ಭಾನುವಾರ, ಸೆಪ್ಟೆಂಬರ್ 26, 2021
27 °C
ಅಂಗಡಿ– ದೇವಸ್ಥಾನಗಳ ಬಂದ್‌: ರಸ್ತೆಯಲ್ಲಿ ವಾಹನ ಸಂಚಾರ ವಿರಳ

ಸೂರ್ಯ ಗ್ರಹಣ: ಅಘೋಷಿತ ಬಂದ್ ವಾತಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕಂಕಣ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಗುರುವಾರ ಬೆಳಿಗ್ಗೆ ವಹಿವಾಟು ಸ್ಥಗಿತಗೊಳಿಸಿದ್ದರಿಂದ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿತ್ತು.

ಗ್ರಹಣದ ಕಾರಣಕ್ಕೆ ರಸ್ತೆಗಳಲ್ಲಿ ಮಧ್ಯಾಹ್ನ 12 ಗಂಟೆವರೆಗೆ ಜನರ ಓಡಾಟ ಹಾಗೂ ವಾಹನ ಸಂಚಾರ ವಿರಳವಾಗಿತ್ತು. ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಔಷಧ ಅಂಗಡಿಗಳು ಹಾಗೂ ಗ್ಯಾರೇಜ್‌ ಹೊರತುಪಡಿಸಿದರೆ ಬಹುತೇಕ ಮಳಿಗೆಗಳನ್ನು ಮುಚ್ಚಲಾಗಿತ್ತು.

ಹಾಲು, ತರಕಾರಿ ಅಂಗಡಿಗಳು ಹಾಗೂ ಮಾರುಕಟ್ಟೆಗಳಲ್ಲಿ ವಹಿವಾಟು ತಗ್ಗಿತ್ತು. ಹೋಟೆಲ್‌ಗಳು ಸಹ ಬಂದ್‌ ಆಗಿದ್ದವು. ಸರ್ಕಾರಿ ಕಚೇರಿಗಳು ಜನರಿಲ್ಲದೆ ಭಣಗುಡುತ್ತಿದ್ದವು. ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಿತ್ತು. ಬ್ಯಾಂಕ್‌, ಅಂಚೆ ಕಚೇರಿ, ಬಸ್‌ ನಿಲ್ದಾಣ ಹಾಗೂ ರೈಲು ನಿಲ್ದಾಣದಲ್ಲಿ ಜನರೇ ಇರಲಿಲ್ಲ.

ಗ್ರಹಣದ ಸಂಬಂಧ ಸುದ್ದಿವಾಹಿನಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿದಾಡುತ್ತಿದ್ದ ಕಾರಣ ಜನ ಆತಂಕಕ್ಕೆ ಒಳಗಾಗಿ ಮನೆಯಿಂದ ಹೊರ ಬರಲೇ ಇಲ್ಲ. ಗ್ರಹಣ ಸಂದರ್ಭದಲ್ಲಿ ಹೊರ ಹೋದರೆ ಕೆಟ್ಟದಾಗುತ್ತದೆ ಎಂಬ ಭಯದಿಂದ ಜನರು ಮಧ್ಯಾಹ್ನದವರೆಗೆ ಮನೆಯಲ್ಲೇ ಉಳಿದರು.

ಕೆಲ ಮನೆಗಳಲ್ಲಿ ಗ್ರಹಣ ಆರಂಭಕ್ಕೂ ಮುನ್ನವೇ ಮನೆ ಮಂದಿಯೆಲ್ಲಾ ಬೆಳಿಗ್ಗೆ 8 ಗಂಟೆಯೊಳಗೆ ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸಿ ತಿಂಡಿ ಸೇವಿಸಿದರು. ಗ್ರಹಣ ದೋಷ ಪರಿಹಾರಕ್ಕೆಂದು ಹಲವರು ಗ್ರಹಣಕ್ಕೂ ಮುನ್ನ ಮತ್ತು ನಂತರ ಸ್ನಾನ ಮಾಡಿದರು. ಮನೆಗಳಲ್ಲಿ ಕುಡಿಯುವ ನೀರು ಹಾಗೂ ಅಡುಗೆ ಪಾತ್ರೆಗಳಿಗೆ ದರ್ಬೆ ಮತ್ತು ತುಳಸಿ ಎಲೆ ಹಾಕಲಾಗಿತ್ತು. ಗ್ರಹಣ ಮುಗಿದ ನಂತರ ಪಾತ್ರೆಗಳಲ್ಲಿನ ಹಳೆ ನೀರನ್ನು ಚೆಲ್ಲಿ ಹೊಸದಾಗಿ ನೀರು ತುಂಬಿಸಲಾಯಿತು. ಮನೆಯನ್ನು ಶುದ್ಧೀಕರಿಸಿ ಪೂಜೆ ಮಾಡಲಾಯಿತು.

ದೇವಾಲಯ ಬಂದ್‌: ಭಕ್ತರು ಸಾಮಾನ್ಯವಾಗಿ ಬೆಳಿಗ್ಗೆ ದೇವಸ್ಥಾನಗಳಿಗೆ ಬಂದು ದೇವರ ದರ್ಶನ ಪಡೆಯುತ್ತಾರೆ. ಆದರೆ, ಗ್ರಹಣದ ಕಾರಣಕ್ಕೆ ಭಕ್ತರು ಬೆಳಿಗ್ಗೆ ದೇವಸ್ಥಾನಗಳತ್ತ ಸುಳಿಯಲಿಲ್ಲ. ನಗರದ ವೆಂಕಟರಮಣಸ್ವಾಮಿ, ಕೋಲಾರಮ್ಮ, ಸೋಮೇಶ್ವರ, ದೊಡ್ಡ ಆಂಜನೇಯಸ್ವಾಮಿ, ಕೆಇಬಿ ಗಣಪತಿ ದೇವಸ್ಥಾನ ಸೇರಿದಂತೆ ಬಹುತೇಕ ದೇವಸ್ಥಾನಗಳು ಬಂದ್‌ ಆಗಿದ್ದವು. ಧನುರ್ಮಾಸದ ಪೂಜೆಯ ನಂತರ ಬೆಳಿಗ್ಗೆ 6ಕ್ಕೆ ಕೆಲ ದೇವಸ್ಥಾನಗಳ ಬಾಗಿಲು ಮುಚ್ಚಲಾಯಿತು.

ಗ್ರಹಣದ ಅವಧಿ ಮುಗಿದ ಬಳಿಕ ಅರ್ಚಕರು ದೇವಸ್ಥಾನಗಳ ಬಾಗಿಲು ತೆರೆದು ಗರ್ಭಗುಡಿ ಸೇರಿದಂತೆ ಇಡೀ ಆವರಣ ಸ್ವಚ್ಛಗೊಳಿಸಿದರು. ದೇವರ ಮೂರ್ತಿಗಳಿಗೆ ಎಳನೀರು, ಹಾಲಿನ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನದ ನಂತರ ದೇವಸ್ಥಾನಗಳಲ್ಲಿ ಭಕ್ತರ ದೊಡ್ಡ ದಂಡೇ ಕಂಡುಬಂತು. ಭಕ್ತರು ಗಂಟೆಗಟ್ಟಲೇ ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು.

ಪರಿಹಾರ ಪೂಜೆ: ಕೋಲಾರಮ್ಮ ಕೆರೆ ಬಳಿಯ ಗಣಪತಿ, ಪರಶುರಾಮ ಹಾಗೂ ದಕ್ಷಿಣಾಮೂರ್ತಿ ದೇವಾಲಯದಲ್ಲಿ ಮಧ್ಯಾಹ್ನ ಗ್ರಹಣ ದೋಷ ಪರಿಹಾರ ಪೂಜೆ ನಡೆಸಲಾಯಿತು. ದೇವರಿಗೆ ಅಭಿಷೇಕ ಮತ್ತು ರುದ್ರಾಭಿಷೇಕ ಮಾಡಲಾಯಿತು. ಹಲವು ಭಕ್ತರು ಗೋಧಿ, ಹುರಳಿ, ಕಡಲೆ ಧಾನ್ಯ ನೀಡಿ ದೋಷ ಪರಿಹಾರ ಪೂಜೆ ಮಾಡಿಸಿದರು.

ಮನೆಗಳಲ್ಲಿ ಗ್ರಹಣ ಶಾಂತಿಗಾಗಿ ಗ್ರಹಣದ ಆರಂಭದಲ್ಲೇ ಪ್ರತ್ಯೇಕವಾಗಿ ಎಲೆಯಲ್ಲಿ ಅನ್ನ ಎತ್ತಿಟ್ಟು ಮಜ್ಜಿಗೆ ಮತ್ತು ಹಾಲು ಸುರಿದು (ತಣಿವು ಮುದ್ದೆ) ಬೇವಿನ ಸೊಪ್ಪು, ಹೂವು ಮುಡಿಸಿ ಹಾಗೂ ಅರಿಶಿನ ಕುಂಕುಮ ಹಚ್ಚಿ ಪೂಜೆ ಸಲ್ಲಿಸಲಾಯಿತು. ಗ್ರಹಣದ ಅವಧಿ ಮುಗಿದ ಬಳಿಕ ಆ ಅನ್ನವನ್ನು ಪುಷ್ಕರಣಿ, ಕೆರೆ ಕುಂಟೆಗಳಲ್ಲಿ ಸುರಿಯಲಾಯಿತು. ಕೆಲ ದೇವಾಲಯಗಳಲ್ಲಿ ಕುರಿ, ಕೋಳಿ ಬಲಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು.

ಗ್ರಹಣ ವೀಕ್ಷಣೆ: ರಾಜ್ಯ ವಿಜ್ಞಾನ ಪರಿಷತ್ತು ಸೂರ್ಯ ಗ್ರಹಣದ ವೀಕ್ಷಣೆಗೆ ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಿತ್ತು. ಪ್ರಕೃತಿಯ ಸುಂದರ ಹಾಗೂ ಅಪರೂಪದ ನೈಸರ್ಗಿಕ ವಿದ್ಯಮಾನ ವೀಕ್ಷಣೆಗೆ ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ಮುಗಿಬಿದ್ದರು.

ಪರಿಷತ್‌ ವತಿಯಿಂದ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ಗ್ರಹಣ ವೀಕ್ಷಿಸಲು ಸೋಲಾರ್‌ ಫಿಲ್ಟರ್‌ ಕನ್ನಡಕ ನೀಡಲಾಯಿತು. ಗ್ರಹಣದ ಆರಂಭದಲ್ಲಿ ಕೆಲ ಕಾಲ ಮೋಡ ಮುಸುಕಿದ ವಾತಾವರಣವಿದ್ದ ಕಾರಣ ಗ್ರಹಣ ಸ್ಪಷ್ಟವಾಗಿ ಗೋಚರಿಸಲಿಲ್ಲ. ಇದರಿಂದ ಮಕ್ಕಳು ನಿರಾಸೆಗೊಂಡರು. ಸ್ವಲ್ಪ ಸಮಯದ ಬಳಿಕ ಮೋಡಗಳು ಚದುರಿದ್ದರಿಂದ ಗ್ರಹಣ ಗೋಚರಿಸಿತು. ಕಾಲೇಜಿನ ಪ್ರಾಂಶುಪಾಲ ಮಂಜುನಾಥ್ ಮತ್ತು ತಜ್ಞರು ಗ್ರಹಣದ ಬಗ್ಗೆ ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ, ಸಮರ್ಥ ಭಾರತ ಟ್ರಸ್ಟ್ ಅಧ್ಯಕ್ಷ ತ್ಯಾಗರಾಜ್‌, ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ಸಿ.ಕೆ.ಶಿವಣ್ಣ, ಉಪಾಧ್ಯಕ್ಷ ಜಿ.ಎಂ.ವೆಂಕಟರವಣಪ್ಪ, ಕಾರ್ಯದರ್ಶಿ ಮಂಜುಳಾ ಭೀಮರಾವ್, ಸದಸ್ಯರಾದ ಬಿ.ಶಿವಕುಮಾರ್, ಶೈಲಜಾ, ಸೌಮ್ಯ, ಕವಿತಾ, ಜಯಸಿಂಹ ಹಾಜರಿದ್ದರು. ಬಡಾವಣೆಗಳಲ್ಲಿ ಮಕ್ಕಳು ಹಾಗೂ ಪೋಷಕರು ಹಳೆಯ ಎಕ್ಸ್‌ರೆ, ಕೂಲಿಂಗ್ ಕನ್ನಡಕ ಹಾಕಿಕೊಂಡು ಗ್ರಹಣ ವೀಕ್ಷಿಸುತ್ತಿದ್ದ ದೃಶ್ಯ ಕಂಡುಬಂದಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು