ್ಟು ಮಾತನಾಡಿ, ‘ಗಿಡ ಮರ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ. ಜಗತ್ತು ಇಂದು ವಾಯು ಮಾಲಿನ್ಯದಿಂದ ಪರದಾಡುತ್ತಿದೆ. ವಾಯು ಮಾಲಿನ್ಯ ತಡೆಗೆ ಪರಿಸರ ಸಂರಕ್ಷಣೆ ಅಗತ್ಯ’ ಎಂದರು.

‘ಜಿಲ್ಲೆಯಲ್ಲಿ ಅರಣ್ಯ ನಾಶದಿಂದ ಮಳೆ ಕೊರತೆ ಎದುರಿಸುತ್ತಿದ್ದೇವೆ. ಮಳೆ ಕೊರತೆಯಿಂದ ಕೆರೆಗಳು ಬತ್ತಿ ಹೋಗಿವೆ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಮಳೆ ಕೊರತೆ ನೀಗಿಸಲು ಮರ ಗಿಡ ಬೆಳೆಸುವುದು ಅನಿವಾರ್ಯ. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರಣ್ಯೀಕರಣವಾಗಬೇಕು’ ಎಂದು ಸಲಹೆ ನೀಡಿದರು.

‘ಈ ಹಿಂದೆ ಪಠ್ಯಕ್ರಮದಲ್ಲಿ ಪರಿಸರ ರಕ್ಷಣೆಗೆ ಸಂಬಂಧಿಸಿದ ವಿಷಯ ಇರುತಿತ್ತು. ತರಗತಿಗಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಿದರೆ ಮಕ್ಕಳು ಅದನ್ನು ಪಾಲಿಸುತ್ತಿದ್ದರು. ಸಮಾಜದಲ್ಲಿ ಈಗ ಸಾಕಷ್ಟು ಬದಲಾವಣೆಗಳಾಗಿದ್ದು, ಪರಿಸರದಲ್ಲೂ ಏರುಪೇರುಗಳಾಗಿವೆ. ಇದರಿಂದ ಪರಿಸರ ಸಮತೋಲನ ತಪ್ಪಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಪರಿಸರ ನಾಶದಿಂದ ಪ್ರಾಕೃತಿಕ ವಿಕೋಪ ಸಂಭವಿಸುತ್ತಿವೆ. ಇದಕ್ಕೆ ಅವಕಾಶ ನೀಡದೆ ಹೆಚ್ಚಾಗಿ ಗಿಡ ಮರ ಬೆಳೆಸಿ ಪರಿಸರ ಸಮತೋಲನ ಕಾಪಾಡಬೇಕು. ಪ್ಲಾಸ್ಟಿಕ್‌ ವಸ್ತುಗಳ ಬಳಕೆ ಜೀವನದಲ್ಲಿ ಹಾಸುಹೊಕ್ಕಾಗಿದೆ. ಮರು ಬಳಕೆ ಮಾಡಲು ಆಗದ ವಸ್ತುಗಳ ಬಳಕೆಯಿಂದ ಪರಿಸರ ನಾಶವಾಗುತ್ತದೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು’ ಎಂದು ಕಿವಿಮಾತು ಹೇಳಿದರು.

ನೀಲಗಿರಿ ತೆರವು: ‘ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳು ಹಾಗೂ ಶಾಲಾ ಕಾಲೇಜುಗಳಲ್ಲಿ ಗಿಡ ಮರ ಬೆಳೆಸಬೇಕು. ನೀಲಗಿರಿ ಮರಗಳಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ ಮತ್ತು ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಆದ್ದರಿಂದ ನೀಲಗಿರಿ ತೆರವುಗೊಳಿಸಬೇಕು. ಪ್ರಾಣಿ ಸಂಕುಲಕ್ಕೆ ಹಾಗೂ ಜನರಿಗೆ ಉಪಯೋಗವಾಗುವ ಹಣ್ಣಿನ ಗಿಡ ಮರ ಬೆಳೆಸಬೇಕು’ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

‘ಮನುಷ್ಯನ ದುರಾಸೆಯ ಫಲವಾಗಿ ಅರಣ್ಯ ನಾಶವಾಗುತ್ತಿದೆ. ಜನರು ತಮ್ಮ ಮನೆ ಆಂಗಳದಲ್ಲೇ ಮರ ಗಿಡ ಬೆಳಸಬೇಕು. ಇದರಿಂದ ಉಸಿರಾಟಕ್ಕೆ ಶುದ್ಧ ಗಾಳಿ ಸಿಗುತ್ತದೆ ಹಾಗೂ ಆರೋಗ್ಯ ಕಾಪಾಡಿಕೊಳ್ಳಬಹುದು. ಅರಣ್ಯ ಇಲಾಖೆಯು ಸಸಿ ನೆಡುವ ಆಂದೋಲನವನ್ನು ಜಿಲ್ಲೆಯಾದ್ಯಂತ ಮಾಡಬೇಕು’ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್, ಉಪಾಧ್ಯಕ್ಷೆ ಯಶೋದಾ, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜ್‌, ನಗರಸಭೆ ಆಯುಕ್ತ ಶ್ರೀಕಾಂತ್‌ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.