ಶುಕ್ರವಾರ, ಜೂನ್ 5, 2020
27 °C
ರೇಷ್ಮೆಗೂಡು ಮಾರುಕಟ್ಟೆ ಅಧಿಕಾರಿಗಳಿಗೆ ಸಂಸದ ಮುನಿಸ್ವಾಮಿ ಸೂಚನೆ

ಹೊರ ರಾಜ್ಯದ ರೈತರಿಗೆ ಪ್ರತ್ಯೇಕ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯ ರೇಷ್ಮೆಗೂಡು ಮಾರುಕಟ್ಟೆಗೆ ಬರುವ ಹೊರ ರಾಜ್ಯದ ರೈತರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು’ ಎಂದು ಸಂಸದ ಎಸ್.ಮುನಿಸ್ವಾಮಿ ಸೂಚಿಸಿದರು.

ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಬುಧವಾರ ಸೋಂಕು ನಿವಾರಣಾ ಸುರಂಗ ಮಾರ್ಗ ಉದ್ಘಾಟಿಸಿ ಮಾತನಾಡಿ, ‘ಮಾರುಕಟ್ಟೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ರೈತರು ಮಾರುಕಟ್ಟೆಗೆ ರೇಷ್ಮೆಗೂಡು ತರುವ ಬದಲು ರೀಲರ್‌ಗಳೇ ರೈತರ ಬಳಿ ಹೋಗಿ ಗೂಡು ಖರೀದಿಸುವ ವ್ಯವಸ್ಥೆ ಜಾರಿ ಮಾಡಬೇಕು’ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೈತರು, ‘ರೀಲರ್‌ಗಳು ಮಾರುಕಟ್ಟೆ ಬೆಲೆಗಿಂತ ಕಡಿಮೆ ದರಕ್ಕೆ ಗೂಡು ಖರೀದಿಸಿ ವಂಚಿಸುತ್ತಾರೆ. ಜತೆಗೆ ಹಣ ಕೊಡಲು ವಿಳಂಬ ಮಾಡುತ್ತಾರೆ. ಬೇರೆ ರಾಜ್ಯದ ರೇಷ್ಮೆಗೂಡು ಸ್ಥಳೀಯ ಮಾರುಕಟ್ಟೆಗೆ ಬಾರದಂತೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೆ.ಶ್ರೀನಿವಾಸಗೌಡ, ‘ಎಲ್ಲಾ ಭಾಗದ ರೈತರು ಒಂದೇ. ಅವರಿಗೆ ಈ ವಿಚಾರದಲ್ಲಿ ತೊಂದರೆ ಮಾಡಿದರೆ ಅವರು ನಮಗೆ ತರಕಾರಿ ಕೊಂಡೊಯ್ಯಲು ಅಡ್ಡಿಪಡಿಸುತ್ತಾರೆ. ಹೊರ ರಾಜ್ಯದ ರೈತರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು’ ಎಂದು ಸಲಹೆ ನೀಡಿದರು.

ಹಣ ಬಿಡುಗಡೆಯಾಗಲಿ: ‘ಬೆಂಗಳೂರಿನಲ್ಲಿ ನೂಲು ಖರೀದಿಗೆ ವರ್ತಕರು ಮುಂದೆ ಬರುತ್ತಿಲ್ಲ. ರಾಜ್ಯ ರೇಷ್ಮೆ ಮಂಡಳಿಯಲ್ಲಿ ₹ 9 ಕೋಟಿ ಹಣ ಉಳಿಕೆಯಾಗಿದ್ದು, ಅದನ್ನು ಬಿಡುಗಡೆ ಮಾಡಬೇಕು’ ಎಂದು ಜಿಲ್ಲೆಯ ನೂಲು ಬಿಚ್ಚಾಣಿಕೆದಾರರ ಸಂಘದ ಅಧ್ಯಕ್ಷ ಅಫ್ಜರ್‌ ಮನವಿ ಮಾಡಿದರು.

‘ದಿಗ್ಬಂಧನದ ಕಾರಣಕ್ಕೆ ದೇಶದಲ್ಲಿ ಎಲ್ಲಾ ವಹಿವಾಟು ಸ್ಥಗಿತಗೊಳಿಸಲಾಗಿದೆ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗಿದೆ. ಸರ್ಕಾರ ರೈತರ ಸಮಸ್ಯೆ ಅರಿತು ದಿಗ್ಬಂಧನ ಆದೇಶದಲ್ಲಿ ಕೆಲ ಸಡಿಲಿಕೆ ಮಾಡಿದೆ. ಇದನ್ನು ದುರ್ಬಳಕೆ ಮಾಡಿಕೊಳ್ಳಬಾರದು. ರೇಷ್ಮೆಗೂಡನ್ನು ಕಡಿಮೆ ಬೆಲೆಗೆ ಕೇಳುವ ರೀಲರ್‌ಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ರೀಲರ್‌ಗಳು ರೈತರಿಂದ ಗೂಡು ಖರೀದಿಸುವಾಗ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು’ ಎಂದು ಎಚ್ಚರಿಕೆ ನೀಡಿದರು.

ದಿಗ್ಬಂಧನ ಮುಂದುವರಿಕೆ: ‘ದೇಶ ಮತ್ತು ರಾಜ್ಯದಲ್ಲಿ ದಿನೇದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ದಿಗ್ಬಂಧನ ಮುಂದುವರಿಯುವ ಸಾಧ್ಯತೆಯಿದೆ. ಜನ ಪರಿಸ್ಥಿತಿಯ ಗಂಭೀರತೆ ಅರಿತು ವಿನಾಕಾರಣ ಹೊರಗೆ ಓಡಾಡುವುದನ್ನು ನಿಲ್ಲಿಸಬೇಕು. ಜನರ ಓಡಾಟ ನಿಯಂತ್ರಿಸಲು ಪೊಲೀಸರಿಗೆ ವಿಶೇಷ ಅಧಿಕಾರ ನೀಡಲಾಗಿದೆ’ ಎಂದು ವಿವರಿಸಿದರು.

ಸಂಸದ ಹಾಗೂ ಶಾಸಕರು ರೇಷ್ಮೆ ಬೆಳೆಗಾರರ ಸಮಸ್ಯೆ ಆಲಿಸಿದರು. ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಗೂಡು ಮಾರುಕಟ್ಟೆ ಸಹಾಯಕ ನಿರ್ದೇಶಕಿ ರೆಡ್ಡಿಲಕ್ಷ್ಮಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು