ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಸುಗಳಿಗೆ ಚರ್ಮಗಂಟು ರೋಗ

ರೈತ ಸಂಘದ ಪ್ರತಿನಿಧಿಗಳಿಂದ ಪ್ರತಿಭಟನೆ, ಜಿಲ್ಲಾಧಿಕಾರಿಗೆ ಮನವಿ
Last Updated 21 ಸೆಪ್ಟೆಂಬರ್ 2022, 5:22 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಬಾಧಿಸುತ್ತಿರುವ ಚರ್ಮಗಂಟು ರೋಗ ನಿಯಂತ್ರಿಸಬೇಕು ಹಾಗೂ ಬಿತ್ತನೆ ಆಲೂಗಡ್ಡೆ ಬೆಲೆ ನಿಗದಿ ಮಾಡಲು ವಿಶೇಷ ತಂಡ ರಚಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಪ್ರತಿನಿಧಿಗಳು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಅವರಿಗೆ ಮನವಿ ಸಲ್ಲಿಸಿ, ಕೂಡಲೇ ರೈತರ ರಕ್ಷಣೆಗೆ ಮುಂದಾಗಬೇಕು ಎಂದು ಪ್ರತಿಭಟನಕಾರರು
ಒತ್ತಾಯಿಸಿದರು.

ರೈತ ಸಂಘದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಎ. ನಳಿನಿಗೌಡ ಮಾತನಾಡಿ, ‘ಹೈನುಗಾರಿಕೆಯೇ ಜೀವಾಳವಾಗಿರುವ ಜಿಲ್ಲೆಯ ಲಕ್ಷಾಂತರ ಕುಟುಂಬಗಳಿಗೆ ಬದುಕು ಕಲ್ಪಿಸಿರುವ ಹೈನೋದ್ಯಮಕ್ಕೆ ಚರ್ಮ ಗಂಟು ರೋಗ ಮಾರಕವಾಗಿದೆ. ರೋಗ ನಿಯಂತ್ರಣ ಮಾಡುವಲ್ಲಿ ಪಶು ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘3 ತಿಂಗಳಿಂದ ಗಡಿ ಭಾಗಗಳಲ್ಲಿ ಜಾನುವಾರುಗಳಿಗೆ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ತಂದಿರುವ ಹಸುಗಳಿಗೆ ಸರಿಯಾಗಿ ಚಿಕಿತ್ಸೆ ದೊರೆಯುತ್ತಿಲ್ಲ. ರಾಸುಗಳು ಸಾಯುತ್ತಿದ್ದು, ಸಿಬ್ಬಂದಿ ಕೊರತೆ ನೆಪದಲ್ಲಿ ಗ್ರಾಮೀಣ ಪ್ರದೇಶಗಳತ್ತ ಪಶು ವೈದ್ಯರು ಸುಳಿಯತ್ತಿಲ್ಲ’ ಎಂದು ಆರೋಪಿಸಿದರು.

‘ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕರಪತ್ರದ ಮುಖಾಂತರ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಬೇಕು.ರೋಗ ನಿಯಂತ್ರಣಕ್ಕೆ ಅವಶ್ಯವಿರುವ ಔಷಧಿ ವಿತರಿಸಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ‘ಮುಂಗಾರು ಮಳೆ ಆರ್ಭಟ ಹಾಗೂ ನಿಯಂತ್ರಣಕ್ಕೆ ಬರದ ರೋಗಗಳಿಂದ ಟೊಮೆಟೊ, ಕ್ಯಾಪ್ಸಿಕಂ ಬೆಳೆಗಾರರ ಬದುಕು ನೀರಿನಲ್ಲಿ ಕೊಚ್ಚಿ ಹೋಗಿದೆ. ರೈತರು ಮತ್ತೆ ಸಾಲ ಮಾಡಿ ಆಲೂಗಡ್ಡೆ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಆದರೆ, ದುಬಾರಿ ಬೆಲೆ ಹಾಗೂ ಆಲೂಗಡ್ಡೆ ಗುಣಮಟ್ಟ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡುವಲ್ಲಿ ಎಪಿಎಂಸಿ ಹಾಗೂ ತೋಟಗಾರಿಕೆ ಅಧಿಕಾರಿಗಳು ವಿಫಲವಾಗಿದ್ದಾರೆ. ಖಾಸಗಿ ಮಂಡಿ ಮಾಲೀಕರು ನಿಗದಿ ಮಾಡುವ ಬೆಲೆಗೆ ತಕ್ಕಂತೆ ಅಧಿಕಾರಿಗಳು ಕುಣಿಯುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜಾನುವಾರುಗಳನ್ನು ಬಾಧಿಸುತ್ತಿರುವ ಚರ್ಮ ಗಂಟು ರೋಗ ನಿಯಂತ್ರಣ ಮಾಡಲು ಹಾಗೂ ಬಿತ್ತನೆ ಆಲೂಗಡ್ಡೆಗೆ ಬೆಲೆ ನಿಗದಿ ಮಾಡಲು ಅಧಿಕಾರಿಗಳ ಸಭೆ ಕರೆದು ಚರ್ಚಿಸಬೇಕು’ ಎಂದು ಮನವಿ ಮಾಡಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ, ವಕ್ಕಲೇರಿ ಹನುಮಯ್ಯ, ಕದಿರಿನತ್ತ ಅಪ್ಪೋಜಿರಾವ್, ಹೆಬ್ಬಣಿ ಆನಂದರೆಡ್ಡಿ, ಮಂಗಸಂದ್ರ ತಿಮ್ಮಣ್ಣ, ಮಾಲೂರು ತಾಲ್ಲೂಕು ಅಧ್ಯಕ್ಷ ಯಲ್ಲಣ್ಣ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಫಾರೂಕ್‌ ಪಾಷ, ಬಂಗಾರಿ ಮಂಜು, ರಾಜೇಶ್, ರಾಧಾ, ಲಕ್ಷ್ಮಿ, ಶೈಲಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT