ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಸಿ ಬ್ಯಾಂಕ್‌ ಉಳಿಸಿ ಬೆಳೆಸಿ

ಸಾಲದ ಫಲಾನುಭವಿಗಳಿಗೆ ಶಾಸಕ ಶ್ರೀನಿವಾಸಗೌಡ ಕಿವಿಮಾತು
Last Updated 4 ಜುಲೈ 2020, 15:08 IST
ಅಕ್ಷರ ಗಾತ್ರ

ಕೋಲಾರ: ‘ಯಾವುದೇ ಭದ್ರತೆಯಿಲ್ಲದೆ ಸಾಲ ನೀಡಿ ಬದುಕಿಗೆ ಆಸರೆಯಾಗಿರುವ ಡಿಸಿಸಿ ಬ್ಯಾಂಕನ್ನು ಉಳಿಸಿ ಬೆಳೆಸುವುದು ಮಹಿಳೆಯರ ಜವಾಬ್ದಾರಿ. ಸಕಾಲಕ್ಕೆ ಸಾಲ ಮರುಪಾವತಿಸಿ ನಂಬಿಕೆ ಉಳಿಸಿಕೊಳ್ಳಿ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಕಿವಿಮಾತು ಹೇಳಿದರು.

ಡಿಸಿಸಿ ಬ್ಯಾಂಕ್‌ ಹಾಗೂ ನರಸಾಪುರ ರೇಷ್ಮೆ ಬೆಳೆಗಾರರು ಮತ್ತು ರೈತರ ಸೇವಾ ಸಹಕಾರ ಸಂಘದ ಸಹಯೋಗದಲ್ಲಿ ತಾಲ್ಲೂಕಿನ ಚೆಲುವನಹಳ್ಳಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 48 ಮಹಿಳಾ ಸಂಘಗಳ ಸದಸ್ಯರಿಗೆ ₹ 2.25 ಕೋಟಿ ಸಾಲ ವಿತರಿಸಿ ಮಾತನಾಡಿದರು.

‘ಡಿಸಿಸಿ ಬ್ಯಾಂಕ್‌ ಅವಿಭಜಿತ ಕೋಲಾರ ಜಿಲ್ಲೆಯ ಮಹಿಳೆಯರಿಗೆ ಅತಿ ಹೆಚ್ಚು ಸಾಲ ನೀಡಿದೆ. ಜತೆಗೆ ಸಾಲ ವಸೂಲಾತಿಯಲ್ಲೂ ಮುಂದಿರುವ ಬ್ಯಾಂಕ್‌ನ ಬಗ್ಗೆ ಇಡೀ ರಾಜ್ಯದಲ್ಲೇ ಹೊಗಳಿಕೆಯ ಮಾತು ಕೇಳಿ ಬರುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಅವಿಭಜಿತ ಜಿಲ್ಲೆಯಲ್ಲಿ ಮಹಿಳೆಯರು ಹಾಗೂ ರೈತರಿಂದ ₹ 200 ಕೋಟಿ ಸಾಲಕ್ಕೆ ಬೇಡಿಕೆಯಿದೆ. ಬ್ಯಾಂಕ್‌ನ ₹ 330 ಕೋಟಿ ಠೇವಣಿಯಲ್ಲಿ ಶೇ 80ರಷ್ಟು ಹಣವನ್ನು ಮಹಿಳೆಯರು ಇಟ್ಟಿದ್ದಾರೆ. ಮಹಿಳೆಯರೇ ಬ್ಯಾಂಕ್‌ನ ಆಧಾರ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಹೇಳಿದರು.

‘ಸೊಸೈಟಿಗಳ ಗಣಕೀಕರಣವಾಗುತ್ತಿದ್ದು, ಪಾವತಿಸುವ ಹಣಕ್ಕೆ ತಕ್ಷಣವೇ ರಸೀದಿ ಸಿಗುತ್ತದೆ. ಜತೆಗೆ ಖಾತೆದಾರರಿಗೆ ಎಟಿಎಂ ಕಾರ್ಡ್ ನೀಡುತ್ತೇವೆ. ಗ್ರಾಮಗಳಲ್ಲೇ ಮೈಕ್ರೋ ಎಟಿಎಂ ಸೇವೆ ಕಲ್ಪಿಸುತ್ತೇವೆ. ಅಲ್ಲಿಯೇ ಹಣ ಡ್ರಾ ಮಾಡಿಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.

ಸಾಲ ಮನ್ನಾ: ‘ಮೂರ್ನಾಲ್ಕು ತಿಂಗಳಿಂದ ಕೊರೊನಾ ಸೋಂಕಿನ ಭಯದಲ್ಲಿ ಬದುಕುತ್ತಿದ್ದೇವೆ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರ ಅಧಿಕಾರಾವಧಿಯಲ್ಲಿ ಸಾಲ ಮನ್ನಾ ಮಾಡಿದ್ದರಿಂದ ಜಿಲ್ಲೆಯ ರೈತರು ಹಾಗೂ ಮಹಿಳಾ ಸಂಘಗಳಿಗೆ ಪ್ರಯೋಜನವಾಗಿದೆ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್‌ ಅಭಿಪ್ರಾಯಪಟ್ಟರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸೋಮಣ್ಣ, ಸೊಣ್ಣೇಗೌಡ, ಕೆ.ವಿ.ದಯಾನಂದ್, ನರಸಾಪುರ ಎಸ್‍ಎಫ್‌ಸಿಎಸ್‌ ಅಧ್ಯಕ್ಷ ಕೆ.ಎಂ.ಮುನಿರಾಜು, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷೆ ರಾಜೇಶ್ವರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT