ಬುಧವಾರ, ಜುಲೈ 28, 2021
29 °C
ಚಂದ್ರಮೌಳೇಶ್ವರ ನೆನಪಿಗಾಗಿ ರಸ್ತೆಗೆ ಹೆಸರು ನಾಮಕರಣದ ಭರವಸೆ

ತಹಶೀಲ್ದಾರ್ ಹತ್ಯೆ ಖಂಡಿಸಿ ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಂಗಾರಪೇಟೆ: ತಹಶೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಅವರ ಹತ್ಯೆ ಖಂಡಿಸಿ ವಿವಿಧ ಪ್ರಗತಿ ಪರ ಸಂಘಟನೆಗಳು ಕರೆ ನೀಡಿದ್ದ ಬಂಗಾರಪೇಟೆ ಬಂದ್‌ಗೆ ಉತ್ತಮ ಸ್ಪಂದನೆ ದೊರೆಯಿತು.

ಬಜಾರು ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿನ ಅಂಗಡಿಗಳನ್ನು ಮುಚ್ಚಲಾಗಿತ್ತು. ಔಷಧಿ, ಹಾಲು, ತರಕಾರಿ ಅಂಗಡಿಗಳು ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧಗೊಂಡಿದ್ದವು. ಕೆಎಸ್ಆರ್‌ಟಿಸಿ ಬಸ್ ಮತ್ತು ಆಟೊ ಸಂಚಾರ ಎಂದಿನಂತೆ ಇತ್ತು. ಆದರೆ, ಜನಸಂಚಾರ ವಿರಳವಾಗಿತ್ತು.

ವರ್ತಕರು, ಆಟೊ ಚಾಲಕರು, ದಲಿತ ಪರ ಸಂಘಟನೆಗಳು, ಕರವೇ ಸಂಘಟನೆ, ರೈತ ಸಂಘದವರು ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದವರು ಬೀದಿಗಿಳಿದು ಪ್ರತಿಭಟಿಸಿದರು. ಗ್ರಾಮೀಣ ಭಾಗದ ಜನರು ಪಟ್ಟಣದತ್ತ ಮುಖ ಮಾಡದ ಕಾರಣ ರಸ್ತೆಗಳು ಜನರಿಲ್ಲದೆ ಭಣಗುಡುತ್ತಿದ್ದವು.

ಪಟ್ಟಣದ ಬಜಾರು ರಸ್ತೆ, ಕೋಲಾರ ಮುಖ್ಯರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮೌನ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದವು.

ಅಂಬೇಡ್ಕರ್ ಪ್ರತಿಮೆ ಬಳಿ ಆರಂಭಗೊಂಡ ಮೌನ ಪ್ರತಿಭಟನೆ ಕೋಲಾರ ಮುಖ್ಯರಸ್ತೆಯಲ್ಲಿ ಸಂಚರಿಸಿ ತಾಲ್ಲೂಕು ಕಚೇರಿಯತ್ತ ತೆರಳಿತು. ಅಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ತಹಶೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಅವರ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಹತ್ಯೆಯ ಹಿಂದಿನ ರಹಸ್ಯವನ್ನು ಬಯಲಿಗೆಳೆಯಬೇಕು ಎಂದು ಒತ್ತಾಯಿಸಿದರು.

‘ತಾಲ್ಲೂಕು ದಂಡಾಧಿಕಾರಿಯನ್ನು ಒಬ್ಬ ಸಾಮಾನ್ಯ ನಿವೃತ್ತ ಶಿಕ್ಷಕ ಕೊಲೆ ಮಾಡಿರುವುದನ್ನು ನಂಬಲು ಸಾಧ್ಯವೇ ಇಲ್ಲ. ಅವರಿಗೆ ಪ್ರಚೋದನೆ ಮಾಡಿರುವವರು ಯಾರು ಎನ್ನುವುದನ್ನು ಬಯಲಿಗೆ ಎಳೆಯಬೇಕು. ಹತ್ಯೆ ಹಿಂದೆ ಕಾಣದ ಕೈಗಳ ಕೈವಾಡವಿದೆ. ವಿವಾದಿತ ಜಮೀನನ್ನು ಎರಡು ಮೂರು ಬಾರಿ ಸರ್ವೆ ಮಾಡಿದ್ದರೂ ಮತ್ತೊಮ್ಮೆ ಅವರನ್ನೇ ಸ್ಥಳಕ್ಕೆ ಕರೆಯಿಸಿ, ಒತ್ತಾಯ ಪೂರ್ವಕವಾಗಿ ಸರ್ವೆ ಮಾಡುವ ಉದ್ದೇಶವೇನಿತ್ತು’ ಎಂದು ಪ್ರಶ್ನಿಸಿದರು.

ಚಂದ್ರಮೌಳೇಶ್ವರ ಅವರ ನೆನಪಿನಾರ್ಥ ಪಟ್ಟಣದ ಪ್ರಮುಖ ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಘೋಷಿಸಿದರು. ಅಲ್ಲದೆ ಮೃತರ ಕುಟುಂಬಕ್ಕೆ ಸರ್ಕಾರ ₹1 ಕೋಟಿ ನೀಡಲೇಬೇಕು. ಪತ್ನಿ ಮತ್ತು ಮಗನಿಗೆ ಸರ್ಕಾರಿ ಕೆಲಸ ಕೊಡಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಅಧಿಕಾರಿಗಳ ಮೇಲೆ ಹಲ್ಲೆ ಮಾಡುವ ಸಂಸ್ಕೃತಿಗೆ ತಿಲಾಂಜಲಿ ಹಾಡಬೇಕು. ಇದಕ್ಕಾಗಿ ವಿಶೇಷ ಕಾನೂನು ಜಾರಿಗೆ ತರಬೇಕು. ಗ್ರೆಡ್-1 ಅಧಿಕಾರಿಯಾಗಿದ್ದರೂ ಸ್ವಂತ ಮನೆಯಿಲ್ಲದೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು ಎನ್ನುವುದು ಅವರ ಪ್ರಾಮಾಣಿಕತೆಗೆ ಸಾಕ್ಷಿ. ಅಂತ ವ್ಯಕ್ತಿಯನ್ನು ಹತ್ಯೆ ಮಾಡಿದ ಆರೋಪಿಗೆ ಗೂಂಡಾ ಕಾಯ್ದೆಯಡಿ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದರಾಜು, ಗಿರೀಶ್, ಹೂವರಸನಹಳ್ಳಿ ರಾಜಪ್ಪ, ಚಿನ್ನಿವೆಂಕಟೇಶ್, ರಾಮಪ್ರಸಾದ್, ಚಲಪತಿ, ಪಾರ್ಥಸಾರಥಿ, ಅರುಣಾಚಲಂ ಮಣಿ, ಸಾಧಿಕ್ ಪಾಷ, ಕಪಾಲಿಶಂಕರ್, ಮೇಸ್ತ್ರಿ ಸೀನಪ್ಪ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.