ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಸ್ಪತ್ರೆ ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತನೆ

ಸರ್ಕಾರಕ್ಕೆ ಪ್ರಸ್ತಾವ: ಆರೋಗ್ಯ ಇಲಾಖೆ ನೋಡಲ್‌ ಅಧಿಕಾರಿಗಳ ಪರಿಶೀಲನೆ
Last Updated 22 ಮೇ 2020, 15:45 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾಡಳಿತವು ಎಸ್‍ಎನ್‍ಆರ್ ಜಿಲ್ಲಾ ಆಸ್ಪತ್ರೆಯನ್ನು ಪೂರ್ಣ ಪ್ರಮಾಣದ ಕೋವಿಡ್-19 ಆಸ್ಪತ್ರೆಯಾಗಿ ರೂಪಿಸಲು ಮುಂದಾಗಿದ್ದು, ಜಿಲ್ಲಾಸ್ಪತ್ರೆಯು ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಸಂಪೂರ್ಣ ಸಜ್ಜಾಗಲಿದೆ.

ಜಿಲ್ಲಾಡಳಿತವು ಸರ್ಕಾರದ ಸೂಚನೆಯಂತೆ ಜಿಲ್ಲಾ ಕೇಂದ್ರದ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ಮೊದಲು ಕೋವಿಡ್‌–19 ಆಸ್ಪತ್ರೆಯಾಗಿ ಗುರುತಿಸಿತ್ತು. ಅಲ್ಲದೇ, ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನಲ್ಲಿ ಮೊದಲಿಗೆ ಪತ್ತೆಯಾದ 5 ಮಂದಿ ಕೊರೊನಾ ಸೋಂಕಿತರನ್ನು ಈ ಆಸ್ಪತ್ರೆಗೆ ದಾಖಲಿಸಿತ್ತು.

ನಂತರ ಜಾಲಪ್ಪ ಆಸ್ಪತ್ರೆ ಆಡಳಿತ ಮಂಡಳಿಯು ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರಾಕರಿಸಿತು. ಅಲ್ಲದೇ, ಜಿಲ್ಲಾಡಳಿತದ ಮೇಲೆ ರಾಜಕೀಯ ಒತ್ತಡ ತಂದು ಸೋಂಕಿತರನ್ನು ಎಸ್‌ಎನ್‌ಆರ್‌ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಮಾಡಿತ್ತು.

ಇದನ್ನು ಸವಾಲಾಗಿ ಸ್ವೀಕರಿಸಿರುವ ಜಿಲ್ಲಾಡಳಿತವು ಎಸ್‌ಎನ್‌ಆರ್‌ ಆಸ್ಪತ್ರೆಯನ್ನು 200 ಹಾಸಿಗೆ ಸಾಮರ್ಥ್ಯದ ಕೋವಿಡ್‌–19 ಆಸ್ಪತ್ರೆಯಾಗಿ ಪರಿವರ್ತಿಸಲು ಅಡಿಯಿಟ್ಟಿದೆ. ಈ ಸಂಬಂಧ ಜಿಲ್ಲಾಡಳಿತವು ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವ ಆಧರಿಸಿ ರಾಜ್ಯ ಆರೋಗ್ಯ ಇಲಾಖೆ ನೋಡಲ್ ಅಧಿಕಾರಿಗಳಾದ ಡಾ.ಚಂದ್ರಕಲಾ ಮತ್ತು ಡಾ.ಶ್ರೀಧರ್ ಅವರು ಶುಕ್ರವಾರ ಎಸ್‌ಎನ್‌ಆರ್‌ ಆಸ್ಪತ್ರೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

ನೋಡಲ್‌ ಅಧಿಕಾರಿಗಳ ಜತೆ ಬಂದ ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಆಸ್ಪತ್ರೆ ಆವರಣ ಹಾಗೂ ಒಳಾಂಗಣದಲ್ಲಿ ನೈರ್ಮಲ್ಯ ಕಾಪಾಡುವಂತೆ ಸೂಚಿಸಿದರು.

35 ವೆಂಟಿಲೇಟರ್‌: ‘ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆ ಸಂಪೂರ್ಣ ಸಜ್ಜಾಗಲಿದೆ. ಆಸ್ಪತ್ರೆಯಲ್ಲಿ ಸದ್ಯ 40 ಹಾಸಿಗೆ ಸಾಮರ್ಥ್ಯದ ತೀವ್ರ ನಿಗಾ ಘಟಕವಿದೆ. ಆಸ್ಪತ್ರೆಯಲ್ಲಿ 5 ವೆಂಟಿಲೇಟರ್ ಸೌಲಭ್ಯವಿದ್ದು, ಹೆಚ್ಚುವರಿಯಾಗಿ 35 ವೆಂಟಿಲೇಟರ್‌ಗಳು ಶೀಘ್ರವೇ ಬರಲಿವೆ. ಮೇ 27ರೊಳಗೆ ಎಸ್‌ಎನ್ಆರ್‌ ಆಸ್ಪತ್ರೆಯು ಪೂರ್ಣ ಪ್ರಮಾಣದಲ್ಲಿ ಕೋವಿಡ್‌–19 ಆಸ್ಪತ್ರೆಯಾಗಿ ಕಾರ್ಯ ನಿರ್ವಹಿಸಲಿದೆ’ ಎಂದು ನೋಡಲ್ ಅಧಿಕಾರಿ ಡಾ.ಚಂದ್ರಕಲಾ ವಿಶ್ವಾಸ ವ್ಯಕ್ತಪಡಿಸಿದರು.

‘ಈ ಆಸ್ಪತ್ರೆಯನ್ನು 200 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಾಗಿ ರೂಪಿಸಲಾಗುತ್ತಿದೆ. 70 ಹಾಸಿಗೆಗಳನ್ನು ಕೊರೊನಾ ಸೋಂಕಿತರಿಗೆ ಮತ್ತು 90 ಹಾಸಿಗೆಗಳನ್ನು ಶಂಕಿತ ಸೋಂಕಿತರ ಕ್ವಾರೆಂಟೈನ್‌ಗೆ ಮೀಸಲಿಡುತ್ತೇವೆ. ಎಲ್ಲಾ ಕೊಠಡಿಗಳಿಗೆ ಸುಣ್ಣ-ಬಣ್ಣ ಬಳಿದು ಸಜ್ಜುಗೊಳಿಸುತ್ತೇವೆ’ ಎಂದು ಹೇಳಿದರು.

ಮನರಂಜನೆ: ‘ಆಸ್ಪತ್ರೆಯಲ್ಲಿರುವ ಕೊರೊನಾ ಸೋಂಕಿತರ ಮನರಂಜನೆಗೆ ಯಾವ ಸೌಲಭ್ಯ ಒದಗಿಸಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ ವೈದ್ಯಾಧಿಕಾರಿಗಳಿಗೆ ಪ್ರಶ್ನಿಸಿದರು. ಆಗ ವೈದ್ಯರು, ‘ಮನರಂಜನೆಗೆ ಯಾವುದೇ ಸೌಕರ್ಯ ಕಲ್ಪಿಸಿಲ್ಲ’ ಎಂದು ಉತ್ತರಿಸಿದರು. ನಂತರ ಶಿವಸ್ವಾಮಿ ಅವರು, ‘ಸೋಂಕಿತರಿರುವ ವಾರ್ಡ್‌ಗಳಲ್ಲಿ ಟಿ.ವಿ ಅಳವಡಿಸಿ’ ಎಂದು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್.ವಿಜಯ್‌ಕುಮಾರ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT