ಶನಿವಾರ, ಮಾರ್ಚ್ 6, 2021
31 °C

ಸುಭಾಷ್‌ಚಂದ್ರ ಬೋಸ್‌ ಅಪ್ರತಿಮ ದೇಶಭಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸುಭಾಷ್‌ಚಂದ್ರ ಬೋಸ್‌ ದೇಶ ಕಂಡ ಅಪ್ರತಿಮ ದೇಶಭಕ್ತ ಹಾಗೂ ವೀರ ಸೇನಾನಿ’ ಎಂದು ಬೆರಳಚ್ಚು ತಜ್ಞ ಸೋಮಶೇಖರ್ ಅಭಿಪ್ರಾಯಪಟ್ಟರು.

ಸುಭಾಷ್‌ಚಂದ್ರ ಬೋಸ್ ಜನ್ಮ ದಿನಾಚರಣೆ ಅಂಗವಾಗಿ ಯುವ ಬ್ರಿಗೇಡ್ ವತಿಯಿಂದ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ‘ಸುಭಾಷ್‌ಚಂದ್ರ ಬೋಸ್‌ರ ಕೊಡುಗೆಯನ್ನು ಪ್ರತಿಯೊಬ್ಬರು ಸ್ಮರಿಸಬೇಕು’ ಎಂದು ಹೇಳಿದರು.

‘ಬಂಗಾಳದ ಹುಲಿ ಸುಭಾಷ್‌ಚಂದ್ರ ಬೋಸ್‌ ಅವರನ್ನು ನೆನೆದರೆ ಮೈ ರೋಮಾಂಚನವಾಗುತ್ತದೆ. ಆಜಾದ್‌ ಹಿಂದ್‌ ಸೇನೆ ಕಟ್ಟಿದ ಅಖಂಡ ದೇಶಭಕ್ತ ಬೋಸ್‌ ಬದುಕಿದ್ದಿದ್ದರೆ ದೇಶ ವಿಭಜನೆಯನ್ನು ಒಪ್ಪುತ್ತಿರಲಿಲ್ಲ. ಭಾರತಕ್ಕೆ ಸಂಪೂರ್ಣ, ಬೇಷರತ್‌ ಸ್ವಾತಂತ್ರ್ಯ ಬೇಕೆಂಬುದು ಅವರ ಚಿಂತನೆಯಾಗಿತ್ತು’ ಎಂದು ವಿವರಿಸಿದರು.

‘ಸುಭಾಷ್‌ಚಂದ್ರ ಬೋಸ್‌ ಚಿಕ್ಕ ವಯಸ್ಸಿನಲ್ಲೇ ಸ್ವಾಮಿ ವಿವೇಕಾನಂದ, ಮಹರ್ಷಿ ಅರವಿಂದರ ಸಾಹಿತ್ಯದಿಂದ ಪ್ರಭಾವಿತರಾಗಿದ್ದರು. ಆರಂಭದಲ್ಲಿ ಕಾಂಗ್ರೆಸ್‌ ಸೇರಿದ್ದರೂ ಅದರ ನೀತಿಗಳೂ ಅವರಿಗೆ ಬಹುಬೇಗನೆ ಜಿಗುಪ್ಸೆ ತರಿಸಿದವು. ಸ್ವಾತಂತ್ರ್ಯವನ್ನು ಪಡೆಯಲು ಗಾಂಧಿಯವರ ಅಹಿಂಸೆಯ ತಂತ್ರ ಎಂದಿಗೂ ಸಾಕಾಗುವುದಿಲ್ಲ ಎಂದು ಬೋಸ್‌ ನಂಬಿದ್ದರು ಮತ್ತು ಹಿಂಸಾತ್ಮಕ ಪ್ರತಿರೋಧವನ್ನು ಪ್ರತಿಪಾದಿಸಿದರು’ ಎಂದು ಮಾಹಿತಿ ನೀಡಿದರು.

‘ದೇಶವನ್ನು ದಾಸ್ಯದ ಸಂಕೋಲೆಯಿಂದ ಬಿಡಿಸುವ ಸುಭಾಷ್‌ಚಂದ್ರ ಬೋಸ್‌ರ ಕನಸು ಮತ್ತು ಯೋಜನೆ ಸಫಲವಾಗಿದ್ದರೆ ಭಾರತ ಎಂದೋ ವಿಶ್ವ ಗುರುವಾಗಿರುತ್ತಿತ್ತು. ಆದರೆ, ಆಗಿನ ಕುತಂತ್ರಿಗಳ, ರಾಜಕೀಯ ದುರುಳರ ವ್ಯವಸ್ಥಿತ ಕುತಂತ್ರದಿಂದ ಅವರ ಯೋಜನೆ ಮತ್ತು ಯೋಚನೆ ಸಫಲವಾಗಲಿಲ್ಲ’ ಎಂದು ಜಿಲ್ಲಾ ಮಾಜಿ ಯೋಧರ ಟ್ರಸ್ಟ್‌ ಉಪಾಧ್ಯಕ್ಷ ಕೃಷ್ಣಮೂರ್ತಿ ಕಳವಳ ವ್ಯಕ್ತಪಡಿಸಿದರು.

ನಗರ ಪೊಲೀಸ್‌ ಠಾಣೆ ಎಸ್‌ಐ ಅಣ್ಣಯ್ಯ, ಜಿಲ್ಲಾ ಮಾಜಿ ಯೋಧರ ಟ್ರಸ್ಟ್‌ ಅಧ್ಯಕ್ಷ ಜಗನ್ನಾಥ್‌, ಯುವ ಬ್ರಿಗೇಡ್ ತಂಡದ ಸದಸ್ಯರು ಪಾಲ್ಗೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.