ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕಾಭಿವೃದ್ಧಿಗೆ ತೆರಿಗೆ ಸಂಗ್ರಹ ಮುಖ್ಯ: ನಿಂಗೇಗೌಡ

Last Updated 31 ಜನವರಿ 2020, 12:29 IST
ಅಕ್ಷರ ಗಾತ್ರ

ಕೋಲಾರ: ‘ದೇಶದ ಆರ್ಥಿಕಾಭಿವೃದ್ಧಿಗೆ ತೆರಿಗೆ ಸಂಗ್ರಹ ಬಹಳ ಮುಖ್ಯ. ಸಾರ್ವಜನಿಕರು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅರ್ಥ ಮಾಡಿಕೊಂಡು ಪ್ರಾಮಾಣಿಕವಾಗಿ ತೆರಿಗೆ ಪಾವತಿಸಬೇಕು’ ಎಂದು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಕೆ.ಎಸ್.ನಿಂಗೇಗೌಡ ಕಿವಿಮಾತು ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಸರಕು ಮತ್ತು ಸೇವಾ ತೆರಿಗೆ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಸಂಘಟನೆಗಳ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಜಿಎಸ್‌ಟಿ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ‘ಜಿಎಸ್‌ಟಿ ಜಾರಿಯಾದ ನಂತರ ನಾನಾ ಕಾರಣದಿಂದ ತೆರಿಗೆ ಸಂಗ್ರಹಣೆ ಕುಸಿದಿದೆ’ ಎಂದರು.

‘ಜಿಎಸ್‌ಟಿ 4ರ ವಿಭಾಗ ವ್ಯಾಪ್ತಿಯಲ್ಲಿ 90 ಸಾವಿರ ಮಂದಿ ಡೀಲರ್‌ಗಳು ನೋಂದಣಿ ಮಾಡಿಸಿದ್ದಾರೆ. ಈ ಪೈಕಿ ಶೇ 65ರಷ್ಟು ಮಂದಿ ಆದಾಯ ತೆರಿಗೆ ಮಾಹಿತಿ ದಾಖಲಿಸಿದರೆ ಉಳಿದ ಶೇ 35ರಷ್ಟು ಮಂದಿ ಆ ಪ್ರಯತ್ನ ಮಾಡುತ್ತಿಲ್ಲ. ಡೀಲರ್‌ಗಳನ್ನು 3 ಹಂತದಲ್ಲಿ ವಿಂಗಡಿಸಲಾಗಿದೆ. ಮೊದಲ ಹಂತದ ಡೀಲರ್‌ಗಳೇ ಆದಾಯ ತೆರಿಗೆ ಮಾಹಿತಿ ದಾಖಲಿಸುವಲ್ಲಿ ವಿಫಲರಾಗುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಿಎಸ್‌ಟಿ ಜಾರಿಯಾದ 3 ವರ್ಷಗಳಲ್ಲಿ ಸಾಕಷ್ಟು ಮಾರ್ಪಾಡು ಮಾಡಲಾಗಿದೆ. ಇದು ತಂತ್ರಜ್ಞಾನ ಯುಗ. ಕೇಂದ್ರ ಸರ್ಕಾರವು ತೆರಿಗೆ ಇಲಾಖೆಯಲ್ಲಿ ಇ–ಆಡಳಿತ ವ್ಯವಸ್ಥೆ ಜಾರಿಗೊಳಿಸಿದೆ. ಏ.1ರಿಂದ ಹೊಸ ವ್ಯವಸ್ಥೆ ಬರುವುದರಿಂದ ಈಗಲೇ ಆ ಬಗ್ಗೆ ಮಾಹಿತಿ ಪಡೆದು ಸಂಬಂಧಪಟ್ಟ ತಂತ್ರಾಂಶದಲ್ಲಿ ವಹಿವಾಟು ಮಾಹಿತಿ ದಾಖಲಿಸುವುದನ್ನು ಕಲಿಯಬೇಕು. ಇದರಿಂದ ಲೋಪ ತಡೆಯಬಹುದು’ ಎಂದು ಸಲಹೆ ನೀಡಿದರು.

‘ತೆರಿಗೆ ಸಂಗ್ರಹಣೆ ಗುರಿ ಸಾಧಿಸಲು ಪ್ರಧಾನಮಂತ್ರಿಗಳ ಕಡೆಯಿಂದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರತಿ ತಿಂಗಳು ಚರ್ಚೆ ನಡೆಯುತ್ತದೆ. ಮುಖ್ಯಮಂತ್ರಿಯವರು ತೆರಿಗೆ ಇಲಾಖೆ ಅಧಿಕಾರಿಗಳ ಸಭೆ ನಡೆಸುತ್ತಾರೆ. ಆದರೆ, ನಿರೀಕ್ಷೆಯಂತೆ ತೆರಿಗೆ ಸಂಗ್ರಹವಾಗುತ್ತಿಲ್ಲ. ಇದಕ್ಕೆ ನಾನಾ ಕಾರಣಗಳಿರಬಹುದು. ಜಿಎಸ್‌ಟಿ ಕುರಿತು ಅರಿವು ಮೂಡಿಸಿದರೆ ತೆರಿಗೆ ಸಂಗ್ರಹಣೆಯಲ್ಲಿ ಸುಧಾರಣೆ ಕಾಣಬಹುದು’ ಎಂದು ಅಭಿಪ್ರಾಯಪಟ್ಟರು.

ಗೊಂದಲಗಳಿವೆ: ‘ಜಿಎಸ್‌ಟಿ ವಿಚಾರದಲ್ಲಿ ಇಂದಿಗೂ ಸಾಕಷ್ಟು ಗೊಂದಲಗಳಿವೆ. ಜಿಎಸ್‌ಟಿ ಪಾವತಿ ಸಂಬಂಧ ಕೇಂದ್ರ ರೂಪಿಸಿರುವ ಅಂಶಗಳಲ್ಲಿ ಸಮಸ್ಯೆಯಿದ್ದರೂ ಸರ್ಕಾರವನ್ನು ಎದುರು ಹಾಕಿಕೊಳ್ಳಬಾರದು. ಏ.1ರಿಂದ 9ರ ಕಲಂಗಳಲ್ಲಿ ಮಾಹಿತಿ ದಾಖಲಿಸಬೇಕು. ಸಮಸ್ಯೆಗಳನ್ನು ದಾಖಲಿಸಿ ಮಾರ್ಪಾಡು ಮಾಡುವವರೆಗೆ ಇರುವ ವ್ಯವಸ್ಥೆಯನ್ನೇ ಪಾಲಿಸುವುದು ನಮ್ಮ ಧರ್ಮ’ ಎಂದು ಲೆಕ್ಕ ಪರಿಶೋಧಕ ಆರ್‌.ಜಿ.ಮುರಳೀಧರ್ ಹೇಳಿದರು.

‘ವರ್ತಕರು ಸರಿಯಾದ ಲೆಕ್ಕ ನಿರ್ವಹಿಸದೆ ಲೆಕ್ಕಪರಿಶೋಧಕರು ನೋಡಿಕೊಳ್ಳುತ್ತಾರೆಂಬ ಧೋರಣೆ ಸರಿಯಲ್ಲ. ಆಯಾ ದಿನದ ವಹಿವಾಟಿನ ವಿವರಗಳನ್ನು ಅಂದೇ ದಾಖಲಿಸಬೇಕು. ನಿಯಮಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಆಯಾ ಲೆಕ್ಕಶೀರ್ಷಿಕೆ ಕಲಂಗೆ ತಕ್ಕಂತೆ ಮಾಹಿತಿ ನೀಡಬೇಕು’ ಎಂದು ಸೂಚಿಸಿದರು.

ಸಹಕಾರ ಪಡೆಯಿರಿ: ‘ವರ್ತಕರು ಸರಿಯಾಗಿ ವಹಿವಾಟಿನ ಲೆಕ್ಕ ಇಡದಿದ್ದರೆ ಜೇಬಿನಿಂದ ತೆರಿಗೆ ಕಟ್ಟಬೇಕಾಗುತ್ತದೆ. ಜಿಎಸ್‌ಟಿ ವಿಚಾರವಾಗಿ ಗೊಂದಲವಿದ್ದರೆ ಲೆಕ್ಕ ಪರಿಶೋಧಕರ ಸಹಕಾರ ಪಡೆಯಬೇಕು. ಅಕ್ಕಪಕ್ಕದ ವರ್ತಕರಿಗೂ ಮಾಹಿತಿ ನೀಡಬೇಕು’ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಸುರೇಶ್‌ ಹೇಳಿದರು.

ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತೆ ಸಹನಾ, ಜಿಲ್ಲಾ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ವಿ.ಕೃಷ್ಣ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT