ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಹಶೀಲ್ದಾರ್‌ ಕೊಲೆಗೆ ಬೆಚ್ಚಿದ ಅಧಿಕಾರಿ ವಲಯ

ಅಧಿಕಾರಿಗಳ ದಿಗ್ಭ್ರಮೆ: ತನಿಖೆಗೆ ವಿಶೇಷ ತಂಡ ರಚನೆ
Last Updated 9 ಜುಲೈ 2020, 16:14 IST
ಅಕ್ಷರ ಗಾತ್ರ

ಕೋಲಾರ: ಬಂಗಾರಪೇಟೆ ತಹಶೀಲ್ದಾರ್‌ ಬಿ.ಕೆ.ಚಂದ್ರಮೌಳೇಶ್ವರ ಕೊಲೆ ಪ್ರಕರಣವು ಜಿಲ್ಲೆಯ ಅಧಿಕಾರಿ ವಲಯದಲ್ಲಿ ಆತಂಕ ಮೂಡಿಸಿದೆ.

ಕರ್ತವ್ಯನಿರತ ತಹಶೀಲ್ದಾರ್‌ ಸಾರ್ವಜನಿಕವಾಗಿ ಕೊಲೆಯಾಗಿರುವುದು ಅಧಿಕಾರಿಗಳನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಪೊಲೀಸರ ಸಮ್ಮುಖದಲ್ಲೇ ತಹಶೀಲ್ದಾರ್‌ ಕೊಲೆ ಆಗಿರುವುದಕ್ಕೆ ಅಧಿಕಾರಿಗಳು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಮೂಲತಃ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಚಂದ್ರಮೌಳೇಶ್ವರ ಅವರು ಕಂದಾಯ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಕೆಲ ವರ್ಷಗಳ ಹಿಂದೆ ತಹಶೀಲ್ದಾರ್‌ ಆಗಿ ಬಡ್ತಿ ಪಡೆದಿದ್ದರು. ಬೆಂಗಳೂರು ನಗರ ಜಿಲ್ಲೆಯ ಕೆ.ಆರ್‌.ಪುರ ತಾಲ್ಲೂಕಿನಲ್ಲಿ ಗ್ರೇಡ್‌–2 ತಹಶೀಲ್ದಾರ್‌, ಪ್ರಾದೇಶಿಕ ಆಯುಕ್ತರ ಕಚೇರಿ ಸೇರಿದಂತೆ ವಿವಿಧೆಡೆ ಇವರು ಕಾರ್ಯ ನಿರ್ವಹಿಸಿದ್ದರು.

ದಕ್ಷತೆ ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದ ಚಂದ್ರಮೌಳೇಶ್ವರ ಅವರು ಕಾರ್ಯ ನಿರ್ವಹಿಸಿದ ಸ್ಥಳಗಳಲ್ಲೆಲ್ಲಾ ಅಚ್ಚಳಿಯದ ಛಾಪು ಮೂಡಿಸಿದ್ದರು. ಕೆ.ಆರ್‌.ಪುರ ತಾಲ್ಲೂಕಿನಿಂದ ಬಂಗಾರಪೇಟೆಗೆ ವರ್ಗಾವಣೆಯಾಗಿ ಬಂದಿದ್ದ ಇವರು ಜನಪರ ಕಾರ್ಯದಿಂದಲೇ ಮನೆ ಮಾತಾಗಿದ್ದರು.

ಇವರ ತಾಯಿ, ಪತ್ನಿ ಮತ್ತು ಮಗ ಕೆ.ಆರ್‌.ಪುರದಲ್ಲಿ ವಾಸವಾಗಿದ್ದಾರೆ. ಬಂಗಾರಪೇಟೆಯ ಪ್ರವಾಸಿ ಮಂದಿರದಲ್ಲಿ ಉಳಿದುಕೊಂಡಿದ್ದ ಚಂದ್ರಮೌಳೇಶ್ವರ ಅವರು ವಾರಾಂತ್ಯದಲ್ಲಿ ಕೆ.ಆರ್‌.ಪುರಕ್ಕೆ ಹೋಗಿ ಬರುತ್ತಿದ್ದರು. ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಮಧುಗಿರಿ ತಾಲ್ಲೂಕಿನ ಸ್ವಗ್ರಾಮದಲ್ಲಿ ಶುಕ್ರವಾರ ಅಂತ್ಯಕ್ರಿಯೆ ನಡೆಸಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ.

ಐಜಿಪಿ ಭೇಟಿ: ಕೇಂದ್ರ ವಲಯ ಐಜಿಪಿ ಸೀಮಂತ್‌ಕುಮಾರ್‌ ಸಿಂಗ್‌ ಅವರು ಘಟನಾ ಸ್ಥಳ ಹಾಗೂ ಜಿಲ್ಲಾ ಕೇಂದ್ರದ ಜಾಲಪ್ಪ ಆಸ್ಪತ್ರೆಗೆ ಭೇಟಿ ನೀಡಿ ಹಿರಿಯ ಪೊಲೀಸ್‌ ಅಧಿಕಾರಿಗಳಿಂದ ಘಟನೆಯ ಮಾಹಿತಿ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೀಮಂತ್‌ಕುಮಾರ್‌ ಸಿಂಗ್‌, ‘ತಹಶೀಲ್ದಾರ್‌ರ ಕೊಲೆ ನಿಜಕ್ಕೂ ದುರಾದೃಷ್ಟಕರ. ಈ ಘಟನೆ ನಡೆಯಬಾರದಿತ್ತು. ಪ್ರಕರಣದ ತನಿಖೆಗೆ ಕೆಜಿಎಫ್‌ ಮತ್ತು ಕೋಲಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ’ ಎಂದು ತಿಳಿಸಿದರು.

‘ತಹಶೀಲ್ದಾರ್‌ರ ಇಡೀ ದಿನದ ಕಾರ್ಯಕ್ರಮಗಳು ಮತ್ತು ಸರ್ವೆ ಜಾಗದಲ್ಲಿನ ಘಟನಾವಳಿ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇವೆ. ಜಿಲ್ಲಾಧಿಕಾರಿ ಹಾಗೂ ಸರ್ವೆ ಸಿಬ್ಬಂದಿ ಜತೆ ಮಾತನಾಡಿದ್ದೇವೆ. ಸಾಧ್ಯವಾದಷ್ಟು ಬೇಗ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸುತ್ತೇವೆ’ ಎಂದು ಹೇಳಿದರು.

ತಹಶೀಲ್ದಾರ್‌ ಕೊಲೆ ಪ್ರಕರಣದಲ್ಲಿ ಪೊಲೀಸ್‌ ಇಲಾಖೆ ವೈಫಲ್ಯವಿದೆಯೇ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ‘ಈಗಲೇ ಆ ಬಗ್ಗೆ ಏನೋ ಹೇಳಲಾಗದು. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಪ್ರಕರಣದ ಸತ್ಯಾಸತ್ಯತೆ ಗೊತ್ತಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT