ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಸ್ವಾಮಿ ವಿವೇಕಾನಂದ ಚಿಂತನಾಶೀಲ ವ್ಯಕ್ತಿ

Last Updated 22 ಜನವರಿ 2022, 12:54 IST
ಅಕ್ಷರ ಗಾತ್ರ

ಕೋಲಾರ: ‘ಯುವ ಶಕ್ತಿಯ ಪ್ರತೀಕವಾದ ಸ್ವಾಮಿ ವಿವೇಕಾನಂದರು ಭಾರತೀಯತೆ ಮತ್ತು ಸಹಬಾಳ್ವೆ ಬಗ್ಗೆ ಸಮಾಜಕ್ಕೆ ಅರ್ಥಪೂರ್ಣ ಸಂದೇಶ ನೀಡಿದರು. ಧರ್ಮ ಸಮನ್ವಯ ಹಾಗೂ ಸರ್ವ ಧರ್ಮ ಗೌರವದ ಬಗ್ಗೆ ಪ್ರಪಂಚವೇ ಒಪ್ಪುವ ಸಂದೇಶ ನೀಡಿದ ಮಹಾನ್ ವ್ಯಕ್ತಿ’ ಎಂದು ಸರ್ಕಾರಿ ಮಹಿಳಾ ಕಾಲೇಜಿನ ಉಪನ್ಯಾಸಕ ಶಿವಪ್ಪ ಅರಿವು ಸ್ಮರಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಈ ನೆಲ ಈ ಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಸಹಯೋಗದಲ್ಲಿ ಯುವ ಸಪ್ತಾಹ ಕಾರ್ಯಕ್ರಮದಡಿ ತಾಲ್ಲೂಕಿನ ಚೌಡದೇನಹಳ್ಳಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಬಂಧ ಮತ್ತು ಭಾಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

‘ಮೇದಾವಿ ಮತ್ತು ತತ್ವಜ್ಞಾನಿ ವಿವೇಕಾನಂದರು ಸದಾ ಚಿಂತನಾಶೀಲತೆಯ ವ್ಯಕ್ತಿಯಾಗಿದ್ದು, ಅವರೇ ಯುವಕ ಯುವತಿಯರಿಗೆ ಆದರ್ಶಪ್ರಾಯರು. ರಾಮಕೃಷ್ಣ ಪರಮಹಂಸರ ಶಿಷ್ಯರಾದ ಅವರು ಚಿಕ್ಕ ವಯಸ್ಸಿನಲ್ಲೇ ಭಾರತೀಯ ತತ್ವಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಪಡೆದರು. ಅವರು ಭಾರತೀಯ ಧರ್ಮ ಮತ್ತು ಅಧ್ಯಾತ್ಮದ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು’ ಎಂದು ತಿಳಿಸಿದರು.

‘ವಿವೇಕಾನಂದರು ತಮ್ಮ 30ನೇ ವಯಸ್ಸಿನಲ್ಲೇ ವಿಶ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣ ಅವಿಸ್ಮರಣೀಯ. ಅವರು ಕನ್ಯಾಕುಮಾರಿಯ ಬಂಡೆಯ ಮೇಲೆ ಯೋಗಾಭ್ಯಾಸ ನಡೆಸಿದರು. ತಪ್ಪು ದಾರಿಯತ್ತ ಸಾಗುತ್ತಿದ್ದ ಸಮಾಜವನ್ನು ಸರಿ ದಾರಿಗೆ ತರಲು ಪ್ರಯತ್ನಿಸಿದರು. ಯುವಕರು ಜೀವನದಲ್ಲಿ ಅವರ ವಿಚಾರಧಾರೆ ಅಳವಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಸಂಕುಚಿತ ಭಾವನೆ: ‘ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಬೇಕಾದರೆ ಏನಾದರೂ ತ್ಯಾಗ ಮಾಡಬೇಕು. ಪ್ರಾಣ ತ್ಯಾಗವಲ್ಲ. ನಿಮ್ಮ ಸಮಯ ತ್ಯಾಗ ಮಾಡಿದರೆ ಸಾಕು. ವಿವೇಕಾನಂದರು ಇಡೀ ಜೀವನ ತ್ಯಾಗ ಮಾಡಿದ್ದಾರೆ. ಕಡು ಕಷ್ಟದಿಂದ ಬಂದ ವಿವೇಕಾನಂದರು ಹಣ ಮಾಡಲಿಲ್ಲ. ತುಂಬಾ ಹಣ ಮಾಡಿದವರನ್ನು ನಾವು ನೆನೆಯುವುದಿಲ್ಲ. ಆದರೆ, ವಿವೇಕಾನಂದರನ್ನು ನೆನೆಯುತ್ತೇವೆ. ಅವರು ಸಮಾಜಕ್ಕೆ ನೀಡಿದ ಕೊಡುಗೆ ಇದಕ್ಕೆ ಕಾರಣ’ ಎಂದರು.

‘ಜನರಲ್ಲಿ ಸಂಕುಚಿತ ಭಾವನೆ ಹೆಚ್ಚಿದೆ. ಜಾತಿ, ಭಾಷೆ, ಧರ್ಮಗಳ ಎಲ್ಲೆಮೀರಿ ನಾವೆಲ್ಲಾ ಭಾರತೀಯ ವಿಶಾಲ ಭಾವನೆ ಜನರಲ್ಲಿ ಮೂಡಬೇಕು. ನಮ್ಮ ಘನತೆ ಹೆಚ್ಚಿಸುವ ಕೆಲಸ ಮಾಡಬೇಕು. ದೇಶದಲ್ಲಿ ಶೇ 50ರಷ್ಟು ಯುವ ಸಂಪನ್ಮೂಲವಿದೆ. ಯುವಕ ಯುವತಿಯರು ಮಾರ್ಗದರ್ಶನದ ಕೊರತೆಯಿಂದ ತಪ್ಪು ದಾರಿ ಹಿಡಿಯುತ್ತಿದ್ದಾರೆ. ಯುವಕರು ಶಿಕ್ಷಣ ಪಡೆದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ' ಎಂದು ಅಭಿಪ್ರಾಯಪಟ್ಟರು.

ಸರ್ಕಾರಿ ಮಹಿಳಾ ಕಾಲೇಜಿನ ಕನ್ನಡ ಉಪನ್ಯಾಸಕರಾದ ಸಿ.ಎ.ರಮೇಶ್, ರವೀಂದ್ರ, ಜನಪದ ಕಲಾವಿದರಾದ ವೆಂಕಟಾಚಲಪತಿ, ಬಿ.ವಿ.ಸೌದಾಮಿನಿ, ಗ್ರಾಮದ ಬೀರೇಶ್ವರ ತಾತಯ್ಯರ ವಿದ್ಯಾ ಸಂಸ್ಥೆ ಮುಖ್ಯ ಶಿಕ್ಷಕ ಸಂಗಮೇಶ್, ಶಿಕ್ಷಕಿ ಶಿಲ್ಪಾ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಂಜು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT