ಬುಧವಾರ, ಮೇ 18, 2022
25 °C

ಜನಸೇವೆಗೆ ಧರ್ಮದ ಭೇದವಿಲ್ಲ: ಕೆಜಿಎಫ್ ಬಾಬು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಹಿಂದೂ ಮತ್ತು ಮುಸ್ಲಿಂ ಎಂಬ ಭೇದ ಭಾವವಿಲ್ಲದೆ ಕ್ಷೇತ್ರದಲ್ಲಿ ಎಲ್ಲಾ ಸಮುದಾಯದ ಜನರಿಗೆ ಆರ್ಥಿಕ ನೆರವು ನೀಡುತ್ತಿದ್ದೇನೆ’ ಎಂದು ಉಮ್ರಾ ಚಾರಿಟಬಲ್‌ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಮುಖಂಡ ಕೆಜಿಎಫ್ ಬಾಬು ಹೇಳಿದರು.

ರಂಜಾನ್‌ ಹಿನ್ನೆಲೆಯಲ್ಲಿ ಇಲ್ಲಿ ಬುಧವಾರ ರಹಮತ್‌ನಗರ ನಿವಾಸಿಗಳಿಗೆ ಟ್ರಸ್ಟ್‌ ವತಿಯಿಂದ ಹಣಕಾಸು ನೆರವಿನ ಚೆಕ್‌ ವಿತರಿಸಿ ಮಾತನಾಡಿ, ‘ಕ್ಷೇತ್ರದ ಶಾಲಾ ಕಾಲೇಜುಗಳಿಗೆ ಖುದ್ದು ಭೇಟಿ ಕೊಟ್ಟು ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಹಣಕಾಸು ನೆರವು ನೀಡುತ್ತಿದೆ. ಆದರೆ, ಶಾಲಾ ಕಾಲೇಜು ಸಿಬ್ಬಂದಿ ಈ ಕಾರ್ಯಕ್ಕೆ ಸಹಕರಿಸದ ಕಾರಣ ಜನರ ಮನೆ ಮನೆಗೆ ಹೋಗಿ ಆರ್ಥಿಕ ಸಹಾಯ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.

‘ರಾಜಕೀಯ ಉದ್ದೇಶಕ್ಕಾಗಿ ಜನರಿಗೆ ಹಣ ಕೊಡುತ್ತಿಲ್ಲ. ಸೇವಾ ಮನೋಭಾವದಿಂದ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದೇನೆ. ಒಂದು ದಿನ ಜನರ ಸೇವೆ ಮಾಡಿ ಸುಮ್ಮನಾಗುವ ವ್ಯಕ್ತಿ ನಾನಲ್ಲ. ನನ್ನ ಕೊನೆಯ ಉಸಿರಿರುವವರೆಗೆ ಜನ ಸೇವೆ ಮಾಡುತ್ತೇನೆ. ಯಾವುದೇ ಜಾತಿ, ಮತಕ್ಕೆ ಸೀಮಿತವಾಗದೆ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಬಡ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಕ್ಷೇತ್ರದ 50 ಸಾವಿರ ಮನೆಗಳಿಗೆ ತಲಾ ₹ 5 ಸಾವಿರ ಕೊಡಲು ವರ್ಷಕ್ಕೆ ₹ 25 ಕೋಟಿ ಮೀಸಲಿಟ್ಟಿದ್ದೇನೆ. ರಂಜಾನ್‌ ಪ್ರಯುಕ್ತ ಕೋಲಾರ ನಗರಸಭೆ ವ್ಯಾಪ್ತಿಯ 13 ಸಾವಿರ ಮನೆಗಳಿಗೆ ತಲಾ ₹ 2 ಹಣಕಾಸು ನೆರವು ನೀಡುತ್ತಿದ್ದೇನೆ. ದೀಪಾವಳಿ ಸಂದರ್ಭದಲ್ಲಿ ಹಿಂದೂಗಳ ಮನೆಗಳಿಗೆ ಹಾಗೂ ಕ್ರಿಸ್‌ಮಸ್‌ ಸಂದರ್ಭದಲ್ಲಿ ಕ್ರೈಸ್ತರ ಮನೆಗಳಿಗೆ ಹಣಕಾಸು ನೆರವು ನೀಡುತ್ತೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.