ಶನಿವಾರ, ಅಕ್ಟೋಬರ್ 23, 2021
25 °C

ಸಾಂಪ್ರದಾಯಿಕ ಕ್ರೀಡೆ ಉಳಿಸಿ ಬೆಳೆಸಿ; ಜಿ.ಸುರೇಶ್‌ಬಾಬು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರಾಷ್ಟ್ರ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಸಜ್ಜಾಗುತ್ತಿರುವ ಖೋಖೋ ಪಟುಗಳು ಯಶಸ್ವಿಯಾಗಿ ತರಬೇತಿ ಪೂರೈಸಿ ನಾಡಿಗೆ ಕೀರ್ತಿ ತನ್ನಿ’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಆಶಿಸಿದರು.

40ನೇ ರಾಷ್ಟ್ರೀಯ ಬಾಲಕ, ಬಾಲಕಿಯರ ರಾಜ್ಯ ಖೋಖೋ ತಂಡದ ಆಯ್ಕೆಗೆ ಇಲ್ಲಿ ನಡೆಯುತ್ತಿರುವ ತರಬೇತಿ ಶಿಬಿರದಲ್ಲಿ ಮಾತನಾಡಿ, ‘ದೇಶಿ ಸಾಂಪ್ರದಾಯಿಕ ಕ್ರೀಡೆಗಳಾದ ಕಬಡ್ಡಿ, ಖೋಖೋ ಜನಮನದಿಂದ ದೂರವಾಗದಂತೆ ಉಳಿಸಿ ಬೆಳೆಸುವ ಅಗತ್ಯವಿದೆ. ವಿವಿಧ ಜಿಲ್ಲೆಗಳಿಂದ ಬಂದು ತರಬೇತಿಯಲ್ಲಿ ಪಾಲ್ಗೊಂಡಿರುವ ಬಾಲಕ, ಬಾಲಕಿಯರು ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ’ ಎಂದು ಕಿವಿಮಾತು ಹೇಳಿದರು.

‘ಸರ್ಕಾರಿ ನೌಕರರ ಸಂಘ ಸದಾ ಕ್ರೀಡಾಪಟುಗಳ ಜತೆ ಇರುತ್ತದೆ. ನಿಮ್ಮ ತರಬೇತಿ, ಸಾಧನೆಗೆ ಪೂರ್ಣ ಸಹಕಾರವಿದೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಸೋಲು, ಗೆಲುವು ಸಮನಾಗಿ ಸ್ವೀಕರಿಸುವ ಶಕ್ತಿ ಹೆಚ್ಚುತ್ತದೆ. ಕ್ರೀಡೆಗಳು ಜ್ಞಾಪಕ ಶಕ್ತಿ, ಕಲಿಕಾ ಶಕ್ತಿ ಹೆಚ್ಚಿಸುವುದರ ಜತೆಗೆ ಆರೋಗ್ಯಗೆ ಸಹಕಾರಿ. ಶೈಕ್ಷಣಿಕ ಸಾಧನೆಗೆ ಮತ್ತಷ್ಟು ಸ್ಫೂರ್ತಿ ಬರುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಜಿಲ್ಲೆಯಲ್ಲಿ ರಾಷ್ಟ್ರೀಯ ಪಂದ್ಯಾವಳಿ ನಡೆಸುವ ಕನಸಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸುತ್ತೇವೆ. ರಾಜ್ಯ ಮಟ್ಟದ ಖೋಖೋ ತಂಡಕ್ಕೆ ಆಯ್ಕೆ ಮತ್ತು ತರಬೇತಿ ನೀಡುವ ಅವಕಾಶ ಜಿಲ್ಲೆಗೆ ಸಿಕ್ಕಿರುವುದು ಸಂತಸ ತಂದಿದೆ’ ಎಂದು ಜಿಲ್ಲಾ ಕಬಡ್ಡಿ ಮತ್ತು ಖೋಖೋ ಸಂಸ್ಥೆ ಅಧ್ಯಕ್ಷ ಶ್ರೀಧರ್ ಹೇಳಿದರು.

ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್, ನಿರ್ಗಮಿತ ತಹಶೀಲ್ದಾರ್‌ ಶೋಭಿತಾ, ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ ಚಿಲಕಾಂತಮಠ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಖಜಾಂಚಿ ವಿಜಯ್, ಗೌರವಾಧ್ಯಕ್ಷ ಶ್ರೀನಿವಾಸರೆಡ್ಡಿ, ಉಪಾಧ್ಯಕ್ಷರಾದ ಪುರುಷೋತ್ತಮ್, ಅಜಯ್, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಮುರಳಿಮೋಹನ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು