ಭಾನುವಾರ, ಮೇ 16, 2021
23 °C
ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು

ಮಠಗಳು ಜಾತಿ ರಾಜಕಾರಣ ಬೆಂಬಲಿಸಬಾರದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಾತಿಯ ಮಠಗಳು ಸ್ಥಾಪನೆಯಾದರೆ ತಪ್ಪಲ್ಲ. ಆದರೆ, ಮಠಗಳು ಜಾತಿ ರಾಜಕಾರಣ ಬೆಂಬಲಿಸಬಾರದು. ಸರ್ವರಿಗೂ ಮಠಗಳ ಬಾಗಿಲು ತೆರೆದಿರಬೇಕು’ ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು ಹೇಳಿದರು.

ಸಹಮತ ವೇದಿಕೆಯು ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿ, ‘ಜಾತಿ ರಾಜಕಾರಣ ಬೆಂಬಲಿಸುವ ಮಠಗಳಿಗೆ ಹೋರಾಟದ ಮೂಲಕ ಬುದ್ಧಿ ಕಲಿಸಬೇಕು’ ಎಂದರು.

‘ಜಗತ್ತಿನ ಎಲ್ಲಾ ಧರ್ಮಗಳು ದಯೆಯನ್ನೇ ಸಾರಿವೆ. ಜೀವ ರಾಶಿಗಳಲ್ಲಿ ಪ್ರೇಮ ಅನುಕಂಪ ಇರಬೇಕು ಎಂಬುದನ್ನು ಒತ್ತಿ ಹೇಳಿವೆ. ಸಕಲ ಜೀವಿಗಳಿಗೆ ಲೇಸು ಬಯಸುವುದೇ ಎಲ್ಲಾ ಧರ್ಮಗಳ ಗುರಿ. ಧರ್ಮದಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಧರ್ಮದ ಹಾದಿಯಲ್ಲಿ ನಡೆಯುವವರು ಧರ್ಮಾಂಧತೆ ಮೂಡಿಸುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಜಗತ್ತಿನಲ್ಲಿ ತಪ್ಪು ಮಾಡದವರು ಯಾರೂ ಇಲ್ಲ. ಮಾಡಿದ ತಪ್ಪಿಗೆ ಪಶ್ಚಾತಾಪದ ದಾರಿ ತೋರಿದವರು ಧರ್ಮ ದೀಪಕರು, ಪ್ರಾಯಶ್ಚಿತ್ತದ ಮಾರ್ಗ ತೋರುವವರು ಬೇರೆಯವರ ದುಡಿಮೆಯಲ್ಲಿ ಬದುಕುವ ಪೂಜಾರಿಗಳು ಹಾಗೂ ಪುರೋಹಿತಶಾಹಿಗಳು’ ಎಂದು ಗುಡುಗಿದರು.

ಗ್ರಹಿಕೆಯಲ್ಲಿ ತಪ್ಪು: ‘ಹೊಡೆದು ಕೊಲ್ಲುವವರು ಮತಾಂಧರು. ಶರಣರು ಹೇಳಿದಂತೆ ಪ್ರತಿಭಟಿಸುವ ಮನೋಸ್ಥೈರ್ಯ ಪ್ರದರ್ಶಿಸಬೇಕು. ಜಗತ್ತಿನಲ್ಲಿ ಧರ್ಮ ಇರುವುದು ತಪ್ಪಲ್ಲ. ಆದರೆ, ಧರ್ಮ ಗ್ರಹಿಕೆಯಲ್ಲಿ ತಪ್ಪಾಗುತ್ತಿದೆ. ಬಸವ ತತ್ವ ಹಾಗೂ ಲಿಂಗಾಯತ ಧರ್ಮ ಬೇರೆಯಲ್ಲ. ಶರಣರ ವಚನಗಳಲ್ಲೇ ಲಿಂಗಾಯತ ಎಂಬ ಪದ ಬರುವುದರಿಂದ ಲಿಂಗಾಯತ ಧರ್ಮ ಎಂದರೆ ತಪ್ಪಲ್ಲ’ ಎಂದು ಪ್ರತಿಪಾದಿಸಿದರು.

‘ಸರ್ಕಾರ ಯಾವುದೇ ಜಯಂತಿ ಆಚರಿಸಬೇಕಿಲ್ಲ. ವೈಯಕ್ತಿಕವಾಗಿ ಯಾರು ಬೇಕಾದರೂ ಜಯಂತಿ ಮಾಡಿಕೊಳ್ಳಲಿ. ಅದು ಬಿಟ್ಟು ಸರ್ಕಾರ ವರ್ಷದ 365 ದಿನವೂ ಜಯಂತಿ ಮಾಡಿಕೊಂಡು ಕುಳಿದರೆ ಜನರ ಕೆಲಸ ಆಗುವುದಾದರೂ ಹೇಗೆ? ಜಯಂತಿ ಆಚರಣೆಗೆ ಆಗುವ ಖರ್ಚು ವೆಚ್ಚದಲ್ಲಿ ಕೆರೆ ಕಟ್ಟೆ ಕಟ್ಟಿಸಿ ನೀರು ತುಂಬಿಸಿದರೆ ಜನ ಸಂತೃಪ್ತಿಯಾಗಿರುತ್ತಾರೆ’ ಎಂದು ಅಭಿಪ್ರಾಯಪಟ್ಟರು.

ಕಲಹ ಜಾಸ್ತಿಯಾಗಿದೆ: ‘50 ವರ್ಷಗಳ ಹಿಂದೆ ಸರ್ಕಾರಗಳು ಸಾಮಾಜಿಕ ಸಮಾನತೆ ಕಾಣಲು ಕೆಲಸ ಮಾಡಿದ್ದವು. ಸರ್ವ ಧರ್ಮೀಯರು ಮಹಾತ್ಮ ಗಾಂಧೀಜಿ ಜತೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಆಗ ಯಾವುದೇ ಜಾತಿ ಇರಲಿಲ್ಲ. 20 ವರ್ಷಗಳಿಂದ ಈಚೆಗೆ ಜಾತಿ, ಉಪಜಾತಿ, ಪಂಗಡ, ಅಸಮಾನತೆ, ಕಲಹ ಜಾಸ್ತಿಯಾಗಿದೆ’ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ವಿಷಾದಿಸಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಗೌರಾವಧ್ಯಕ್ಷ ಬಿ.ಎಂ.ಚನ್ನಪ್ಪ, ಕ್ರೈಸ್ತ ಧರ್ಮ ಗುರು ಮೇಷಾಕ್ ಫಾಸ್ಟರ್, ಮುಸ್ಲಿಂ ಸಮುದಾಯದ ಮುಖಂಡ ಹನೀಫ್ ಸಾಬ್, ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ವಿ.ಗೀತಾ, ಆಂದೋಲನದ ಸಂಚಾಲಕ ಅನಂತನಾಯಕ್, ಜಾನಪದ ಕಲಾವಿದ ಪಿಚ್ಚಳ್ಳಿ ಶ್ರೀನಿವಾಸ್ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು