ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

ಬಂಗಾರಪೇಟೆ: ಆರನೇ ಗ್ಯಾರಂಟಿ ಜಾರಿಗೆ ಸಿಬ್ಬಂದಿ ಕೊರತೆ

ಅರ್ಧಕ್ಕೆ ನಿಂತ ‘ಗೃಹ ಆರೋಗ್ಯ’ ಯೋಜನೆ
ಮಂಜುನಾಥ ಎಸ್.
Published : 27 ಮೇ 2025, 6:34 IST
Last Updated : 27 ಮೇ 2025, 6:34 IST
ಫಾಲೋ ಮಾಡಿ
0
ಬಂಗಾರಪೇಟೆ: ಆರನೇ ಗ್ಯಾರಂಟಿ ಜಾರಿಗೆ ಸಿಬ್ಬಂದಿ ಕೊರತೆ

ಬಂಗಾರಪೇಟೆ ತಾಲ್ಲೂಕಿನ ಮುಷ್ಟ್ರಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಉಪ ಕೇಂದ್ರಕ್ಕೆ ವೈದ್ಯ ಕೊರತೆಯಿಂದ ಬೀಗ ಹಾಕಿರುವುದು


ಬಂಗಾರಪೇಟೆ: ಮನೆ ಬಾಗಿಲಿಗೆ ತೆರಳಿ ವಿವಿಧ ಆರೋಗ್ಯ ತಪಾಸಣೆ ಮಾಡಿ ಔಷಧ ವಿತರಿಸುವ ‘ಗೃಹ ಆರೋಗ್ಯ ಯೋಜನೆ’ ಕರ್ನಾಟಕದ 6ನೇ ಗ್ಯಾರಂಟಿ ಯೋಜನೆ. 

ADVERTISEMENT
ADVERTISEMENT

ಗೃಹ ಆರೋಗ್ಯ ಯೋಜನೆಗೆ 2024ರ ಅಕ್ಟೋಬರ್‌ನಲ್ಲಿ ಕೋಲಾರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದ್ದು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದ್ದರು.      

ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಪ್ರಾಯೋಗಿಕವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿತ್ತು. ಆದರೆ, ಜಾರಿಯಾಗಿ ಏಳು ತಿಂಗಳು ಮುಗಿದರೂ ಯೋಜನೆ ಜನತೆಯನ್ನು ತಲುಪುವಲ್ಲಿ ವಿಫಲವಾಗಿದೆ.

ಸಮುದಾಯ ಆರೋಗ್ಯಾಧಿಕಾರಿಗಳು, ಪ್ರಾಥಮಿಕ ಸುರಕ್ಷಣಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರನ್ನು ಒಳಗೊಂಡ ವೈದ್ಯಕೀಯ ತಂಡ ಮೊದಲು ಗ್ರಾಮೀಣ ಪ್ರದೇಶದ ಮನೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿ, ಅಗತ್ಯವಿರುವವರಿಗೆ ಔಷಧಿಗಳನ್ನು ವಿತರಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.

ADVERTISEMENT

ಯೋಜನೆ ಅಡಿ ಪ್ರತಿ ಮನೆಗೂ ತೆರಳಿ 30 ವರ್ಷ ಮೇಲ್ಪಟ್ಟ ಎಲ್ಲರ ಆರೋಗ್ಯ ತಪಾಸಣೆ ನಡೆಸಿ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿರುವವರಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು ಮಾತ್ರೆ ನೀಡುವುದು ಮೂಲ ಉದ್ದೇಶ.

ಔಷಧವನ್ನು ಪ್ರತಿ ತಿಂಗಳು ಪರಿಶೀಲಿಸಿ, ಮುಂದುವರಿಕೆಗೆ ಅಗತ್ಯವಿರುವ ಮಾತ್ರೆಗಳನ್ನು ನೀಡಬೇಕಾಗುವುದು. ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಈ ತಪಾಸಣೆ ನಡೆಸಿ ಪ್ರತಿ ದಿನ ತಲಾ 15 ಮನೆಗಳಿಗೆ ತಂಡಗಳು ಭೇಟಿ ನೀಡಿ ತಪಾಸಣೆ ಮಾಡುವುದು ಯೋಜನೆಯ ರೂಪರೇಷೆ.

ಆದರೆ, ಯೋಜನೆಯ ಆರಂಭದಲ್ಲಿ ಮನೆ ಮನೆಗೆ ಭೇಟಿ ನೀಡಿ ಪರಿಶೀಲಿಸಿ ಔಷಧಿಗಳನ್ನು ವಿತರಿಸುತ್ತಿದ್ದ ತಂಡ, ಕಾಲಕ್ರಮೇಣ ಸಿಬ್ಬಂದಿ ಕೊರತೆಯಿಂದ ಬಹುತೇಕ ಸ್ಥಗಿತಗೊಂಡಿದೆ. ಯಾರೂ ಮನೆಮನೆಗೆ ಭೇಟಿ ನೀಡಿ ತಪಾಸಣೆ ಕಾರ್ಯ ಕೈಗೊಳ್ಳುತ್ತಿಲ್ಲ. ಯೋಜನೆಯೊಂದನ್ನು ಜಾರಿಗೆ ತರುವ ಮುನ್ನ ಅಗತ್ಯ ವ್ಯವಸ್ಥೆ ಮಾಡಿಕೊಳ್ಳದಿದ್ದರೆ ಯೋಜನೆಗಳು ಯೋಜನೆಯಾಗಿಯೇ ಇರುತ್ತವೆ ಎನ್ನಲು 6ನೇ ಗ್ಯಾರಂಟಿ ಸಾಕ್ಷಿಯಾಗಿದೆ.

ಗೃಹ ಆರೋಗ್ಯ ಯೋಜನೆಯ ಅಡಿಯಲ್ಲಿ ಔಷಧಿಗಳು ಲಭ್ಯ ಇವೆ. ಔಷಧಿಗಳನ್ನು ವಿತರಿಸದೆ ಇರುವ ಕುರಿತು ದೂರುಗಳು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು
– ಡಾ. ಸುನಿಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾಲ್ಲೂಕು ವೈದ್ಯಾಧಿಕಾರಿ
ಜನವರಿಯಿಂದ ಯಾವ ಆರೋಗ್ಯ ಸಿಬ್ಬಂದಿಯೂ ಇಲ್ಲ. ಔಷಧ, ಮಾತ್ರೆಗಳೂ ಇಲ್ಲ. ಸರ್ಕಾರದ ಯೋಜನೆಗಳು ಒಂದೆರಡು ದಿನಕ್ಕೆ ಸೀಮಿತವಾಗಬಾರದು
– ಎಚ್.ಆರ್. ಶ್ರೀನಿವಾಸ್, ಹುಣಸನಹಳ್ಳಿ ಗ್ರಾ.ಪಂ ಸದಸ್ಯ
ಸಮುದಾಯ ಆರೋಗ್ಯಾಧಿ ಕಾರಿಗಳು, ಪ್ರಾಥಮಿಕ ಸುರಕ್ಷಣಾಧಿಕಾರಿಗಳು,ಆಶಾ ಕಾರ್ಯಕರ್ತೆಯರು ಇದಕ್ಕೆ ಕಾರಣ. ಅವರ ಇಚ್ಛಾಶಕ್ತಿ ಕೊರತೆಯಿಂದ ಯೋಜನೆ ವಿಫಲವಾದಂತಾಗಿದೆ
– ಬೋಪ್ಪನಹಳ್ಳಿ ನಾರಾಯಣಪ್ಪ, ಸ್ಥಳೀಯ
ಕೆಲ ದಿನ ಗೃಹ ಆರೋಗ್ಯ ಇಲಾಖೆ ಸಿಬ್ಬಂದಿ ಬಂದು ತಪಾಸಣೆ ಮಾಡಿ ಮಾತ್ರೆ ಕೊಟ್ಟು ಹೋಗುತ್ತಿದ್ದರು. ಇದು ಬಹಳ ಉಪಯುಕ್ತವಾಗಿತ್ತು. ಈಗ ಔಷಧಿಯೂ ಇಲ್ಲ, ತಪಾಸಣೆಯೂ ಇಲ್ಲ
– ಗೋವಿಂದಮ್ಮ, ಪೋಲೇನಹಳ್ಳಿ
ತಾಲ್ಲೂಕಿನಲ್ಲಿ ವೈದ್ಯರ ಕೊರತೆಯಿಂದಾಗಿ ಪ್ರಾಥಮಿಕ ಆರೋಗ್ಯ ಉಪ ಕೇಂದ್ರಗಳಿಗೆ ಬೀಗ ಹಾಕಲಾಗಿದೆ. ಹೀಗಿರುವಾಗ ಗೃಹ ಆರೋಗ್ಯ ಯೋಜನೆಯ ಅನುಷ್ಠಾನ ಹಾಸ್ಯಾಸ್ಪದ ಎನಿಸುತ್ತದೆ
– ಸೂಲಿಕುಂಟೆ ಆನಂದ್, ದಲಿತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0