ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠಾಣೆಗೆ ಮುತ್ತಿಗೆ ಯತ್ನ: ಲಾಠಿ ಪ್ರಹಾರ

ಕೆಎಸ್‌ಆರ್‌ಟಿಸಿ ನೌಕರರ ಪ್ರತಿಭಟನೆಗೆ ಪೊಲೀಸರ ತಡೆ: ಮಾತಿನ ಚಕಮಕಿ
Last Updated 20 ಏಪ್ರಿಲ್ 2021, 14:28 IST
ಅಕ್ಷರ ಗಾತ್ರ

ಕೋಲಾರ: ಪ್ರತಿಭಟನೆಗೆ ತಡೆಯೊಡ್ಡಿದ್ದಕ್ಕೆ ಆಕ್ರೋಶಗೊಂಡು ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಗೆ ಮಂಗಳವಾರ ಮುತ್ತಿಗೆ ಹಾಕಲು ಮುಂದಾದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ನೌಕರರನ್ನು ಪೊಲೀಸರು ತಡೆದಿದ್ದರಿಂದ ಪರಸ್ಪರ ವಾಗ್ವಾದ ನಡೆದು ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು.

ಆರನೇ ವೇತನ ಆಯೋಗದ ಶಿಫಾರಸು ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 14 ದಿನದಿಂದ ಹೋರಾಟ ನಡೆಸುತ್ತಿರುವ ಕೆಎಸ್‌ಆರ್‌ಟಿಸಿ ನೌಕರರು ಪೊಲೀಸರ ಪೂರ್ವಾನುಮತಿ ಪಡೆಯದೆ ಇಲ್ಲಿನ ಕೆಎಸ್‌ಆರ್‌ಟಿಸಿ ಡಿಪೊ ಮತ್ತು ಗಲ್‌ಪೇಟೆ ಠಾಣೆ ಎದುರು ಪ್ರತಿಭಟನೆ ನಡೆಸಲು ಯತ್ನಿಸಿದರು.

ಆಗ ಪೊಲೀಸರು ಕೋವಿಡ್‌ ಹಿನ್ನೆಲೆಯಲ್ಲಿ ಪ್ರತಿಭಟನೆ, ಸಾರ್ವಜನಿಕ ಸಭೆ ಸಮಾರಂಭ ನಿರ್ಬಂಧಿಸಿ ಸರ್ಕಾರ ಹೊರಡಿಸಿರುವ ಆದೇಶ ಹಾಗೂ ನಿಷೇಧಾಜ್ಞೆಯ ಕಾರಣ ನೀಡಿ ನೌಕರರ ಪ್ರತಿಭಟನೆಗೆ ಅನುಮತಿ ನಿರಾಕರಿಸಿ ಮನೆಗೆ ಹೋಗುವಂತೆ ಸೂಚಿಸಿದರು. ಹೀಗಾಗಿ ನೌಕರರು ಸಂಗೊಂಡಹಳ್ಳಿಯ ಗಣೇಶ ದೇವಸ್ಥಾನದ ಬಳಿ ಪ್ರತಿಭಟನೆ ಮಾಡಲು ಮುಂದಾದರು. ಆಗ ಪೊಲೀಸರು ಪ್ರತಿಭಟನೆ ತಡೆದು ಕೆಲ ನೌಕರರನ್ನು ಗ್ರಾಮಾಂತರ ಠಾಣೆಗೆ ಎಳೆದೊಯ್ದರು.

ಪೊಲೀಸರ ಕ್ರಮದಿಂದ ಆಕ್ರೋಶಗೊಂಡ ಇತರೆ ಸಾರಿಗೆ ನೌಕರರು, ‘ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಾಂತಿಯುತವಾಗಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದೆವು. ಆದರೆ, ಪೊಲೀಸರು ಅದಕ್ಕೆ ಅವಕಾಶ ನೀಡದೆ ನೌಕರರನ್ನು ಬಂಧಿಸಿ ದೌರ್ಜನ್ಯ ನಡೆಸುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 14 ದಿನಗಳಿಂದ ಮುಷ್ಕರ ನಡೆಸುತ್ತಿದ್ದೇವೆ. ನಮ್ಮ ಬೇಡಿಕೆಗೆ ಸ್ಪಂದಿಸದ ಸರ್ಕಾರ ಪೊಲೀಸ್‌ ಬಲ ಬಳಸಿ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದೆ. ಸರ್ಕಾರದ ಕೈಗೊಂಬೆಯಾಗಿರುವ ಪೊಲೀಸರು ವಿನಾಕಾರಣ ನೌಕರರನ್ನು ಬಂಧಿಸಿದ್ದಾರೆ’ ಎಂದು ಆರೋಪಿಸಿದರು.

ದಿಕ್ಕಾಪಾಲಾಗಿ ಓಡಿದರು: ಬಂಧಿತ ನೌಕರರ ಬಿಡುಗಡೆಗೆ ಒತ್ತಾಯಿಸಿ ಇತರೆ ನೌಕರರು ಗ್ರಾಮಾಂತರ ಠಾಣೆ ಬಳಿ ಬಂದು ಮುತ್ತಿಗೆ ಹಾಕಲು ಯತ್ನಿಸಿದರು. ನೌಕರರನ್ನು ಠಾಣೆಯ ಪ್ರವೇಶ ಭಾಗದಲ್ಲೇ ತಡೆದ ಪೊಲೀಸರು, ‘ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ 4ಕ್ಕಿಂತ ಹೆಚ್ಚು ಮಂದಿ ಒಂದೆಡೆ ಗುಂಪುಗೂಡುವಂತಿಲ್ಲ. ನಿಷೇಧಾಜ್ಞೆ ಉಲ್ಲಂಘಿಸಿದರೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಪೊಲೀಸರ ಎಚ್ಚರಿಕೆಗೂ ಜಗ್ಗದ ನೌಕರರು ಠಾಣೆಯೊಳಗೆ ನುಗ್ಗಲು ಮುಂದಾದಾಗ ಪರಸ್ಪರ ಮಾತಿನ ಚಕಮಕಿ ನಡೆಯಿತು. ಸಾರಿಗೆ ನೌಕರರು ಪೊಲೀಸರನ್ನು ಎಳೆದಾಡಿದರು. ಇದರಿಂದ ತಳ್ಳಾಟ ಉಂಟಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು.

ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಮನಗಂಡ ಪೊಲೀಸರು ನೌಕರರ ಮೇಲೆ ಲಾಠಿ ಪ್ರಹಾರ ನಡೆಸಿದರು. ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ನೌಕರರು ದಿಕ್ಕಾಪಾಲಾಗಿ ಓಡಿದರು. ಪೊಲೀಸರು ನೌಕರರನ್ನು ಬೆನ್ನಟ್ಟಿ ಲಾಠಿ ಏಟಿನ ರುಚಿ ತೋರಿಸಿದರು. ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಹಲವು ನೌಕರರು ರಸ್ತೆ ಬದಿಯ ಚರಂಡಿಗೆ ಬಿದ್ದು ಗಾಯಗೊಂಡರು. ಲಾಠಿ ಪ್ರಹಾರದ ನಂತರ ಪರಿಸ್ಥಿತಿ ತಿಳಿಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT