ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಎಪಿಎಂಸಿಗೆ ಜಾಗ; ಪರದಾಟಕ್ಕೆ ಕೊನೆಯೆಂದು?

Published 23 ಮೇ 2024, 7:05 IST
Last Updated 23 ಮೇ 2024, 7:05 IST
ಅಕ್ಷರ ಗಾತ್ರ

ಕೋಲಾರ: ಮತ್ತೊಂದು ಟೊಮೆಟೊ ಋತು ಆರಂಭವಾಗುತ್ತಿದ್ದು, ಕಿಷ್ಕೆಂದೆಯಾಗಿರುವ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿನ ಜಾಗದ ಸಮಸ್ಯೆಗೆ ಈ ವರ್ಷವೂ ಮುಕ್ತಿ ಸಿಗುವಂತೆ ಕಾಣುತ್ತಿಲ್ಲ.

ಜಿಲ್ಲಾ ಕೇಂದ್ರದಲ್ಲಿ ಟೊಮೆಟೊ ವಹಿವಾಟಿಗೆಂದು ಪ್ರತ್ಯೇಕ ಮಾರುಕಟ್ಟೆ ಆರಂಭಿಸಲು ಹೊಸ ಜಾಗ ನಿಗದಿಗೆ ವರ್ಷಗಳಿಂದ ಶೋಧ ಕಾರ್ಯ ನಡೆಯುತ್ತಲೇ ಇದೆ. ಜಿಲ್ಲಾಧಿಕಾರಿ ಅಕ್ರಂ ಪಾಷಾ, ಉಪವಿಭಾಗಾಧಿಕಾರಿ ಎಚ್‌.ಎಸ್‌.ವೆಂಕಟಲಕ್ಷ್ಮಿ, ತಹಶೀಲ್ದಾರ್‌ ಹರ್ಷವರ್ಧನ್‌ ಹಾಗೂ ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ಜಮೀನು ಹುಡುಗಾಟದಲ್ಲಿ ತೊಡಗಿದ್ದಾರೆ. ಹಲವು ಬಾರಿ ವಿವಿಧೆಡೆಗೆ ತೆರಳಿ ಜಮೀನು ವೀಕ್ಷಿಸಿ ಬಂದಿದ್ದಾರೆ. ಆದರೆ, ಜಾಗ ಅಂತಿಮಗೊಳಿಸಲು ಸಾಧ್ಯವಾಗುತ್ತಿಲ್ಲ.

ಇತ್ತ ಜಾಗದ ಸಮಸ್ಯೆಯಿಂದ ರೈತರು, ಮಂಡಿ ಮಾಲೀಕರು, ವರ್ತಕರು ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಆಸಕ್ತಿ ತೋರುತ್ತಿದ್ದರಾದರೂ ಜಿಲ್ಲೆಯ ಜನಪ್ರತಿನಿಧಿಗಳಿಂದ ಸಹಕಾರ ಸಿಗುತ್ತಿಲ್ಲ.

ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಿರುವ, ಏಷ್ಯಾದಲ್ಲೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಮಾರುಕಟ್ಟೆ ತೀರಾ ಕಿರಿದಾಗಿದ್ದು, ಬೇರೆಡೆಗೆ ಸ್ಥಳಾಂತರಿಸಬೇಕೆಂದು ದಶಕಗಳಿಂದ ಹೋರಾಟ ನಡೆಯುತ್ತಿದೆ.

‘ಎಪಿಎಂಸಿಗೆ ಸ್ಥಳ ನಿಗದಿಪಡಿಸಲು ಪ್ರಯತ್ನ ನಡೆಯುತ್ತಲೇ ಇದೆ. ಸ್ಥಳ ದೊರಕಿಸಿಕೊಡಲು ಖುದ್ದಾಗಿ ಜಿಲ್ಲಾಧಿಕಾರಿಯೇ ಹೆಚ್ಚು ಆಸಕ್ತಿ ತೋರಿ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಸೂಕ್ತ ಜಾಗ ಸಿಗುತ್ತಿಲ್ಲ. ಚಲುವನಹಳ್ಳಿ ಕೆರೆಯ ಜಮೀನು ಆಗಬಹುದು. ಅಷ್ಟರಲ್ಲಿ ಈಗಿನ ಎಪಿಎಂಸಿಯಲ್ಲಿ ಶೆಡ್‌ ಮಾಡಿಕೊಡಬೇಕು. ಇದರಿಂದ ರೈತರಿಗೆ ಹಾಗೂ ವರ್ತಕರಿಗೆ ಅನುಕೂಲವಾಗುತ್ತದೆ’ ಎಂದು ಕೋಲಾರ ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಹಿಂದೆ ತಾಲ್ಲೂಕಿನ ಕಪರಸಿದ್ದನಹಳ್ಳಿ ಹಾಗೂ ಮಡೇರಹಳ್ಳಿಯಲ್ಲಿ ಗುರುತಿಸಿದ್ದ 37 ಎಕರೆ ಜಾಗ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕೈತಪ್ಪಿ ಹೋಯಿತು. ಕೇಂದ್ರ ಅರಣ್ಯ ಇಲಾಖೆ ಈ ಜಾಗವನ್ನು ಬಳಸಿಕೊಳ್ಳಲು ಒಪ್ಪಿಗೆ ನೀಡಲಿಲ್ಲ. ಸಮಸ್ಯೆಯನ್ನು ಮನದಟ್ಟು ಮಾಡುವಲ್ಲಿ ರಾಜ್ಯ ಸರ್ಕಾರವೂ ವಿಫಲವಾಯಿತು.

ತಾಲ್ಲೂಕಿನ ವಕ್ಕಲೇರಿಯ ಹೋಬಳಿಯ ಚಲುವನಹಳ್ಳಿ ಗ್ರಾಮದ ಸರ್ವೆ ನಂಬರ್‌ 73 ರಲ್ಲಿನ 43 ಎಕರೆ 20 ಗುಂಟೆ ಕೆರೆ ಜಮೀನನ್ನು ಕೋಲಾರ ಎಪಿಎಂಸಿ ಮಾರುಕಟ್ಟೆ ನಿರ್ಮಾಣಕ್ಕೆ ಮಂಜೂರು ಮಾಡಬೇಕೆಂದು ರೈತ ಸಂಘದವರು ಒತ್ತಾಯಿಸುತ್ತಿದ್ದಾರೆ. ಹಲವಾರು ಬಾರಿ ಪ್ರತಿಭಟನೆಗಳೂ ನಡೆದಿವೆ.

ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಕೆರೆಯ ಈ ಪ್ರದೇಶಕ್ಕೆ ಎರಡು ದಿನಗಳ ಹಿಂದೆ ತೆರಳಿ ಮತ್ತೊಮ್ಮೆ ಪರಿಶೀಲಿಸಿ ಬಂದಿದ್ದಾರೆ.

ಚುನಾವಣೆಗೆ ಮುನ್ನವೇ ಈ ಕೆರೆ ಜಮೀನನ್ನು ಎಪಿಎಂಸಿ ಮಾರುಕಟ್ಟೆಗೆ ಮಂಜೂರು ಮಾಡಿ ಅಭಿವೃದ್ಧಿಪಡಿಸುವ ಸಂಬಂಧ ಪರಿಶೀಲಿಸಲು ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಸೂಚಿಸಿದ್ದರು. ಆದರೂ ಯಾವುದೇ ಪ್ರಗತಿ ಆಗಿಲ್ಲ.

ಕೋಲಾರ ಎಂಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಹರಾಜು
ಕೋಲಾರ ಎಂಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಹರಾಜು
ಸಿಗುವುದೇ ಚಲುವನಹಳ್ಳಿ ಗ್ರಾಮದ ಕೆರೆ ಜಮೀನು? ಜಿಲ್ಲೆಯ ಜನಪ್ರತಿನಿಧಿಗಳಿಂದ ನಿರ್ಲಕ್ಷ್ಯ ಜಾಗದ ಕೊರತೆಯಿಂದ ರೈತರು, ಮಂಡಿ ಮಾಲೀಕರು, ವರ್ತಕರು ತೊಂದರೆ
ಟೊಮೆಟೊ ಮಾರುಕಟ್ಟೆಗೆ ಜಮೀನು ಸಿಗುವುದೇ ಕಷ್ಟವಾಗಿದೆ. ಮುಖ್ಯರಸ್ತೆಯಿಂದ ತೀರಾ ದೂರದಲ್ಲಿ ಸಿಕ್ಕಿದರೆ ಆಗಲ್ಲ. ಸಾಗಣೆಗೆ ಅನುಕೂಲವಾಗಿರಬೇಕು. ಹೀಗಾಗಿ ದೊಡ್ಡ ಸವಾಲಾಗಿದೆ
ವಿಜಯಲಕ್ಷ್ಮಿ ಕಾರ್ಯದರ್ಶಿ ಕೋಲಾರ ಎಪಿಎಂಸಿ
ವಾಹನ ದಟ್ಟಣೆ; ನಿತ್ಯ ತೊಂದರೆ
ಎಪಿಎಂಸಿ ಮಾರುಕಟ್ಟೆ ಸುತ್ತಮುತ್ತ ನಿತ್ಯ ವಾಹನ ದಟ್ಟಣೆ ಉಂಟಾಗುತ್ತಿದೆ. ವಿವಿಧೆಡೆಯಿಂದ ಬರುವ ನೂರಾರು ಲಾರಿಗಳು ಟೆಂಪೊಗಳು ಹಾಗೂ ಇತರ ವಾಹನಗಳನ್ನು ಸರ್ವಿಸ್‌ ರಸ್ತೆಯಲ್ಲೇ ನಿಲುಗಡೆ ಮಾಡಲಾಗುತ್ತಿದೆ. ಎಪಿಎಂಸಿ ಮಾರುಕಟ್ಟೆಯಿಂದ ಕೊಂಡರಾಜನಹಳ್ಳಿವರೆಗೆ ವಾಹನ ದಟ್ಟಣೆ ಉಂಟಾಗುತ್ತಿದೆ. ಇತ್ತ ಮಾಲೂರು ರಸ್ತೆಯಲ್ಲಿ ದಟ್ಟಣೆ ಉಂಟಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡೇ ಈ ಎಪಿಎಂಸಿ ಇದ್ದು ವಾಹನ ಸವಾರರು ನಿತ್ಯ ಪರದಾಡಬೇಕಿದೆ. ಇನ್ನು ಟೊಮೆಟೊ ಋತು ಆರಂಭವಾದರೆ ಕೇಳುವುದೇ ಬೇಡ. ಟ್ರಾಫಿಕ್‌ನಿಂದಾಗಿ ಟೊಮೆಟೊ ಸಾಗಿಸಲು ವರ್ತಕರು ಹೈರಾಣಾಗುತ್ತಾರೆ. ವಿಳಂಬವಾದರೆ ಟೊಮೆಟೊ ಮೌಲ್ಯ ಕಳೆದುಕೊಳ್ಳುತ್ತದೆ.
ಸುಗ್ಗಿ ವೇಳೆ 30 ಸಾವಿರ ಕ್ವಿಂಟಲ್‌ ಟೊಮೆಟೊ ಆವಕ!
ಸುಗ್ಗಿ ಸಮಯದಲ್ಲಿ ಕೋಲಾರ ಎಪಿಎಂಸಿಗೆ ಮಾರುಕಟ್ಟೆಗೆ ನಿತ್ಯ ಸುಮಾರು 30 ಸಾವಿರ ಕ್ವಿಂಟಲ್‌ವರೆಗೆ ಟೊಮೊಟೊ ಆವಕವಾಗುತ್ತದೆ. ಜತೆಗೆ 2 ಸಾವಿರ ಕ್ವಿಂಟಲ್‌ನಷ್ಟು ಇತರೆ ತರಕಾರಿಗಳು ಬರುತ್ತವೆ. ಲಕ್ಷಾಂತರ ರೈತರ ಜೀವನಾಡಿಯಾಗಿರುವ ಕೋಲಾರ ಎಪಿಎಂಸಿಯ ಈಗಿನ ಜಾಗ 18 ಎಕರೆ 31 ಗುಂಟೆ ಇದೆ. 198 ತರಕಾರಿ ಮಂಡಿಗಳಿವೆ. ರೈತರು ಹಮಾಲರು ವ್ಯಾಪಾರಿಗಳು ಸೇರಿದಂತೆ ಸುಮಾರು 3 ಸಾವಿರ ಜನ ಈ ಎಪಿಎಂಸಿಗೆ ಬರುತ್ತಾರೆ. ಟೊಮೆಟೊ ಮತ್ತು ತರಕಾರಿ ವಿವಿಧ ಜಿಲ್ಲೆ ಹೊರರಾಜ್ಯ ಹಾಗೂ ವಿದೇಶಕ್ಕೆ ರಫ್ತಾಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT