ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ| ಅಳಿಯನಿಂದ ಪತ್ನಿ, ಮಾವನ ಕೊಲೆ

Published 12 ಸೆಪ್ಟೆಂಬರ್ 2023, 15:37 IST
Last Updated 12 ಸೆಪ್ಟೆಂಬರ್ 2023, 15:37 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ವಿಚ್ಛೇದಿತ ಪತ್ನಿ ಹಾಗೂ ಮಾವನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.

ರಾಧಾ (32) ಹಾಗೂ ಅವರ ತಂದೆ ಮುನಿಯಪ್ಪ (60) ಕೊಲೆಯಾದವರು. ಶ್ರೀನಿವಾಸಪುರದ ಮಾಂಸದ ವ್ಯಾಪಾರಿ ನಾಗೇಶ್ (40) ಕೊಲೆ ಆರೋಪಿ.
ನಾಗೇಶ ತನ್ನ ಮೊದಲ ಪತ್ನಿ ರಾಧಾಗೆ ವಿಚ್ಛೇದನ ನೀಡಿದ್ದ, ನ್ಯಾಯಾಲಯದ ಆದೇಶದಂತೆ ಜೀವನಾಂಶ ನೀಡುತ್ತಿದ್ದ. ಎರಡನೇ ಪತ್ನಿಯೊಂದಿಗೆ ಶ್ರೀನಿವಾಸಪುರದಲ್ಲಿ ವಾಸವಾಗಿದ್ದ. ಮಂಗಳವಾರ ನಂಬಿಹಳ್ಳಿಗೆ ಬಂದ ನಾಗೇಶ್‌, ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವಿಚ್ಛೇದಿತ ಪತ್ನಿ ರಾಧಾ ಮತ್ತು ಮಾವನ ತಲೆಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ರಾಧಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮುನಿಯಪ್ಪ ಶ್ರೀನಿವಾಸಪುರದ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಕೃತ್ಯ ತಡೆಯಲು ಬಂದ ರಾಧಾ ಅಣ್ಣನ ಹೆಂಡತಿ ಅನುಷಾ (26) ಅಣ್ಣನ ಮಗ ವರುಣ್‌ (16) ಗಾಯಗೊಂಡಿದ್ದಾರೆ.

ಗ್ರಾಮಸ್ಥರು ಆರೋಪಿಯನ್ನು ಹಿಡಿಯಲು ದೊಣ್ಣೆಗಳೊಂದಿಗೆ ಧಾವಿಸಿದಾಗ, ಮನೆಯೊಂದರಲ್ಲಿ ಸೇರಿಕೊಂಡ ಆರೋಪಿ, ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಮತ್ತು ಬೆಂಕಿಪೊಟ್ಟಣ ಕೈಯಲ್ಲಿ ಹಿಡಿದು ಯಾರಾದರೂ ಮುಂದೆ ಬಂದರೆ ಸಿಲಿಂಡರ್ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಆರೋಪಿ ಕಾಲಿಗೆ ಗುಂಡು: ಸ್ಥಳಕ್ಕೆ ಸಿಬ್ಬಂದಿಯೊಂದಿಗೆ ಆಗಮಿಸಿದ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಅವರು ಮನೆಯಲ್ಲಿ ಅವಿತು ಕುಳಿತಿದ್ದ ಆರೋಪಿಗೆ ಶರಣಾಗಲು ಸೂಚಿಸಿದರು. ಆದರೆ, ಆರೋಪಿ ನಾಗೇಶ್‌ ಪೊಲೀಸರ ಮೇಲೆ ಮಾರಕಾಶ್ತ್ರಗಳಿಂದ ದಾಳಿ ಮಾಡಲು ಯತ್ನಿಸಿದಾಗ ಎಂ.ನಾರಾಯಣ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿದರು. ಕೆಳಗೆ ಬಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ.

ಸ್ಥಳಕ್ಕೆ ಡಿವೈಎಸ್‌ಪಿ ನಂದಕುಮಾರ್, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಆರ್.ದಯಾನಂದ, ಲೋಕೇಶ್, ವೆಂಕಟೇಶ್, ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳಾದ ಈಶ್ವರ್, ರಾಮ ಮತ್ತು ಸಿಬ್ಬಂದಿ ಭೇಟಿ ನೀಡಿದ್ದರು. ಶ್ರೀನಿವಾಸಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT