ಚುನಾವಣೆ ನಂತರ ಶಕ್ತಿ ತೋರಿಸುತ್ತೇನೆ: ಮುನಿಯಪ್ಪ ತಿರುಗೇಟು

ಬುಧವಾರ, ಏಪ್ರಿಲ್ 24, 2019
23 °C

ಚುನಾವಣೆ ನಂತರ ಶಕ್ತಿ ತೋರಿಸುತ್ತೇನೆ: ಮುನಿಯಪ್ಪ ತಿರುಗೇಟು

Published:
Updated:
Prajavani

ಕೋಲಾರ: ‘ಕಾಂಗ್ರೆಸ್ ಚಿಹ್ನೆಯಡಿ ಗೆದ್ದು ಈಗ ಅದೇ ಪಕ್ಷಕ್ಕೆ ಮತ ಹಾಕಬೇಡಿ ಎಂದು ಹೇಳುವ ಮೂಲಕ ಕೆಲ ನಾಯಕರು ದ್ರೋಹ ಮಾಡುತ್ತಿದ್ದಾರೆ. ಅವರಿಗೆ ಚುನಾವಣೆ ನಂತರ ನನ್ನ ಶಕ್ತಿ ತೋರಿಸುತ್ತೇನೆ’ ಎಂದು ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಎದುರಾಳಿಗಳಿಗೆ ಸವಾಲು ಹಾಕಿದರು.

ಇಲ್ಲಿ ಸೋಮವಾರ ನಡೆದ ‘ನಮ್ಮ ಕಾಂಗ್ರೆಸ್‌’ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ‘ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದಿರುವ ಶಾಸಕರು ಹಾಗೂ ಮಾಜಿ ಶಾಸಕರು ನನ್ನ ಹಂಗಿನಲ್ಲಿದ್ದಾರೆಯೇ ಹೊರತು ನಾನು ಅವರ ಹಂಗಿನಲ್ಲಿಲ್ಲ’ ಎಂದು ತಿರುಗೇಟು ನೀಡಿದರು.

‘ನನ್ನ ಮೇಲೆ ಸಿಟ್ಟಿದ್ದರೆ ಚುನಾವಣೆಯಲ್ಲಿ ನನ್ನ ವಿರುದ್ಧ ಸ್ಪರ್ಧಿಸಲಿ. ಸಂಬಂಧವಿಲ್ಲದ ದಾಖಲೆಪತ್ರ ಇಟ್ಟುಕೊಂಡು ಹೇಳಿಕೆ ನೀಡಿದರೆ ಜನ ನಂಬುವುದಿಲ್ಲ. ನಿಮಗೆ ಏನಾದರೂ ಕಡಿಮೆಯಾಗಿದ್ದರೆ ಕೇಳಿ ಕೊಡುತ್ತೇನೆ’ ಎಂದು ದಲಿತ ಸಂಘಟನೆಗಳ ಮುಖಂಡರ ವಿರುದ್ಧ ಹರಿಹಾಯ್ದರು.

‘ಯಾವ ಪಕ್ಷದ ಚಿಹ್ನೆಯಿಂದ ಗೆಲ್ಲುತ್ತೇವೋ ಕಡೆವರೆಗೂ ಆ ಪಕ್ಷಕ್ಕೆ ನಿಷ್ಠರಾಗಿರಬೇಕು. ಮೇಧಾವಿಯಂತೆ ವರ್ತಿಸುತ್ತಿರುವ ವ್ಯಕ್ತಿಯೊಬ್ಬರು ನನ್ನ ವಿರುದ್ಧ ಜನರನ್ನು ಎತ್ತಿ ಕಟ್ಟುತ್ತಿದ್ದಾರೆ. ಅವರಿಗೆ ತಾಕತ್‌ ಇದ್ದರೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ನಿಂತು ಗೆದ್ದು ಬರಲಿ’ ಎಂದು ಪರೋಕ್ಷವಾಗಿ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ಗೆ ಸವಾಲು ಹಾಕಿದರು.

ಮರ್ಯಾದೆ ಇಲ್ಲ

‘ಅಂಬೇಡ್ಕರ್ ಈ ದೇಶಕ್ಕೆ ಸಂವಿಧಾನ ನೀಡಿ ಎಲ್ಲಾ ವರ್ಗದ ಜನ ನೆಮ್ಮದಿಯಿಂದ ಬದುಕಲು ಅವಕಾಶ ಕಲ್ಪಿಸಿದ್ದಾರೆ. ಬಿಜೆಪಿಯವರು ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ. ಜಿಲ್ಲೆಯಲ್ಲಿ 30 ವರ್ಷಗಳಿಂದ ಅಂಬೇಡ್ಕರ್ ಭಾವಚಿತ್ರ ಹೊತ್ತು ಜೀವನ ಮಾಡಿದ ಕೆಲವರು ನನ್ನನ್ನು ಸೋಲಿಸಲು ಕೋಮುವಾದಿ ಬಿಜೆಪಿಯೊಂದಿಗೆ ಕೈ ಜೋಡಿಸಿರುವುದು ದುರ್ದೈವ. ಅವರಿಗೆ ಮಾನ ಮರ್ಯಾದೆ ಇಲ್ಲ’ ಎಂದು ದಲಿತ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಿಸ್ತುಕ್ರಮ ಕೈಗೊಳ್ಳುತ್ತಿಲ್ಲ: ‘ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ತಲಾ ಇಬ್ಬರು ದ್ರೋಹಿಗಳಿದ್ದಾರೆ. ಮೈತ್ರಿ ಧರ್ಮ ಪಾಲಿಸದ ಕಾಂಗ್ರೆಸ್, ಜೆಡಿಎಸ್‌ ಮುಖಂಡರ ವಿರುದ್ಧ ಎರಡೂ ಪಕ್ಷಗಳು ವರಿಷ್ಠರು ಶಿಸ್ತುಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ ಪಕ್ಷದಿಂದ ಗೆದ್ದು ಶಾಸಕರಾಗಿರುವ ರಮೇಶ್‌ಕುಮಾರ್ ಅವರು ಮುನಿಯಪ್ಪ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಕೆಲ ಮುಖಂಡರು ಪಕ್ಷಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಅವರು ರಾಜೀನಾಮೆ ಕೊಟ್ಟು ಪಕ್ಷದಿಂದ ಹೊರ ಹೋಗಲಿ. ಅವರಿಂದ ಮುನಿಯಪ್ಪಗೆ ಯಾವುದೇ ನಷ್ಟ ಆಗುವುದಿಲ್ಲ’ ಎಂದು ಛೇಡಿಸಿದರು.

ರಾಹುಲ್ ಪ್ರಧಾನಿಯಾಗಲಿ: ‘ಮುಖ್ಯಮಂತ್ರಿ ಕುಮಾರಸ್ವಾಮಿ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಕಾಂಗ್ರೆಸ್ ಅವರಿಗೆ ಬೆಂಬಲ ನೀಡಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಕೇಂದ್ರದಲ್ಲಿ ಈಗಿರುವ ಸರ್ಕಾರ ಬದಲಾಗಲೇಬೇಕು. ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಬೇಕು. ಯುವಕರಾದ ರಾಹುಲ್ ಗಾಂಧಿ ಪ್ರಧಾನಿ ಆಗಲಿ’ ಎಂದು ಆಶಿಸಿದರು.

ವ್ಯಾಘ್ರರಾಗುತ್ತಾರೆ: ‘ಮುನಿಯಪ್ಪ ಅವರನ್ನು ಗೆಲ್ಲಿಸುವುದು ನನ್ನ ಗುರಿ, ನಾನು ಯಾವುದೇ ಅಪೇಕ್ಷೆ ಇಟ್ಟುಕೊಂಡಿಲ್ಲ. ಶಾಸಕನಾಗಿದ್ದಾಗ ಅವರಿಂದ ಯಾವುದೇ ಅನುದಾನ ಪಡೆದಿಲ್ಲ. ಮುನಿಯಪ್ಪ ಗೆಲ್ಲುವವರೆಗೆ ತಗ್ಗಿ ಬಗ್ಗೆ ನಡೆಯುತ್ತಾರೆ, ಗೆದ್ದ ಮೇಲೆ ವ್ಯಾಘ್ರರಾಗುತ್ತಾರೆ’ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್‌ ಹೇಳಿದರು.

‘ಕಾಂಗ್ರೆಸ್‌ನಿಂದ ಗೆದ್ದಿರುವ ಶಾಸಕರು ವ್ಯಕ್ತಿ ವಿಚಾರ ಬಿಟ್ಟು ಪಕ್ಷಕ್ಕೆ ನಿಷ್ಠರಾಗಿ ಕೆಲಸ ಮಾಡಲಿ. ಚುನಾವಣೆ ನಂತರ ಕೋಲಾರದಲ್ಲಿ ಚಂಡಮಾರುತ, ಗುಡುಗು, ಸಿಡಿಲು ಶುರುವಾಗುತ್ತದೆ. ಪ್ರಧಾನಿ ಅಚ್ಛೇ ದಿನ್‌ ಎನ್ನುತ್ತಾರೆ. ಭವಿಷ್ಯದಲ್ಲಿ ನನಗೆ ಮತ್ತು ವೆಂಕಟಶಿವಾರೆಡ್ಡಿಗೆ ಒಳ್ಳೆಯ ದಿನ ಬರುತ್ತದೆ. ಹೆತ್ತ ತಾಯಿ ಬೆನ್ನಿಗೆ ಚೂರಿ ಹಾಕಿದವರಿಗೆ ಮುಂದೆ ಮಾರಿ ಹಬ್ಬ ಕಾದಿದೆ. ಏ.19ರಿಂದ ನಾನೇ ನಿಜವಾದ ಕಾಂಗ್ರೆಸ್ಸಿಗ’ ಎಂದರು.

‘ವರ್ತೂರು ಪ್ರಕಾಶ್ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಬಗ್ಗೆ ಮುನಿಯಪ್ಪ ತಮ್ಮ ನಿರ್ಧಾರ ಪ್ರಕಟಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅರುಣ್‌ಪ್ರಸಾದ್‌ ಒತ್ತಾಯಿಸಿದರು. ಇದಕ್ಕೆ ಮುನಿಯಪ್ಪ, ‘ಈ ಸಂಗತಿಯನ್ನು ವರಿಷ್ಠರ ಗಮನಕ್ಕೆ ತರುತ್ತೇನೆ’ ಎಂದು ಹೇಳಿ ನುಣುಚಿಕೊಂಡರು.

ದೈವ ಭಕ್ತರು: ‘ವರ್ತೂರು ಪ್ರಕಾಶ್ ಬಾಯಿ ಸರಿ ಮಾಡಿಕೊಂಡರೆ ಒಳ್ಳೆಯ ನಾಯಕರು, ನಮಗೂ ನಾಯಕರು. ಮುನಿಯಪ್ಪ ದೈವ ಭಕ್ತರು, ಅವರನ್ನು ಯಾರಿಂದಲೂ ಮುಟ್ಟಲು ಆಗುವುದಿಲ್ಲ. ಅಭ್ಯರ್ಥಿ ಹಾಗೂ ಪಕ್ಷದ ವಿರುದ್ಧ ಕೆಲಸ ಮಾಡುವವರು ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಏ.19ರ ನಂತರ ಶಿಸ್ತು ಕ್ರಮ ಆಗುತ್ತದೆ. ಪಕ್ಷದ ಕೆಲ ಮುಖಂಡರು ಹಣ ಪಡೆದುಕೊಂಡು ಬಿಜೆಪಿ ಕಚೇರಿಯಲ್ಲಿ ಕುಳಿತಿದ್ದಾರೆ. ಅವರ ಉಚ್ಛಾಟನೆಗೆ ಕಾಲ ಕೂಡಿ ಬಂದಿದೆ’ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಗುಡುಗಿದರು.

ಸಮಾವೇಶಕ್ಕೂ ಮುನ್ನ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ರ್‌್ಯಾಲಿ ನಡೆಸಿದರು. ಜಿ.ಪಂ ಸದಸ್ಯರಾದ ಸಿ.ಎಸ್.ವೆಂಕಟೇಶ್, ರೂಪಶ್ರೀ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ಉಪಾಧ್ಯಕ್ಷೆ ಸಿ.ಲಕ್ಷ್ಮೀ, ಸದಸ್ಯ ಮಂಜುನಾಥ್, ನಮ್ಮ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬೆಗ್ಲಿ ಪ್ರಕಾಶ್, ಜಿ.ಪಂ ಮಾಜಿ ಸದಸ್ಯ ಸೋಮಣ್ಣ, ನಗರಸಭೆ ಮಾಜಿ ಸದಸ್ಯರಾದ ಸೋಮಶೇಖರ್, ಕಾಶಿ ವಿಶ್ವನಾಥ್, ಮಂಜುನಾಥ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !