ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ: ಸಿದ್ಧತೆ

ಫೋನ್‍–ಇನ್ ಕಾರ್ಯಕ್ರಮದಲ್ಲಿ ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ನಾಗೇಂದ್ರಪ್ರಸಾದ್ ಹೇಳಿಕೆ
Last Updated 24 ಜೂನ್ 2021, 16:40 IST
ಅಕ್ಷರ ಗಾತ್ರ

ಕೋಲಾರ: ‘ಕೋವಿಡ್ ಆತಂಕದ ನಡುವೆಯೂ ಜುಲೈ 3ನೇ ವಾರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದು, ಇಲಾಖೆಯು ಸದ್ಯದಲ್ಲೇ ಪರೀಕ್ಷಾ ದಿನಾಂಕ ಘೋಷಿಸಲಿದೆ’ ಎಂದು ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ತಿಳಿಸಿದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಗೊಂದಲ ನಿವಾರಣೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಫೋನ್‍–ಇನ್ ಕಾರ್ಯಕ್ರಮದಲ್ಲಿ ಮಾತನಾಡಿ, ‘ವಿದ್ಯಾರ್ಥಿಗಳು ಹಾಗೂ ಪೋಷಕರು ಕೋವಿಡ್‌ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಇಲಾಖೆಯು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪರೀಕ್ಷಾ ಕೊಠಡಿಗಳಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿದೆ’ ಎಂದರು.

ಕಾರ್ಯಕ್ರಮಕ್ಕೆ 221 ವಿದ್ಯಾರ್ಥಿಗಳು ಕರೆ ಮಾಡಿ, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕಿಸಿ ಪರೀಕ್ಷೆಗೆ ಸಂಬಂಧಿಸಿದಂತೆ ಗೊಂದಲ ಪರಿಹರಿಸಿಕೊಂಡರು. ಗ್ರಾಮೀಣ ಭಾಗದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕರೆ ಮಾಡಿದ್ದು ವಿಶೇಷವಾಗಿತ್ತು.

ಪ್ರಶ್ನೆ ಕೇಳಿದ ಬಹುಪಾಲು ವಿದ್ಯಾರ್ಥಿಗಳಲ್ಲಿ ಕೋವಿಡ್ ಮತ್ತು ಪರೀಕ್ಷಾ ಭಯ ಕಾಣಲಿಲ್ಲ. ಪ್ರತಿಯೊಬ್ಬರೂ ಪರೀಕ್ಷಾ ಸಿದ್ಧತೆ, ಪಠ್ಯಕ್ರಮ ಕಡಿತ, ಪರೀಕ್ಷಾ ವಿಧಾನ, ಪ್ರಶ್ನೆಪತ್ರಿಕೆ ಮಾದರಿ ಬಗ್ಗೆ ಪ್ರಶ್ನೆ ಕೇಳಿ ಗೊಂದಲ ಪರಿಹರಿಸಿಕೊಂಡರು. ಯಾವುದೇ ವಿದ್ಯಾರ್ಥಿ ಕೋವಿಡ್ 2ನೇ ಅಲೆಯ ಆತಂಕದ ಬಗ್ಗೆ ಚಕಾರವೆತ್ತಲಿಲ್ಲ. ಆದರೆ, ಕಾರ್ಯಕ್ರಮಕ್ಕೆ ಕರೆ ಮಾಡಿದ ಪೋಷಕರಲ್ಲಿ ಕೆಲವರು ಕೋವಿಡ್‌ ಬಗ್ಗೆ ಆತಂಕ ವ್ಯಕ್ತಪಡಿಸಿದರು.

‘ಎಸ್ಸೆಸ್ಸೆಲ್ಸಿಯು ಶೈಕ್ಷಣಿಕ ಜೀವನದ ಪ್ರಮುಖ ಘಟ್ಟವಾಗಿದೆ. ವಿದ್ಯಾರ್ಥಿಗಳು ಕೋವಿಡ್ ಸಂದರ್ಭದಲ್ಲಿ ಅನಗತ್ಯವಾಗಿ ಹೊರಗೆ ಓಡಾಡಿ ಸೋಂಕಿಗೆ ತುತ್ತಾಗದೆ ಮನೆಯಲ್ಲೇ ಇದ್ದು, ಅಭ್ಯಾಸ ಮಾಡಬೇಕು. ಪರೀಕ್ಷಾ ಸಮಯ ಆಗಿರುವುದರಿಂದ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು’ ಎಂದು ನಾಗೇಂದ್ರಪ್ರಸಾದ್‌ ಕಿವಿಮಾತು ಹೇಳಿದರು.

ಮಾದರಿ ಪ್ರಶ್ನೆಪತ್ರಿಕೆ: ‘ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಈಗಾಗಲೇ ಮಕ್ಕಳಿಗೆ ಅಗತ್ಯವಾದ ಮಾದರಿ ಪ್ರಶ್ನೆಪತ್ರಿಕೆಗಳನ್ನು ಒದಗಿಸಿದೆ. ಗಣಿತ, ವಿಜ್ಞಾನ, ಸಮಾಜ ವಿಜ್ಞಾನಕ್ಕೆ ತಲಾ 40 ಅಂಕಗಳ ಬಹು ಆಯ್ಕೆ ವಿಧಾನದಲ್ಲಿ 120 ಪ್ರಶ್ನೆಗಳಿರುತ್ತವೆ. ಅದೇ ಮಾದರಿಯಲ್ಲಿ ಕನ್ನಡ, ಇಂಗ್ಲೀಷ್, ಹಿಂದಿ ಭಾಷಾ ವಿಷಯಕ್ಕೆ ತಲಾ 40ರಂತೆ ಬಹು ಆಯ್ಕೆಯ 120 ಅಂಕಗಳ ಪ್ರಶ್ನೆಪತ್ರಿಕೆ ಇರುತ್ತದೆ’ ಎಂದು ವಿವರಿಸಿದರು.

‘ಪ್ರಶ್ನೆಗಳ ಸಂಖ್ಯೆ 1ರಿಂದ ಆರಂಭವಾಗಿ 40ರವರೆಗೂ ಗಣಿತ, 41ರಿಂದ 80ರವರೆಗೂ ವಿಜ್ಞಾನ, 81ರಿಂದ 120ರವರೆಗೂ ಸಮಾಜ ವಿಜ್ಞಾನದ ಪ್ರಶ್ನೆಗಳಿರುತ್ತವೆ. ಇಲಾಖೆಯು ‘ನನ್ನನ್ನೊಮ್ಮೆ ಗಮನಿಸಿ’ ಪ್ರಶ್ನೋತ್ತರ ಮಾಲಿಕೆ ಒದಗಿಸಿದ್ದು, ಇದರ ಸದುಪಯೋಗ ಪಡೆಯಿರಿ’ ಎಂದು ಸಲಹೆ ನೀಡಿದರು.

ಪಠ್ಯಪುಸ್ತಕ ಓದಿ: ‘ಅತಿ ಹೆಚ್ಚು ಅಂಕ ಗಳಿಸಲು ಪಠ್ಯಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಪ್ರತಿ ಅಧ್ಯಾಯದ ಅಭ್ಯಾಸದಲ್ಲಿನ ಪ್ರಶ್ನೆಗಳಿಗೆ ಉತ್ತರಿಸಬೇಕು. ಇಲಾಖೆ ನೀಡಿರುವ ಅಧ್ಯಾಯವಾರು ಪ್ರಶ್ನೆಪತ್ರಿಕೆ, ‘ನನ್ನನ್ನೊಮ್ಮೆ ಗಮನಿಸಿ’ ಪ್ರಶ್ನೋತ್ತರ ಮಾಲಿಕೆ ಓದಬೇಕು. ಪ್ರಶ್ನೆಗಳಿಗೆ ಉತ್ತರ ಬರೆದು ಅಭ್ಯಾಸ ಮಾಡಬೇಕು’ ಎಂದು ವಿದ್ಯಾರ್ಥಿಗಳಿಗೆ ಸೂಚಿಸಿದರು.

‘ಗಣಿತದಲ್ಲಿ ತ್ರಿಕೋನಮಿತಿ, ಸಮಾನಾಂತರ ಶ್ರೇಣಿಗಳ ಪಠ್ಯದ ಕುರಿತು ಪ್ರಶ್ನೆ ಬರುತ್ತವೆ. ವಿಜ್ಞಾನದಲ್ಲಿ ಲೋಹಗಳು, ಅಲೋಹಗಳು, ಎಲೆಕ್ಟ್ರಿಕಲ್ ಅಭ್ಯಾಸಗಳ ಕುರಿತು ಪ್ರಶ್ನೆಗಳಿರುತ್ತವೆ. ಕನ್ನಡ, ಇಂಗ್ಲೀಷ್, ಹಿಂದಿಯಲ್ಲಿ ವ್ಯಾಕರಣ ಕುರಿತಂತೆ ಹೆಚ್ಚು ಪ್ರಶ್ನೆಗಳಿರುತ್ತವೆ. ನಿರಂತರ ಪುನರ್ಮನನ ಮಾಡಿದರೆ ಎಲ್ಲಾ ಉತ್ತರಗಳು ನೆನಪಿನಲ್ಲಿ ಇರುತ್ತವೆ. ಈ ಬಾರಿ ಪ್ರಶ್ನೆ ಪತ್ರಿಕೆ ಸುಲಭವಾಗಿರುತ್ತದೆ. ಪುಸ್ತಕದಲ್ಲಿನ ಮಾಹಿತಿ ಹೊರತುಪಡಿಸಿ ಬೇರೆ ಪ್ರಶ್ನೆ ಕೇಳುವುದಿಲ್ಲ’ ಎಂದರು.

ಪ್ರವೇಶಪತ್ರ: ‘ಖಾಸಗಿ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರ ಬದಲಾವಣೆಗೆ ಅವಕಾಶವಿಲ್ಲ. ವಲಸೆ ವಿದ್ಯಾರ್ಥಿಗಳಿಗೆ ಇರುವಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಅವರು ಹತ್ತಿರದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬಹುದು. ಪರೀಕ್ಷಾ ದಿನಾಂಕ ಘೋಷಣೆಯಾದ ನಂತರ ಆನ್‌ಲೈನ್‌ ಮೂಲಕ ಶಾಲೆಗಳಲ್ಲಿ ಪ್ರವೇಶಪತ್ರ ಪಡೆದುಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.

ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ವೆಂಕಟೇಶಪ್ಪ, ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT