ಶನಿವಾರ, ಸೆಪ್ಟೆಂಬರ್ 25, 2021
27 °C

ಶಂಕರಾಚಾರ್ಯರ ಭವ್ಯ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ನಗರದ ಶಂಕರ ಸೇವಾ ಸಮಿತಿಯು ಇಲ್ಲಿ ಗುರುವಾರ ಶಂಕರಾಚಾರ್ಯರ ಭವ್ಯ ರಥೋತ್ಸವ ಮತ್ತು ವೇದ ಪಾರಾಯಣ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ನಡೆಸಿತು.

ಶಂಕರಾಚಾರ್ಯರ ಮೂರ್ತಿಯನ್ನು ಭವ್ಯವಾಗಿ ಅಲಂಕರಿಸಿ ರಥದಲ್ಲಿ ಸಂಕೀರ್ತನೆಯೊಂದಿಗೆ ನಗರದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ತೊಟ್ಲಿ ಗ್ರಾಮದ ರಮೇಶ್ ತಂಡದ ವಾದ್ಯ ಮೇಳದೊಂದಿಗೆ ಮೆರವಣಿಗೆ ಸಾಗಿತು.

ಮೆರವಣಿಗೆಯು ನಗರದ ಕಾಲೇಜು ವೃತ್ತ, ಬ್ರಾಹ್ಮಣರ ಬೀದಿ, ದೊಡ್ಡಪೇಟೆ, ಕಾಳಮ್ಮ ಗುಡಿ ರಸ್ತೆ ಮೂಲಕ ಸಂಚರಿಸಿ ಶಂಕರಮಠ ಸೇರಿತು. ದಾರಿಯುದ್ದಕ್ಕೂ ಜನರು ರಥಕ್ಕೆ ಪೂಜೆ ಸಲ್ಲಿಸಿದರು. ಮಹಿಳಾ ಮಂಡಳಿ ಮತ್ತು ಸಮಿತಿ ವತಿಯಿಂದ ಸಾಮೂಹಿಕ ಶಂಕರ ಸ್ತೋತ್ರ ಗಾಯನ, ಅನ್ನದಾಸೋಹ ನಡೆಸಲಾಯಿತು.

ರಥೋತ್ಸವದ ನಂತರ ನಡೆದ ವೇದ ಪಾರಾಯಣದಲ್ಲಿ ಸಮಿತಿ ಮುಖಂಡರು ಮಾತನಾಡಿ, ‘ಸ್ವಾರ್ಥವಿಲ್ಲದ ಕಡೆ ಸಮೃದ್ಧಿ ಇರುತ್ತದೆ. ಶಾಲೆಯ ಪಠ್ಯದಲ್ಲಿ ಶಂಕರಾಚಾರ್ಯರ ತತ್ವ ಅಳವಡಿಸಿದರೆ ಜಾತೀಯತೆ ಹೋಗಿ ಸಮ ಸಮಾಜ ನಿರ್ಮಾಣವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಶಂಕರಾಚಾರ್ಯರು 8ನೇ ವಯಸ್ಸಿಗೆ ನಾಲ್ಕು ವೇದಗಳ ಅಧ್ಯಯನ ಪೂರೈಸಿದರು. 12ನೇ ವರ್ಷಕ್ಕೆ ನಾಲ್ಕು ವೇದಗಳ ಭಾಷ್ಯಾ ಬರೆದರು. ವೇದಗಳನ್ನು ಸರಳ ಭಾಷೆಯಲ್ಲಿ ಜನರಿಗೆ ತಲುಪಿಸಿದರು. ದೇಶ ಪರ್ಯಟನೆ ಮಾಡಿ ಅಖಂಡ ಭಾರತದ ಕಲ್ಪನೆ ಸಾಕಾರಗೊಳಿಸಿದ ಕೀರ್ತಿ ಅವರದು’ ಎಂದು ಸ್ಮರಿಸಿದರು.

ಸಮಿತಿ ಅಧ್ಯಕ್ಷ ಕಾರ್ತಿಕ್ ಕೃಷ್ಣಮೂರ್ತಿ, ಕಾರ್ಯದರ್ಶಿ ಜೆ.ಎನ್.ರಾಮಕೃಷ್ಣ, ಖಜಾಂಚಿ ಮುರಳಿ ಸುಂದರ್, ಬ್ರಾಹ್ಮಣರ ಸಂಘದ ಅಧ್ಯಕ್ಷ ವಾಸುದೇವಮೂರ್ತಿ ಪಾಲ್ಗೊಂಡಿದ್ದರು. ಲೋಕಸಭಾ ಚುನಾವಣಾ ನೀತಿಸಂಹಿತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಸರಳವಾಗಿ ಶಂಕರ ಜಯಂತಿ ಆಚರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.