ಬುಧವಾರ, ಸೆಪ್ಟೆಂಬರ್ 22, 2021
21 °C
ಸಮುದಾಯ ಹಿಂದುಳಿದಿದೆ: ವಿಧಾನ ಪರಿಷತ್ ಸದಸ್ಯ ಮನೋಹರ್ ಹೇಳಿಕೆ

ಮಡಿವಾಳರ ಎಸ್ಸಿ ಹೋರಾಟಕ್ಕೆ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮಡಿವಾಳ ಸಮುದಾಯ ತೀರಾ ಹಿಂದುಳಿದಿದ್ದು, ನ್ಯಾಯಯುತ ಬೇಡಿಕೆಗಳಿಗೆ ಹೋರಾಟ ನಡೆಸುತ್ತಿದೆ. ಸಮುದಾಯದ ಎಸ್ಸಿ ಮೀಸಲಾತಿ ಹೋರಾಟಕ್ಕೆ ನನ್ನ ಬೆಂಬಲವಿದೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಆರ್.ಮನೋಹರ್ ಹೇಳಿದರು.

ತಾಲ್ಲೂಕು ಮಡಿವಾಳ ಸಮಾಜವು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಮುದಾಯದ ಬಡ ಜನರಿಗೆ ದಿನಸಿ ಕಿಟ್‌ ವಿತರಿಸಿ ಮಾತನಾಡಿ, ‘ಮಡಿವಾಳ ಸಮಾಜದ ಸಂಘಟನೆ ಇತ್ತೀಚೆಗೆ ಬಲಗೊಳ್ಳುತ್ತಿದೆ. ಸಮುದಾಯದ ಜನರ ಸಂಘಟಿತರಾದರೆ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯ’ ಎಂದು ಕಿವಿಮಾತು ಹೇಳಿದರು.

‘ಸಮುದಾಯ ಭವನ ಮತ್ತು ಜನಾಂಗದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಸೇರಿದಂತೆ ಮಡಿವಾಳ ಸಮುದಾಯದ ಸಮಗ್ರ ಅಭಿವೃದ್ಧಿಗೆ ಕೈ ಜೋಡಿಸುತ್ತೇನೆ. ಮಡಿವಾಳ ಸಮಾಜದ ಅಭಿವೃದ್ಧಿಗೆ ವಿಧಾನ ಪರಿಷತ್‌ ಸದಸ್ಯರ ನಿಧಿಯಿಂದ ₹ 10 ಲಕ್ಷ ಹಾಗೂ ವೈಯಕ್ತಿಕವಾಗಿ ₹ 5 ಲಕ್ಷ ನೆರವು ನೀಡುತ್ತೇನೆ’ ಎಂದು ಘೋಷಿಸಿದರು.

‘ಮಡಿವಾಳ ಸಮುದಾಯ ಶ್ರೇಷ್ಠ ಸಮಾಜವಾಗಿದೆ. ಇವರ ಶಾಪಕ್ಕೆ ಒಳಗಾದರೆ ಯಾರೂ ಉದ್ಧಾರವಾಗಲ್ಲ. ಸಮುದಾಯದ ಮಹನೀಯ ಮಡಿವಾಳ ಮಾಚಿದೇವರು 12ನೇ ಶತಮಾನದಲ್ಲಿ ಶೋಷಣೆ ವಿರುದ್ಧ ಧ್ವನಿ ಎತ್ತಿದ್ದರು. ಮಡಿವಾಳ ಮಾಚಿದೇವ, ಬಸವಣ್ಣ ಸೇರಿದಂತೆ ವಚನಕಾರರು ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಸೃಷ್ಟಿಸಿದರು’ ಎಂದು ನಗರಸಭೆ ಸದಸ್ಯ ಬಿ.ಎಂ.ಮುಬಾರಕ್ ಅಭಿಪ್ರಾಯಪಟ್ಟರು.

‘ಶರಣರ ಬಳಗದಲ್ಲಿ ಮಾಚಿದೇವ ಅಗ್ರಮಾನ್ಯರು. ದುರ್ಬಲರ ಮೇಲಿನ ಶೋಷಣೆ, ಜಾತೀಯತೆ, ಮೇಲು-ಕೀಲು, ತಾರತಮ್ಯ, ಮೂಢನಂಬಿಕೆ ವಿರುದ್ಧ ಅವರು ಸಾಮಾಜಿಕ ಹೋರಾಟ ನಡೆಸಿದರು. ವೃತ್ತಿಯಿಂದ ಅಗಸರಾದ ಅವರು ಬದುಕು ಹಾಗೂ ವಚನಗಳ ಮೂಲಕ ಸಮಾಜದ ಕೊಳೆ ತೊಳೆಯಲು ಪ್ರಯತ್ನಿಸಿದ ಅಪರೂಪದ ಶರಣರು’ ಎಂದು ಸ್ಮರಿಸಿದರು.

‘ಮಡಿವಾಳ ಜನಾಂಗವು ಸಣ್ಣ ಸಮುದಾಯವಾಗಿದೆ. ಯಾವುದೇ ಸಮುದಾಯದವರು ಶೈಕ್ಷಣಿಕವಾಗಿ ಪ್ರಗತಿ ಹೊಂದಿದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರುತ್ತದೆ. ಪೋಷಕರು ಯಾವುದೇ ಕಾರಣಕ್ಕೂ ಮಕ್ಕಳನ್ನು ಶಿಕ್ಷಣದಿಂದ ವಂಚಿಸಬಾರದು. ಕಲಿಕೆಗೆ ಕೊನೆಯಿಲ್ಲ. ಮಕ್ಕಳಿಗೆ ಆಸಕ್ತಿ ಇರುವವರೆಗೂ ಶಿಕ್ಷಣ ಕೊಡಿಸಬೇಕು’ ಎಂದು ಸಲಹೆ ನೀಡಿದರು.

ಖಾತೆಗೆ ಕ್ರಮ: ‘ದೋಬಿ ಘಾಟ್‌ನಲ್ಲಿ ಶೀಘ್ರವೇ ಕೊಳವೆ ಬಾವಿ ಕೊರೆಸುತ್ತೇವೆ. ಜತೆಗೆ ದೋಬಿ ಘಾಟ್‌ಗೆ ಖಾತೆ ಮಾಡಿಕೊಡಲು ಕ್ರಮ ಕೈಗೊಳ್ಳುತ್ತೇವೆ. ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಸಹಕರಿಸುತ್ತೇವೆ’ ಎಂದು ನಗರಸಭೆ ಅಧ್ಯಕ್ಷೆ ಶ್ವೇತಾ ಭರವಸೆ ನೀಡಿದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಸದಸ್ಯರಾದ ಗುರು, ಕೆ.ಎಂ.ಮಂಜುನಾಥ್, ಮಡಿವಾಳ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಗೌರವಾಧ್ಯಕ್ಷ ಸಂಜೀವಪ್ಪ, ಮಡಿವಾಳ ಸಮುದಾಯದ ಮುಖಂಡರು ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು