ಬುಧವಾರ, ಸೆಪ್ಟೆಂಬರ್ 22, 2021
28 °C
ಕಚೇರಿಗೆ ಜನರ ಅಲೆದಾಟ: ರೈತ ಸಂಘಟನೆ ಸದಸ್ಯರ ಅಸಮಾಧಾನ

ಕೋಲಾರ: ಸಿಬ್ಬಂದಿ ಕೊರತೆ, ಪರಿಹಾರಕ್ಕೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ತಾಲ್ಲೂಕಿನ ಸರ್ಕಾರಿ ಕಚೇರಿಗಳಲ್ಲಿನ ಸಿಬ್ಬಂದಿ ಕೊರತೆ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಾಮೂಹಿಕ ನಾಯಕತ್ವ ಸಂಘಟನೆ ಸದಸ್ಯರು ಇಲ್ಲಿ ಮಂಗಳವಾರ ಶಾಸಕ ಕೆ.ಶ್ರೀನಿವಾಸಗೌಡ ಅವರಿಗೆ ಮನವಿ ಸಲ್ಲಿಸಿದರು.

‘ಭೂ ದಾಖಲೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ರೈತರ ಸುಮಾರು 7 ಸಾವಿರ ಅರ್ಜಿಗಳು ಬಾಕಿಯಿವೆ. ಗ್ರಾಮ ಪಂಚಾಯಿತಿಗಳಲ್ಲಿ ಇ-ಸ್ವತ್ತು ಮಾಡಲು ಸರ್ವೆಯರ್‌ಗಳ ಕೊರತೆಯಿದೆ. ಕಚೇರಿಗಳಲ್ಲಿ ಸಿಬ್ಬಂದಿ ಕೊರತೆಯಿಂದ ರೈತರ ಹಾಗೂ ಜನಸಾಮಾನ್ಯರ ಕೆಲಸಗಳು ಸಕಾಲಕ್ಕೆ ಪೂರ್ಣಗೊಳ್ಳುತ್ತಿಲ್ಲ. ಹೀಗಾಗಿ ಜನರು ಕಚೇರಿಗೆ ಅಲೆದಾಡುವಂತಾಗಿದೆ’ ಎಂದು ಸಂಘಟನೆ ಸದಸ್ಯರು ಹೇಳಿದರು.

‘ಗ್ರಾಮೀಣ ಪ್ರದೇಶದ ನಕಾಶೆಯಲ್ಲಿರುವ ರಸ್ತೆ, ರಾಜಕಾಲುವೆ, ಕೆರೆ, ಗುಂಡು ತೋಪು, ಸರ್ಕಾರಿ ಜಮೀನುಗಳು ಒತ್ತುವರಿಯಾಗಿವೆ. ಈ ಬಗ್ಗೆ ಸರ್ವೆ ಮಾಡಲು ಸರ್ವೆಯರ್‌ಗಳ ಕೊರತೆಯಿದೆ. ಪಹಣಿ ಮತ್ತು ಜಮೀನಿನ ದಾಖಲೆಪತ್ರಗಳಲ್ಲಿನ ಸಣ್ಣಪುಟ್ಟ ತಿದ್ದುಪಡಿಗೆ ರೈತರು ತಿಂಗಳುಗಟ್ಟಲೇ ಕಾಯುವಂತಾಗಿದೆ’ ಎಂದು ಸಂಘಟನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಿವಪ್ಪ ಅಸಮಾಧಾನ ವ್ಯಕ್ತಪಡಿಸಿದರು.

‘ರಿಯಲ್‌ ಎಸ್ಟೇಟ್‌ ಮಾಫಿಯಾ ಜಿಲ್ಲೆಯ ಬಹುಪಾಲು ಕೆರೆಗಳು ಹಾಗೂ ರಾಜಕಾಲುವೆಗಳನ್ನು ಒತ್ತುವರಿ ಮಾಡಿದೆ. ಕೆರೆಯಂಗಳ ಹಾಗೂ ರಾಜಕಾಲುವೆಗಳ ಜಾಗದಲ್ಲಿ ಅನಧಿಕೃತ ಲೇಔಟ್‌ಗಳು ತಲೆ ಎತ್ತಿವೆ. ಲಂಚದಾಸೆಗೆ ಅಧಿಕಾರಿಗಳೇ ಈ ಅಕ್ರಮಕ್ಕೆ ಕೈಜೋಡಿಸಿದ್ದಾರೆ. ಭೂಗಳ್ಳರ ಹಾವಳಿಯಿಂದಾಗಿ ಕೆರೆ, ರಾಜಕಾಲುವೆಗಳು ಕಣ್ಮರೆಯಾಗಿವೆ’ ಎಂದು ಆರೋಪಿಸಿದರು.

ಅಧಿಕಾರಿಗಳು ಶಾಮೀಲು: ‘ನಕಲಿ ದಾಖಲೆಪತ್ರ ಸೃಷ್ಟಿಸಿ ಗ್ರಾಮೀಣ ಭಾಗದ ಸರ್ಕಾರಿ ಗೋಮಾಳ, ಗುಂಡು ತೋಪು, ಸ್ಮಶಾನ, ಕೆರೆ ಅಂಗಳ ಒತ್ತುವರಿ ಮಾಡಲಾಗಿದೆ. ಆದರೆ, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಸರ್ಕಾರಿ ಜಮೀನು ರಕ್ಷಿಸಬೇಕಾದ ಅಧಿಕಾರಿಗಳೇ ಭೂಗಳ್ಳರ ಜತೆ ಶಾಮೀಲಾಗಿದ್ದಾರೆ’ ಎಂದು ಸಂಘಟನೆ ಸದಸ್ಯರು ಕಿಡಿಕಾರಿದರು.

‘ಪೂರ್ವಿಕರು ಒಂದು ಕೆರೆಯಿಂದ ಮತ್ತೊಂದು ಕೆರೆಗೆ ರಾಜಕಾಲುವೆಗಳ ಮೂಲಕ ನೀರಿನ ಸಂಪರ್ಕ ಕಲ್ಪಿಸಿದ್ದರು. ಈಗ ರಾಜಕಾಲುವೆಗಳು ಒತ್ತುವರಿ ಆಗಿರುವುದರಿಂದ ಮಳೆ ನೀರು ಕೆರೆಗಳಿಗೆ ಹರಿಯುತ್ತಿಲ್ಲ. ಮತ್ತೊಂದೆಡೆ ಒತ್ತುವರಿಯಿಂದ ಕೆರೆ ಹಾಗೂ ರಾಜಕಾಲುವೆಗಳ ಮೂಲ ಸ್ವರೂಪವೇ ಬದಲಾಗಿದೆ’ ಎಂದರು.

‘ಗ್ರಾಮ ಮಟ್ಟದಲ್ಲಿ ವಿಶೇಷ ಅದಾಲತ್ ನಡೆಸಬೇಕು. ಪಹಣಿ ದುರಸ್ತಿ ಮಾಡಿ ಪಿ ನಂಬರ್‌ ತೆಗೆಯುವಂತೆ ಅಧಿಕಾರಿಗಳಿಗೆ ಸೂಚಿಸಬೇಕು. ಸರ್ಕಾರಿ ಭೂಮಿ, ರಾಜಕಾಲುವೆ, ಕೆರೆ, ಗುಂಡು ತೋಪು ಒತ್ತುವರಿ ತೆರವಿಗೆ ವಿಶೇಷ ಸಮಿತಿ ರಚಿಸಬೇಕು. ಹೆಚ್ಚುವರಿ ಸಿಬ್ಬಂದಿ ಹಾಗೂ ಸರ್ವೆಯರ್‌ಗಳ ನೇಮಕಾತಿಗೆ ಸರ್ಕಾರದ ಮೇಲೆ ಒತ್ತಡ ತರಬೇಕು’ ಎಂದು ಮನವಿ ಮಾಡಿದರು.

ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಮಂಜುನಾಥ್, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಆನಂದ್‌ಕುಮಾರ್, ಉಪಾಧ್ಯಕ್ಷ ಚೌಡಪ್ಪ, ಸದಸ್ಯರಾದ ಸುರೇಶ್, ವೀರಪ್ಪ, ಶ್ರೀನಿವಾಸ್, ಹನುಮಂತಗೌಡ, ವೆಂಕಟೇಶ್, ಮಲ್ಲಿಕಾರ್ಜುನ್‌ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು