ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿ, ಪಕ್ಷಿಗಳಿಗೆ ನೀರು, ಕಾಳಿನ ಸೇವೆ; ಪರಿಸರ ಜಾಗೃತಿಯಲ್ಲಿ ವಿದ್ಯಾರ್ಥಿಗಳು

ಮಾನವೀಯತೆ ಮೆರೆದು ಪರಿಸರ ಜಾಗೃತಿ ಮೂಡಿಸಿದ ಕಾಲೇಜು ವಿದ್ಯಾರ್ಥಿಗಳು
Last Updated 15 ಮಾರ್ಚ್ 2019, 10:26 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಬಿಸಲಿನ ಬೇಗೆಯಿಂದ ಎಲ್ಲ ಜೀವಿಗಳು ತತ್ತರಿಸುತ್ತಿವೆ. ಮನುಷ್ಯರಷ್ಟೇ ಅಲ್ಲ, ಪ್ರಾಣಿ ಪಕ್ಷಿಗಳು ನೀರು, ಆಹಾರಕ್ಕಾಗಿ ಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಅರಿತ ಪ್ರಾಣಿ, ಪಕ್ಷಿಗಳ ಸಂಕಷ್ಟ ಅರಿತು ರಕ್ಷಣೆ ಮಾಡಲು ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮುಂದಾಗಿದ್ದಾರೆ. ಆ ಮೂಲಕ ಮಾನವ ಧರ್ಮಕ್ಕೆ ಮುನ್ನಡೆ ಬರೆದಿದ್ದಾರೆ.

ತಾಲ್ಲೂಕಿನಾದ್ಯಂತ ದಾಖಲೆ ಪ್ರಮಾಣದಲ್ಲಿ ಬಿಸಿಲಿನ ತಾಪಮಾನವಿದೆ. ಜಲಮೂಲಗಳು ಬತ್ತಿವೆ. ಕುಡಿಯುವ ನೀರಿಗೂ ತತ್ವಾರ ಶುರುವಾಗಿದೆ. ನೀರಿಗಾಗಿ ಮೈಲುಗಟ್ಟಲೆ ಅಲೆಯಬೇಕಾಗಿದೆ. ಇದು ಸಣ್ಣ ಪಕ್ಷಿ, ಪ್ರಾಣಿಗಳ ಬದುಕಿಗೆ ಮಾರಕ ವಾಗಿದೆ. ನೀರು ಮತ್ತು ಆಹಾರ ಇಲ್ಲದೆ ಪಕ್ಷಿಗಳು ಜೀವ ಕಳೆದುಕೊಳ್ಳುವ ಭೀತಿ ಕಾಡುತ್ತಿದೆ.

ಪ್ರಾಣಿ, ಪಕ್ಷಿಗಳ ಈ ಸಮಸ್ಯೆ ಕಂಡ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ಅವರುಗಳ ರಕ್ಷಣೆಗಾಗಿ ತಮ್ಮ ಶೈಲಿಯಲ್ಲಿ ನೆರವಿನ ಹಸ್ತ ಕೈಚಾಚಿದ್ದಾರೆ. ಹೋಟೆಲ್‌, ರೆಸ್ಟೊರಂಟ್‌ಗಳಲ್ಲಿ ನೀರು ಕುಡಿದು ಬೀಸಾಡಿದ ಬಾಟಲಿಗಳನ್ನು ಸಂಗ್ರಹಿಸಿ ತಂದು ಸಣ್ಣ ಡಬ್ಬಿಗಳಾಗಿ ಕತ್ತರಿಸಿ ಗಿಡ, ಮರಗಳಿಗೆ ಕಟ್ಟಿದ್ದಾರೆ. ಅವುಗಳಲ್ಲಿ ತಮ್ಮ ಮನೆಯಿಂದ ತಂದ ಅಕ್ಕಿ, ಗೋಧಿ, ರಾಗಿ, ಕಾಳುಗಳನ್ನು ಹಾಕುತ್ತಿದ್ದಾರೆ. ಕಾಳು ಖಾಲಿಯಾಗುತ್ತಿದ್ದಂತೆ ತುಂಬಿಸಿಡುವರು. ಅಲ್ಲಲ್ಲಿ ಕುಡಿಯುವ ನೀರಿಗೂ ತೊಟ್ಟಿ ನಿರ್ಮಿಸಿದ್ದಾರೆ. ಮತ್ತೆ ಕೆಲವು ಗಿಡಗಳಲ್ಲಿಯೇ ನೀರಿನ ವ್ಯವಸ್ಥೆಯನ್ನೂ ಮಾಡಿದ್ದಾರೆ.

ಇದರ ಜೊತೆ ಪ್ಲಾಸ್ಟಿಕ್‌ ಹಾಳೆ ಬಳಸಿ ಕಾಲೇಜಿನ ಆವರಣದಲ್ಲಿ ಸಣ್ಣ ಹೊಂಡ ನಿರ್ಮಿಸಿದ್ದಾರೆ. ಅದರಲ್ಲಿ ನೀರು ತುಂಬಿಸಿದ್ದಾರೆ. ಇದು ಹಲವು ಪ್ರಾಣಿಗಳ ದಾಹ ತಣಿಸುತ್ತಿದೆ. ಮುಂಗುಸಿ ಮತ್ತಿತರ ಪ್ರಾಣಿಗಳು ನೀರು ಕುಡಿಯಲು ಇಲ್ಲಿಗೆ ಬರುತ್ತಿರುವುದು ಗಮನ ಸೆಳೆಯುತ್ತದೆ.

ಪ್ರಾಣಿ, ಪಕ್ಷಿಗಳಿಗೆ ನೀರು, ಆಹಾರ ಒದಗಿಸುವ ಉಸ್ತುವಾರಿಯನ್ನು ಸಹಾಯಕ ಪ್ರಾಧ್ಯಾಪಕ ಡಾ.ಕೆ.ಎಂ.ನಯಾಜ್ ಅಹ್ಮದ್ ಹೊತ್ತಿದ್ದಾರೆ. ‘ನಾವು ಮಾನವ ಧರ್ಮ ಪಾಲಿಸುತ್ತಿದ್ದೇವೆ. ಅಸಹಾಯಕ ಜೀವ ಜಂತುಗಳಿಗೆ ಒಂದಿಷ್ಟು ನೀರು, ಆಹಾರ ನೀಡುತ್ತಿದ್ದೇವೆ. ಅವುಗಳಿಗೆ ನಮ್ಮ ಆಸ್ತಿಯನ್ನೇನೂ ನೀಡುತ್ತಿಲ್ಲ’ ಎಂದರು.

‘ದಿನ ಹತ್ತಿಪ್ಪತ್ತು ನಿಮಿಷ ಈ ಜೀವಿಗಳಿಗೆ ಮೀಸಲಿಟ್ಟರೆ ನೆಮ್ಮದಿ ಸಿಗುತ್ತದೆ. ಅವುಗಳ ಮೂಲಕ ಪರಿಸರದ ಜೊತೆ ಭಾವನಾತ್ಮಕ ಸಂಬಂಧ ಬೆಸೆ ಯುತ್ತದೆ. ಮನುಷ್ಯರಾಗಿದ್ದಕ್ಕೂ ಸಾರ್ಥಕವಾಗುತ್ತ ಪ್ರತಿಯೊಬ್ಬರೂ ತಮ್ಮ ದಿನದ ಇಪ್ಪತ್ತನಾಲ್ಕು ಗಂಟೆಗಳ ಅವಧಿಯಲ್ಲಿ ಕೇವಲ ಹತ್ತು ನಿಮಿಷ ಈ ಜೀವಿಗಳಿಗೆ ಮುಡುಪಾಗಿಟ್ಟರೆ ಕಳೆದು ಕೊಳ್ಳುವುದೇನೂ ಇರಲ್ಲ’ ಎಂದರು.

ವೈರಲ್ ಆದ ವಿಡಿಯೊ: ಗಿಡಗಳಲ್ಲಿ ಆಹಾರ ಮತ್ತು ನೀರಿನ ಬಾಟಲಿ ಕಟ್ಟುತ್ತಿರುವ ವಿದ್ಯಾರ್ಥಿಗಳ ಕಾರ್ಯ ಹಿನ್ನೆಲೆ ಧ್ವನಿ ಹಾಗೂ ಸಂಗೀತ ನೀಡಿ ಮೊಹಮ್ಮದ್ ರಿಹಾನ್‌ ನಿರ್ಮಿಸಿರುವ ವಿಡಿಯೊ ವೈರಲ್‌ ಆಗಿದೆ. ಬಹುತೇಕ ಎಲ್ಲರಿಂದಲೂ ಪ್ರಶಂಸೆ ವ್ಯಕ್ತವಾಗಿದೆ.

ಪ್ರಯತ್ನ ಸಾರ್ಥಕವೆನಿಸುವ ಕ್ಷಣ

'ಕಾಲೇಜಿನ ಸುತ್ತ ಎಲ್ಲಿಯೂ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರಿಲ್ಲ. ತಿನ್ನಲು ಆಹಾರ ಸಿಗುತ್ತಿಲ್ಲ. ಹಸಿವು, ನೀರಡಿಕೆಯಿಂದ ಜೀವಿಗಳು ಸಾಯುವುದು ನಾವು ಕಂಡಿದ್ದೇವೆ. ಇದನ್ನು ತಡೆಯಲು ಇದೊಂದು ಸಣ್ಣ ಪ್ರಯತ್ನವಾಗಿದೆ. ಕಾಲೇಜಿನ ಆವರಣ ನೂರಾರು ಗಿಡ-ಮರಗಳಲ್ಲಿ ಆಹಾರ ಮತ್ತು ನೀರಿನ ಡಬ್ಬಿ ಕಟ್ಟಲಾಗಿದೆ. ಬೆಳಿಗ್ಗೆ ಮತ್ತು ಸಂಜೆ ಪಕ್ಷಿಗಳು ಇಲ್ಲಿಗೆ ಬಂದು ಆಹಾರ ತಿನ್ನುತ್ತವೆ. ಇದನ್ನು ನೋಡಲು ಖುಷಿಯಾಗುತ್ತದೆ. ನಮ್ಮ ಪ್ರಯತ್ನವೂ ಸಾರ್ಥಕ ಎನಿಸುತ್ತದೆ' ಎಂದು ಪ್ರಾಂಶುಪಾಲ ಪ್ರೊ.ವೈ.ನಾರಾಯಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT