ಭಾನುವಾರ, ಅಕ್ಟೋಬರ್ 24, 2021
21 °C
ಸ್ವಘೋಷಿತ ಅಧ್ಯಕ್ಷರಾಗಬೇಡಿ: ಕೈಗಾರಿಕೋದ್ಯಮಿ ರಾಜಪ್ಪ ಕಿವಿಮಾತು

ವಿಶ್ವಕರ್ಮ ಸಮುದಾಯದ ಏಳಿಗೆಗೆ ಶ್ರಮಿಸಿ: ಕೈಗಾರಿಕೋದ್ಯಮಿ ರಾಜಪ್ಪ ಕಿವಿಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರಾಜಕೀಯವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಬೆಳೆಯಲು ವಿಶ್ವಕರ್ಮ ಸಮಾಜದವರು ಸಂಘಟನೆ ರಚಿಸಿಕೊಂಡು ಸ್ವಘೋಷಿತ ಅಧ್ಯಕ್ಷರಾಗುವ ಬದಲು ಒಗ್ಗೂಡಿ ಸಮುದಾಯದ ಜನರ ಏಳಿಗೆಗೆ ಶ್ರಮಿಸಿ’ ಎಂದು ವಿಶ್ವಕರ್ಮ ಸಮಾಜದ ಮುಖಂಡ ಹಾಗೂ ಕೈಗಾರಿಕೋದ್ಯಮಿ ಪಿ.ರಾಜಪ್ಪ ಕಿವಿಮಾತು ಹೇಳಿದರು.

ಇಲ್ಲಿ ಸೋಮವಾರ ನಡೆದ ಜಿಲ್ಲಾ ವಿಶ್ವಕರ್ಮ ಸಮಾಜದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ‘ಸಮುದಾಯದ ಕೆಲವರು ಸ್ವಹಿತಾಸಕ್ತಿಗಾಗಿ ಸಂಘಟನೆಗಳನ್ನು ಕಟ್ಟಿ ಸ್ವಘೋಷಿತ ಅಧ್ಯಕ್ಷರಾಗುವುದರಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ. ಸರ್ಕಾರದ ಬೈಲಾದಂತೆ ಅಂಗೀಕೃತ ಸಂಘಟನೆ ಮೂಲಕ ಸಮುದಾಯಕ್ಕೆ ಸರ್ಕಾರದ ಸವಲತ್ತು ಪಡೆಯೋಣ’ ಎಂದು ಸಲಹೆ ನೀಡಿದರು.

‘ಸಮಾಜದಲ್ಲಿ ಬೇರೆ ಬೇರೆ ಸಮುದಾಯಗಳು ಸಂಘಟಿತವಾಗಿ ಸರ್ಕಾರದ ಅನುಕೂಲ ಪಡೆಯುತ್ತಿವೆ. ಆದರೆ, ವಿಶ್ವಕರ್ಮ ಸಮುದಾಯವು 67 ಮಂದಿ ಮಠಾಧೀಶರನ್ನು ಹೊಂದಿದ್ದರೂ ನಾವು ಸಂಘಟಿತರಾಗದೆ ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿದ್ದೇವೆ. ಇದು ಸ್ವಯಂಕೃತ ಅಪರಾಧ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸಮುದಾಯದ ಮಂದಿ ಸ್ವಹಿತಾಸಕ್ತಿ ಬಿಟ್ಟು ಒಗ್ಗೂಡಬೇಕು. ಆಗ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ. ಸಮಾಜದಲ್ಲಿನ ಆರ್ಥಿಕ ಸ್ಥಿತಿವಂತರು ಬಡ ಜನರಿಗೆ ನೆರವಾಗಬೇಕು. ಬಡ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಿ ಸುಶಿಕ್ಷಿತರಾಗಿ ಮಾಡಬೇಕು. ಜತೆಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಮಾರ್ಗದರ್ಶನ ನೀಡಬೇಕು’ ಎಂದು ಕೋರಿದರು.

‘ವಿಶ್ವಕರ್ಮ ಸಮುದಾಯದವರ ಕುಲ ಕಸುಬು ನಶಿಸುತ್ತಿದೆ. ಈ ಬಗ್ಗೆ ಸಮುದಾಯ ಜಾಗೃತಗೊಳ್ಳಬೇಕು. ಕುಲ ಕಸುಬು ಮುಂದುವರಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಈಗ ಎಂಜಿನಿಯರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಹಿಂದೆ ವಿಶ್ವಕರ್ಮರು ಜಗತ್ತಿಗೆ ವಾಸ್ತುಶಿಲ್ಪ, ಶಿಲ್ಪಕಲೆ ತಿಳಿಸಿಕೊಟ್ಟರು’ ಎಂದರು.

‘ರಾಜರ ಕಾಲವು ವಿಶ್ವಕರ್ಮ ಸಮುದಾಯದವರಿಗೆ ಸುವರ್ಣ ಯುಗವಾಗಿತ್ತು. ಸಮುದಾಯದವರು 800 ಶತಮಾನದಿಂದ ಜಗತ್ತಿಗೆ ದೇವರ ಮೂರ್ತಿಗಳನ್ನು ನೀಡುತ್ತಾ ಬಂದಿದ್ದಾರೆ. ದೇವರು ಇರುವವರೆಗೂ ಸಮುದಾಯವಿರುತ್ತದೆ. ವಿಶ್ವಕರ್ಮರನ್ನು ದೇವ ಶಿಲ್ಪಿ ಎಂತಲೂ ಕರೆಯುತ್ತಾರೆ. ಸಮುದಾಯದವರು ಪಂಚ ಕಸುಬು ಮಾಡುವ ಮೂಲಕ ಸಮಾಜದ ಅವಿಭಾಜ್ಯ ಅಂಗವಾಗಿ ಬೆಳೆಯುತ್ತಿದ್ದಾರೆ’ ಎಂದು ಹೇಳಿದರು.

ಸಂಘಟನೆ ಅಗತ್ಯ: ‘ಧಾರ್ಮಿಕ ಸಂಘಟನೆಯೊಂದಿಗೆ ಸಾಮಾಜಿಕ ಸಂಘಟನೆ ಮಾಡುವ ಅಗತ್ಯವಿದೆ. ಸದೃಢ ವಿಶ್ವಕರ್ಮ ಸಮಾಜ ಕಟ್ಟಲು ಸಂಘಟನೆಗೆ ಒಂದು ಧ್ಯೇಯ ಇರಬೇಕು ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡುವವರ ಜತೆ ಕೈಜೋಡಿಸಬೇಕು’ ಎಂದು ವಿಶ್ವಕರ್ಮ ಸಮುದಾಯದ ಶಿವ ಸುಜ್ಞಾನಮೂರ್ತಿ ಸ್ವಾಮೀಜಿ ತಿಳಿಸಿದರು.

‘ಜಿಲ್ಲೆಯಲ್ಲಿ ಸಮಾಜದ ಏಳಿಗೆಗೆ ಹಲವು ಯೋಜನೆಗಳನ್ನು ರೂಪಿಸಿದ್ದು, ಮುಂದಿನ ದಿನಗಳಲ್ಲಿ ಚುನಾವಣೆ ನಡೆಸಿ ಅಧ್ಯಕ್ಷರು ಹಾಗೂ ನಿರ್ದೇಶಕರುಗಳನ್ನು ಆಯ್ಕೆ ಮಾಡುತ್ತೇವೆ. ಸದ್ಯಕ್ಕೆ ಜಿಲ್ಲೆಯ ಎಲ್ಲಾ ತಾಲ್ಲೂಕು ಘಟಕಗಳಿಗೆ ಹಂಗಾಮಿ ಅಧ್ಯಕ್ಷರು ಮತ್ತು ನಿರ್ದೇಶಕರನ್ನು ನೇಮಿಸಿದ್ದು, ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸಲಾಗುತ್ತದೆ’ ಎಂದು ವಿವರಿಸಿದರು.

ಜಿಲ್ಲಾ ವಿಶ್ವಕರ್ಮ ಸಮಾಜದ ಸದಸ್ಯರಾದ ಎ.ಸರ್ವಜ್ಞಮೂರ್ತಿ, ವಿ.ಪರಮೇಶ್ವರ ಆಚಾರ್ಯ, ಕೆ.ಮೋಹನ್‌ ಆಚಾರ್‌, ಮುಖಂಡರಾದ ಹೊನ್ನಪ್ಪ ಆಚಾರ್, ನಾಗರಾಜ್ ಆಚಾರ್‌ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು