ಕೋಲಾರ: ‘ಬೇಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ಜಾಗವಿಲ್ಲ. ಅಂತಹ ಅಧಿಕಾರಿಗಳನ್ನು ಜಿಲ್ಲೆಯಿಂದ ಎತ್ತಂಗಡಿ ಮಾಡಿಸುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ತಹಶೀಲ್ದಾರ್ ಶೋಭಿತಾ ವಿರುದ್ಧ ಹರಿಹಾಯ್ದರು.
ಇಲ್ಲಿ ಬುಧವಾರ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ, ‘ಕೆ.ಸಿ ವ್ಯಾಲಿ ನೀರಿನಿಂದ ಭರ್ತಿಯಾಗಿ ಕೋಡಿ ಹರಿದಿರುವ ಎಸ್.ಅಗ್ರಹಾರ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಈ ಸಂಬಂಧ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ವಿಧಾನಸಭೆ ಹಕ್ಕು ಭಾದ್ಯತಾ ಸಮಿತಿಗೆ ದೂರು ನೀಡಿದ್ದೇನೆ’ ಎಂದು ಹೇಳಿದರು.
‘ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ನನಗೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ, ಜಿಲ್ಲಾಧಿಕಾರಿಗೆ ಹಾಗೂ ಉಪ ವಿಭಾಗಾಧಿಕಾರಿಗೆ ತಹಶೀಲ್ದಾರ್ ಮಾಹಿತಿ ನೀಡಿಲ್ಲ. ಇದು ದುರಾಹಂಕಾರದ ಪರಮಾವಧಿ. ಸರ್ಕಾರಿ ರಜಾ ದಿನವಾದ ಭಾನುವಾರ ಕಾರ್ಯಕ್ರಮ ಆಯೋಜಿಸಿ ಬೆರಳೆಣಿಕೆ ಅಧಿಕಾರಿಗಳು ಭಾಗವಹಿಸಿದ್ದಾರೆ. ಇದು ಶಿಷ್ಟಾಚಾರದ ಉಲ್ಲಂಘನೆ. ಅಧಿಕಾರಿಗಳ ಈ ವರ್ತನೆ ಸಹಿಸುವುದಿಲ್ಲ’ ಎಂದು ಕೆಂಡಾಮಂಡಲರಾದರು.
‘ಕರ್ತವ್ಯ ನಿರ್ಲಕ್ಷ್ಯ ತೋರಿದ ಮೂವರು ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ತೀರ್ಮಾನಿಸಲಾಗಿದೆ. ತಹಶೀಲ್ದಾರ್ ಶೋಭಿತಾ ಅವರ ವರ್ಗಾವಣೆಗೆ ಶಿಫಾರಸು ಮಾಡಲಾಗಿದೆ. ಅವರು ಇಲ್ಲಿಂದ ಜಾಗ ಖಾಲಿ ಮಾಡುವುದು ನಿಶ್ಚಿತ’ ಎಂದು ಗುಡುಗಿದರು.
ಸದ್ಯದಲ್ಲೇ ವರ್ಗಾವಣೆ: ‘ಶೋಭಿತಾ ಅವರು ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಹೋಗಿದ್ದು ತಪ್ಪು. ಆದರೆ, ಅವರು ತಮಗೇನೂ ಗೊತ್ತಿಲ್ಲ ಎನ್ನುವ ರೀತಿ ಮಗುವಿನಂತೆ ಮಾತನಾಡುತ್ತಾರೆ. ಅವರ ಬೇಜವಾಬ್ದಾರಿ ಸಂಬಂಧ ಕಾನೂನು ಸಚಿವ ಮಾಧುಸ್ವಾಮಿ ಅವರಿಗೆ ದೂರು ನೀಡಲಾಗಿದ್ದು, ಸದ್ಯದಲ್ಲೇ ಶೋಭಿತಾ ಅವರ ವರ್ಗಾವಣೆ ಆಗಲಿದೆ’ ಎಂದು ಸ್ಪಷ್ಟಪಡಿಸಿದರು.
‘ಶಿಷ್ಟಾಚಾರ ಉಲ್ಲಂಘನೆ ವಿಚಾರದಲ್ಲಿ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಕೃಷ್ಣ ಮತ್ತು ಎಂಜಿನಿಯರ್ ಸುರೇಶ್ ವಿರುದ್ಧವೂ ಶಿಸ್ತುಕ್ರಮ ಜರುಗಿಸಲಾಗುವುದು. ಆ ಇಬ್ಬರನ್ನೂ ಜಿಲ್ಲೆಯಿಂದ ಖಂಡಿತ ಹೊರಗೆ ಕಳುಹಿಸುತ್ತೇನೆ. ಆ ಮೂಲಕ ಬೇಜವಾಬ್ದಾರಿ ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ರವಾನಿಸುತ್ತೇವೆ’ ಎಂದು ತಿಳಿಸಿದರು.
ಆಯುಕ್ತರ ವಿರುದ್ಧ ದೂರು: ‘ಕೋಲಾರ ನಗರಸಭೆ ಆಯುಕ್ತ ಶ್ರೀಕಾಂತ್ ಅವರ ಕಾರ್ಯವೈಖರಿ ಸರಿಯಿಲ್ಲ. ಅವರ ವಿರುದ್ಧ ಸಾಕಷ್ಟು ದೂರುಗಳಿವೆ. ಅವರು ಹಣದಾಸೆಗೆ ಬೇಕಾಬಿಟ್ಟಿ ಖಾತೆ ಮಾಡಿರುವುದು ಗಮನಕ್ಕೆ ಬಂದಿದೆ. ನಗರಸಭೆ ಅಕ್ರಮಗಳ ಸಂಬಂಧ ಸಮಗ್ರ ತನಿಖೆಗೆ ಸಮಿತಿ ರಚಿಸುತ್ತೇವೆ. ಶ್ರೀಕಾಂತ್ ವರ್ಗಾವಣೆ ಆಗಿದ್ದರೂ ಇಲ್ಲಿಯೇ ಮುಂದುವರಿದಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದರು.
‘ಜಿಲ್ಲಾ ಕೇಂದ್ರದ ಎಂ.ಜಿ ರಸ್ತೆ ಬಳಿಯಿರುವ ಸುಮಾರು ₹ 80 ಕೋಟಿ ಬೆಲೆ ಬಾಳುವ ಕನ್ಸರ್‌ವೆನ್ಸಿ ಜಾಗಕ್ಕೆ ನಗರಸಭೆ ಅಧಿಕಾರಿಗಳು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ. ಈ ಸಂಬಂಧ ಸಾರ್ವಜನಿಕರು ದೂರು ಕೊಟ್ಟಿದ್ದು, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ಸ್ಥಳೀಯರಿಗೆ ಕೆಲಸ: ‘ಜಿಲ್ಲೆಯಲ್ಲಿರುವ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಉಪ ನಿರ್ದೇಶಕ ರವಿಚಂದ್ರ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗುವುದು. ಕೈಗಾರಿಕೆಗಳಲ್ಲಿ ಉದ್ಯೋಗಕ್ಕೆ ನೇರವಾಗಿ ಅರ್ಜಿ ಸಲ್ಲಿಸಲು ಅವಕಾಶ ಇಲ್ಲದಿರುವ ಕಾರಣ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಮೂಲಕ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.