ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಕಾಯಂ ಉಪನ್ಯಾಸಕರಿಗಿಂತ ‘ಅತಿಥಿ’ಗಳೇ ಹೆಚ್ಚು!

ಬಾಲಕಿಯರ ಸರ್ಕಾರಿ ಪದವಿ ಕಾಲೇಜು, ಪ್ರಥಮದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ
Published 3 ಜನವರಿ 2024, 6:30 IST
Last Updated 3 ಜನವರಿ 2024, 6:30 IST
ಅಕ್ಷರ ಗಾತ್ರ

ಕೋಲಾರ: ಸಾವಿರಾರು ವಿದ್ಯಾರ್ಥಿಗಳನ್ನು ಹೊಂದಿರುವ ಜಿಲ್ಲೆಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಕೊರತೆ ದೊಡ್ಡಮಟ್ಟದಲ್ಲಿ ಕಾಡುತ್ತಿದ್ದು, ಪಾಠ ಮಾಡಲು ತೊಂದರೆ ಉಂಟಾಗಿದೆ.

ಗ್ರಾಮಾಂತರ ಹಾಗೂ ಪಟ್ಟಣ ಪ್ರದೇಶದ ಬಹುತೇಕ ಮಕ್ಕಳು ಸರ್ಕಾರಿ ಪದವಿ ಕಾಲೇಜುಗಳನ್ನೇ ನೆಚ್ಚಿಕೊಂಡಿದ್ದು, ಕಾಯಂ ಉಪನ್ಯಾಸಕರ ಕೊರತೆ ಜೊತೆಗೆ ಅತಿಥಿ ಉಪನ್ಯಾಸಕರ ಮುಷ್ಕರದಿಂದ ಮತ್ತಷ್ಟು ಸಮಸ್ಯೆ ನಿರ್ಮಾಣವಾಗಿದೆ. ಬಹುತೇಕ ಕಾಲೇಜುಗಳಲ್ಲಿ ಕಾಯಂಗಿಂತ ಅತಿಥಿ ಉಪನ್ಯಾಸಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಕೋಲಾರ ನಗರದ ಬಾಲಕಿಯರ ಸರ್ಕಾರಿ ಪದವಿ ಕಾಲೇಜಿನಲ್ಲಿ 3,200 ವಿದ್ಯಾರ್ಥಿನಿಯರು ಇದ್ದರೆ, ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ 1,750 ವಿದ್ಯಾರ್ಥಿಗಳಿದ್ದಾರೆ. ಈ ಎರಡೂ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರೇ ಅಧಿಕ ಸಂಖ್ಯೆಯಲ್ಲಿದ್ದು, ಕಾಯಂ ಉಪನ್ಯಾಸಕರ ಕೊರತೆ ಇದೆ.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕೇವಲ 37 ಕಾಯಂ ಉಪನ್ಯಾಸಕರು ಇದ್ದಾರೆ. ಇಂಗ್ಲಿಷ್, ಕೆಮಿಸ್ಟ್ರಿ ಹಾಗೂ ಕಂಪ್ಯೂಟರ್ ಸೈನ್ಸ್ ವಿಷಯಗಳಿಗೆ ಒಬ್ಬರೂ ಕಾಯಂ ಇಲ್ಲ. 47 ಮಂದಿ ಅತಿಥಿ ಉಪನ್ಯಾಸಕರು ಇದ್ದಾರೆ. ‘ಅತಿಥಿ’ಗಳು ತಿಂಗಳಿನಿಂದ ತರಗತಿ ಬಹಿಷ್ಕರಿಸಿರುವುದರಿಂದ ಈ ವಿಷಯಗಳ ಪಾಠ ನಿಂತು ಹೋಗಿದೆ. ದಿನಕ್ಕೆ ಸರಾಸರಿ 49 ಗಂಟೆ ಪಾಠ ನಷ್ಟವಾಗುತ್ತಿದೆ. ಇಂಗ್ಲಿಷ್‌ಗೆ ಉಪನ್ಯಾಸಕರು ಇಲ್ಲದೆ ಮಕ್ಕಳಿಗೆ ಈ ವಿಷಯ ಕಷ್ಟಕರವಾಗಿ ಪರಿಣಮಿಸಿದೆ. ಕಾಯಂ ಉಪನ್ಯಾಸಕರೇ ಅಧಿಕ ಕ್ಲಾಸ್‌ ತೆಗೆದುಕೊಂಡು ಕೊರತೆ ಸರಿದೂಗಿಸಲು ಸೂಚನೆ ನೀಡಿರುವುದಾಗಿ ಪ್ರಾಂಶುಪಾಲ ಪ್ರೊ.ಕೆ.ಎನ್‌.ಶ್ರೀನಿವಾಸಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಬಾಲಕಿಯರ ಸರ್ಕಾರಿ ಪದವಿ ಕಾಲೇಜಿನಲ್ಲಿ 3,200 ವಿದ್ಯಾರ್ಥಿನಿಯರು ಇದ್ದಾರೆ. ಇವರಿಗೆ ಇರುವುದು ಕೇವಲ 37 ಕಾಯಂ ಉಪನ್ಯಾಸಕರು. ಇಲ್ಲಿ 75 ಮಂದಿ ಅತಿಥಿ ಉಪನ್ಯಾಸಕರಿದ್ದಾರೆ. ಹಲವಾರು ವಿಷಯಗಳಿಗೆ ಕಾಯಂ ಉಪನ್ಯಾಸಕರು ಇಲ್ಲ. ಹೀಗಾಗಿ, ಅತಿಥಿಗಳನ್ನೇ ನೆಚ್ಚಿಕೊಳ್ಳಬೇಕಿದೆ. ಸರಿಯಾಗಿ ಪಾಠಗಳು ನಡೆಯದೆ ತೊಂದರೆ ಆಗಿದೆ ಎಂದು ವಿದ್ಯಾರ್ಥಿನಿಯರು ಒಪ್ಪಿಕೊಳ್ಳುತ್ತಾರೆ. ಸಮಸ್ಯೆ ಹೇಳಿಕೊಂಡರೆ ಪ್ರಾಂಶುಪಾಲರು ಸರಿಯಾಗಿ ಸ್ಪಂದಿಸುವುದಿಲ್ಲವೆಂದು ವಿದ್ಯಾರ್ಥಿನಿಯರು ದೂರುತ್ತಾರೆ. ಈ ಕಾಲೇಜಿನ ಕಾಯಂ ಉಪನ್ಯಾಸಕರೂ ಸರಿಯಾಗಿ ಪಾಠ ಮಾಡುತ್ತಿಲ್ಲ ಎಂಬ ಆರೋಪಗಳಿವೆ. 

‘ನಮ್ಮ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಮುಷ್ಕರದಲ್ಲಿ ತೊಡಗಿದ್ದರು. ಸೋಮವಾರ 24 ಮಂದಿ ಅತಿಥಿ ಉಪನ್ಯಾಸಕರು ತರಗತಿಗೆ ಬಂದು ವರದಿ ಮಾಡಿಕೊಂಡಿದ್ದಾರೆ’ ಎಂದು ಮಹಿಳಾ ಕಾಲೇಜಿನ ಪ್ರಾಂಶುಪಾಲ ಗಂಗಾಧರ್‌ ತಿಳಿಸಿದರು. 

ಜಿಲ್ಲೆಯಲ್ಲಿ 11 ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಿವೆ. ಕೋಲಾರ (3), ವೇಮಗಲ್‌ (1), ಬಂಗಾರತಿರುಪತಿ (1), ದೇವರಾಯ ಸಮುದ್ರ (1), ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ, ಕೆಜಿಎಫ್‌, ಬಂಗಾರಪೇಟೆ (ತಲಾ 1) ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ.

1,242 ಉಪನ್ಯಾಸಕರನ್ನು ಈಚೆಗೆ ರಾಜ್ಯ ಸರ್ಕಾರ ನೇಮಕ ಮಾಡಿಕೊಂಡಿದೆ. ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು, ಗ್ರಾಮಾಂತರ ಕಾಲೇಜುಗಳಿಗೆ ಮೊದಲ ಆದ್ಯತೆ ಮೇರೆಗೆ ನಿಯೋಜನೆ ಮಾಡುವ ಸಾಧ್ಯತೆ ಇದೆ. ಆದರೆ, ನಗರ ಪ್ರದೇಶದ ಕಾಲೇಜುಗಳಿಗೆ ಸಿಗುವುದು ಅನುಮಾನ ಎನ್ನಲಾಗುತ್ತಿದೆ.

‘ಅತಿಥಿ’ಗಳ ಮುಷ್ಕರದಿಂದ ತೊಂದರೆ

ತಿಂಗಳಿನಿಂದ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಮುಷ್ಕರದಲ್ಲಿ ತೊಡಗಿರುವುದರಿಂದ ಸರ್ಕಾರಿ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮತ್ತಷ್ಟು ತೊಂದರೆ ಉಂಟಾಗಿದೆ. ಸರಿಯಾಗಿ ತರಗತಿಗಳು ನಡೆಯದೆ ಶೇ 50ರಷ್ಟು ಪಾಠ ಇನ್ನೂ ಮುಗಿದಿಲ್ಲ. ಫೆಬ್ರುವರಿ ಮೊದಲು ವಾರದಲ್ಲಿ ಸೆಮಿಸ್ಟರ್‌ ಪರೀಕ್ಷೆಗಳು ಆರಂಭವಾಗಲಿವೆ. ಇದರಿಂದ ಈ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಮೇಲೆ ದೊಡ್ಡ ಹೊಡೆತ ಬೀಳುವ ಆತಂಕ ಎದುರಾಗಿದೆ. ಈಚೆಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಬೆಂಗಳೂರಿನಲ್ಲಿ ಅತಿಥಿ ಉಪನ್ಯಾಸಕರ ಸಭೆ ನಡೆಸಿದರಾದರೂ ಮುಷ್ಕರ ಕೈಬಿಟ್ಟಿಲ್ಲ.

ನಮ್ಮ ಕಾಲೇಜಿನಲ್ಲಿ ಕಾಯಂ ಉಪನ್ಯಾಸಕರ ಕೊರತೆ ಇದೆ. ಇದರಿಂದ ತರಗತಿ ನಡೆಸಲು ತೊಂದರೆ ಆಗುತ್ತಿದೆ. ಪ್ರಮುಖವಾಗಿ ಇಂಗ್ಲಿಷ್‌ ವಿಷಯಕ್ಕೆ ಒಬ್ಬರೂ ಕಾಯಂ ಉಪನ್ಯಾಸಕರಿಲ್ಲ.
-ಪ್ರೊ.ಕೆ.ಎನ್‌.ಶ್ರೀನಿವಾಸಗೌಡ ಪ್ರಾಂಶುಪಾಲ ಸರ್ಕಾರಿ ಪ್ರಥಮದರ್ಜೆ ಕಾಲೇಜು ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT