ಹೊಸತನದ ಪ್ರಶ್ನೆಕೋಠಿ ತಯಾರಿಸಿ

7

ಹೊಸತನದ ಪ್ರಶ್ನೆಕೋಠಿ ತಯಾರಿಸಿ

Published:
Updated:
Prajavani

ಕೋಲಾರ: ‘ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೂ ಉಪಯೋಗವಾಗುವ ರೀತಿಯಲ್ಲಿ ಸಂಭವನೀಯ ಪ್ರಶ್ನೆಗಳನ್ನು ಒಳಗೊಂಡಂತೆ ‘ನನ್ನನ್ನೊಮ್ಮೆ ಗಮನಿಸಿ’ ಪ್ರಶ್ನೆಕೋಠಿ ಸಿದ್ಧಪಡಿಸಿ’ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಶಿಕ್ಷಕರಿಗೆ ಸಲಹೆ ನೀಡಿದರು.

ಇಲ್ಲಿ ಶುಕ್ರವಾರ ನಡೆದ ‘ನನ್ನನ್ನೊಮ್ಮೆ ಗಮನಿಸಿ’ ಸಂಭವನೀಯ ಪ್ರಶ್ನೆಗಳ ಕಿರುಹೊತ್ತಿಗೆ ಸಿದ್ಧತೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ‘ಪ್ರತಿ ವಿಷಯಕ್ಕೂ ಜಿಲ್ಲೆಯ 6 ಮಂದಿ ಸಂಪನ್ಮೂಲ ಶಿಕ್ಷಕರನ್ನು ನೇಮಿಸಲಾಗಿದೆ. ಶಿಕ್ಷಕರಲ್ಲಿನ ವಿಭಿನ್ನ ಆಲೋಚನೆಗಳೆಲ್ಲಾ ಒಂದೆಡೆ ಕೂಡಿ ಹೊಸತನದಿಂದ ಕೂಡಿದ ಮಕ್ಕಳಿಗೂ ಅನುಕೂಲವಾಗುವಂತಹ ಪ್ರಶ್ನೆಕೋಠಿ ತಯಾರಿಸಬೇಕು’ ಎಂದು ಹೇಳಿದರು.

‘ಇದೇ ಮೊದಲ ಬಾರಿಗೆ ಪ್ರಥಮ ಭಾಷೆಯಲ್ಲಿ ಕನ್ನಡ, ಇಂಗ್ಲೀಷ್, ಉರ್ದು, ದ್ವಿತೀಯ ಭಾಷೆಯಲ್ಲಿನ ಉರ್ದು, ಇಂಗ್ಲೀಷ್, ಕನ್ನಡ, ತೃತೀಯ ಭಾಷೆ ಹಿಂದಿಗೂ ಸಂಭವನೀಯ ಪ್ರಶ್ನೆಗಳ ಪ್ರಶ್ನೆಕೋಠಿ ತಯಾರಿಸಲಾಗುತ್ತಿದೆ’ ಎಂದು ವಿವರಿಸಿದರು.

‘ಈಗಾಗಲೇ ಜಿಲ್ಲೆಯ 200 ಶಿಕ್ಷಕರು ಸಿದ್ಧಪಡಿಸಿಕೊಟ್ಟಿರುವ 6 ಮಾದರಿಯ ಪ್ರಶ್ನೆಪತ್ರಿಕೆ, ಚಿತ್ರ ಬರೆಸು ಅಂಕ ಗಳಿಸು ಕಿರುಹೊತ್ತಿಗೆಗಳು ಇಡೀ ರಾಜ್ಯದ ಮೆಚ್ಚುಗೆಗೆ ಪಾತ್ರವಾಗಿವೆ. ಕೆಲ ಜಿಲ್ಲೆಗಳಲ್ಲಿ 40– 50ರ ಗುರಿ ಎಂದೆಲ್ಲಾ ಪ್ರಶ್ನೆಕೋಠಿ ತಯಾರಿಕೆ ರೂಢಿಯಲ್ಲಿದೆ. ಎಲ್ಲಾ ಕಲಿಕಾ ಸಾಮರ್ಥ್ಯದ ಮಕ್ಕಳಿಗೂ ಉಪಯೋಗವಾಗುವಂತೆ ಪ್ರಶ್ನೆಕೋಠಿ ತಯಾರಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಸಂಭಾವ್ಯ ಪ್ರಶ್ನೆ ದಾಖಲಿಸಿ: ‘ಒಂದು ಅಧ್ಯಾಯದಲ್ಲಿ 50 ಪ್ರಶ್ನೆ ಮಾಡಬಹುದಾದರೂ ಅತಿ ಸಂಭಾವ್ಯ ಪ್ರಶ್ನೆಗಳನ್ನು ಮಾತ್ರ ದಾಖಲಿಸಬೇಕು. ನಿಖರ ಪ್ರಶ್ನೆ, ಅನ್ವಯಿಕ ಪ್ರಶ್ನೆಗಳು ಒಳಗೊಂಡಿರಲಿ. ಭಾಷಾ ವಿಷಯದಲ್ಲಿ ವ್ಯಾಕರಣಕ್ಕೂ ಅವಕಾಶ ನೀಡಿ. ಸ್ಥಳೀಯ ವಾಸ್ತವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಬಂಧ ನೀಡಿ’ ಎಂದು ಸೂಚಿಸಿದರು.

‘ಶಿಕ್ಷಕರು ಸಿದ್ಧಪಡಿಸುತ್ತಿರುವ ನನ್ನನ್ನೊಮ್ಮೆ ಗಮನಿಸಿ ಪ್ರಶ್ನೆಕೋಠಿಯನ್ನು ಉಚಿತವಾಗಿ ಮುದ್ರಿಸಿ ಪ್ರತಿ ಶಾಲೆಗೊಂದರಂತೆ ವಿತರಿಸಲು ಮುಳಬಾಗಿಲಿನ ರೋಟರಿ ಸಂಸ್ಥೆ ಮುಂದೆ ಬಂದಿದೆ’ ಎಂದು ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಗೋಪಾಲರೆಡ್ಡಿ ಹೇಳಿದರು.

ವಿಷಯ ಪರಿವೀಕ್ಷಕರಾದ ಶಶಿವಧನ, ಗಾಯಿತ್ರಿ, ಕೃಷ್ಣಪ್ಪ, ಚಿನ್ಮಯ ವಿದ್ಯಾಲಯದ ಶಿಕ್ಷಕ ಶ್ರೀನಿವಾಸ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !