ಭಾನುವಾರ, ಮೇ 29, 2022
30 °C

ಗ್ರಾ.ಪಂಗೆ ಬೀಗ ಜಡಿದು ಪ್ರತಿಭಟನೆ, ಮಾರ್ಜೇನಹಳ್ಳಿ ಪಿಡಿಒ ವಿರುದ್ಧ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ತಾಲ್ಲೂಕಿನ ಮಾರ್ಜೇನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಕಮಲಾ ಅವರು ಕರ್ತವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಗ್ರಾ.ಪಂ ಕಚೇರಿಗೆ ಸೋಮವಾರ ಬೀಗ ಜಡಿದು ಪ್ರತಿಭಟನೆ ಮಾಡಿದರು.

‘ಪಿಡಿಒ ಕಮಲಾ ಅವರ ದುರಾಡಳಿತದಿಂದ ಗ್ರಾ.ಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಗ್ರಾಮ ಸಭೆ, ಗ್ರಾ.ಪಂ ಸಭೆಗಳಲ್ಲಿ ಕಾಮಗಾರಿಗಳಿಗೆ ಅನುಮೋದನೆ ನೀಡಿದರೂ ಕೆಲಸಗಳು ಆಗುತ್ತಿಲ್ಲ. ಈ ಬಗ್ರ ಪ್ರಶ್ನೆ ಮಾಡಿದರೆ ಪಿಡಿಇ ಸಿಬ್ಬಂದಿ ಕೊರತೆ ಎಂದು ಸಬೂಬು ಹೇಳುತ್ತಾರೆ’ ಎಂದು ಗ್ರಾ.ಪಂ ಅಧ್ಯಕ್ಷ ಬಾಬು ಮೌನಿ ಆರೋಪಿಸಿದರು.

‘ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಆದರೆ, ಗ್ರಾ.ಪಂ ವ್ಯಾಪ್ತಿಯಲ್ಲಿ ನಿರೀಕ್ಷಿತ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಏಳೆಂಟು ತಿಂಗಳ ಹಿಂದೆ ಗ್ರಾಮ ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ಪೈಕಿ ಕನಿಷ್ಠ ಒಂದನ್ನೂ ಜಾರಿ ಮಾಡಿಲ್ಲ. ಕ್ರಿಯಾಯೋಜನೆ ರೂಪಿಸಿದರೂ ಕಾರ್ಯರೂಪಕ್ಕೆ ತಂದಿಲ್ಲ’ ಎಂದು ದೂರಿದರು.

‘ಇ–ಸ್ವತ್ತು ಸಮಸ್ಯೆ ಸಂಬಂಧ ಪ್ರತಿ ವಾರ ಒಂದೊಂದು ಗ್ರಾಮಕ್ಕೆ ಭೇಟಿ ಕೊಟ್ಟು ಸಮಸ್ಯೆ ಬಗೆಹರಿಸಬೇಕೆಂದು ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ, ಪಿಡಿಒ ಒಂದು ಹಳ್ಳಿಗೂ ಭೇಟಿ ಕೊಟ್ಟಿಲ್ಲ. ಬೇಜವಾಬ್ದಾರಿ ಪಿಡಿಒರನ್ನು ವರ್ಗಾವಣೆ ಮಾಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಏಕಪಕ್ಷೀಯ ನಿರ್ಧಾರ: ‘ಗ್ರಾ.ಪಂಗೆ 15ನೇ ಹಣಕಾಸು ಯೋಜನೆಗೆ ಅನುದಾನ ಬಿಡುಗಡೆಯಾಗಿತ್ತು. ಪಿಡಿಒ ಈ ಅನುದಾನದಲ್ಲಿ ಕ್ರೀಡಾಪಟುಗಳು ಮತ್ತು ಅಂಗವಿಕಲರಿಗೆ ಸೌಕರ್ಯ ನೀಡುವ ಸಂಗತಿಯನ್ನು ಅಧ್ಯಕ್ಷರು ಮತ್ತು ಸದಸ್ಯರ ಗಮನಕ್ಕೆ ತರದೆ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಸದಸ್ಯೆ ವಿದ್ಯಾಶ್ರೀ ಕಿಡಿಕಾರಿದರು.

‘ಗ್ರಾ.ಪಂ ಸಾಕಷ್ಟು ಅಕ್ರಮಗಳು ನಡೆದಿದ್ದು, ಈ ಸಂಬಂಧ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದೇವೆ. ಭ್ರಷ್ಟ ಮತ್ತು ಬೇಜವಾಬ್ದಾರಿ ಪಿಡಿಒರನ್ನು ಅಮಾನತು ಮಾಡಬೇಕು. ಅವರ ಸ್ಥಾನಕ್ಕೆ ದಕ್ಷ ಮತ್ತು ಪ್ರಾಮಾಣಿಕ ಪಿಡಿಒರನ್ನು ನೇಮಿಸಬೇಕು’ ಎಂದು ಒತ್ತಾಯಿಸಿದರು.

ಗ್ರಾ.ಪಂ ಉಪಾಧ್ಯಕ್ಷೆ ಗಾಯತ್ರಿ, ಸದಸ್ಯರಾದ ರವಿ, ಗೋಪಾಲ್, ವೆಂಕಟೇಶ್, ಭವ್ಯ, ರೂಪಾ, ಶೈಲಜಾ, ಎಂ.ಶಂಕರ್, ಹೇಮಲತಾ, ಎಂ.ಸಿ.ಮುನಿವೆಂಕಟಪ್ಪ, ನಾಗರಾಜ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು