ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರು ನಿರಂತರ ಅಧ್ಯಯನಶೀಲರಾಗಿ

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರತ್ನಯ್ಯ ಕಿವಿಮಾತು
Last Updated 11 ಮಾರ್ಚ್ 2020, 19:35 IST
ಅಕ್ಷರ ಗಾತ್ರ

ಕೋಲಾರ: ‘ಶಿಕ್ಷಕರು ವೃತ್ತಿ ಪಾವಿತ್ರ್ಯ ಕಾಪಾಡುವ ಜತೆಗೆ ನಿರಂತರ ಅಧ್ಯಯನಶೀಲರಾಗಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಕಿವಿಮಾತು ಹೇಳಿದರು.

ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಅರಬಿಂದೋ ಸೊಸೈಟಿ ಸಂಸ್ಥೆ ಸಹಯೋಗದಲ್ಲಿ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ನಲಿಕಲಿ ಕಲಿಕೋಪಕರಣ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ‘ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ಅಂಕ ಗಳಿಕೆಗೆ ಸೀಮಿತಗೊಳಿಸಿ ಕಲಿಕೆಗೆ ಪ್ರೇರಣೆ ನೀಡದಿರುವುದು ಸರಿಯಲ್ಲ. ಮಕ್ಕಳ ಆಸಕ್ತಿಗೆ ತಕ್ಕಂತೆ ಅವರ ಮನಸ್ಥಿತಿ ಅರಿತು ಶಿಕ್ಷಕರು ಬೋಧನಾ ವಿಧಾನ ಬದಲಿಸಿಕೊಳ್ಳಬೇಕು’ ಎಂದರು.

‘ವಿದ್ಯಾರ್ಥಿಗಳ ಮಾನಸಿಕ -ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ವರ್ಷದಿಂದ ವರ್ಷಕ್ಕೆ ಶಿಕ್ಷಕರ ಬೋಧನಾ ಕೌಶಲ ಹೆಚ್ಚಬೇಕು. ಚಟುವಟಿಕೆಯಾಧಾರಿತ ಬೋಧನೆಯು ವಿದ್ಯಾರ್ಥಿಗಳ ನಿರೀಕ್ಷೆಯಾಗಿದೆ. ಶಿಕ್ಷಕರು ಸದಾ ಕಲಿಯುವ ವಿದ್ಯಾರ್ಥಿಯಾದರೆ ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯ. ಬೋಧನೆ ವಿಧಾನ ಮಕ್ಕಳ ಮನ ಮುಟ್ಟುವಂತೆ ಇರಲಿ’ ಎಂದು ಸಲಹೆ ನೀಡಿದರು.

‘ಶಿಕ್ಷಕರು ಪಠ್ಯಕ್ರಮ ಮುಗಿಸಿದರೆ ಸಾಲದು. ಮಕ್ಕಳಲ್ಲಿನ ಕೊರತೆ ಅರಿತು ಪೂರ್ವ ಸಿದ್ಧತೆಯೊಂದಿಗೆ ತರಗತಿಗೆ ತೆರಳಿ ಪಾಠ ಮಾಡಬೇಕು. ಮಕ್ಕಳಲ್ಲಿ ಆಲೋಚನಾ ಶಕ್ತಿ ಬೆಳೆಸಿ. ವೈದ್ಯರು ಚಿಕಿತ್ಸೆಗೆ ಮುನ್ನ ರೋಗ ಪತ್ತೆ ಮಾಡುವಂತೆ ಮಕ್ಕಳ ಕಲಿಕೆ ಮಟ್ಟ ಅರಿತು ಬೋಧನೆ ಮಾಡಿ’ ಎಂದು ಹೇಳಿದರು.

ಸಮರ್ಪಣಾ ಮನೋಭಾವ: ‘ಕನಿಷ್ಠ ವೆಚ್ಚದಲ್ಲಿ ಅಗತ್ಯವಿರುವ ಬೋಧನೋಪಕರಣ ತಯಾರಿಸಿಕೊಂಡು ವಿದ್ಯಾರ್ಥಿಗಳಿಗೆ ಅನುಗುಣವಾಗಿ ಪಠ್ಯಕ್ಕೆ ಹೊಂದುವಂತೆ ಆಯಾ ತರಗತಿಯ ವಿಷಯದ ಬೋಧನೆ ಅನುಷ್ಠಾನಗೊಳಿಸಬೇಕು. ಶಿಕ್ಷಕರು ಸಮರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು’ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್‌) ಪ್ರಾಂಶುಪಾಲ ಕೆ.ಎಂ.ಜಯರಾಮರೆಡ್ಡಿ ತಿಳಿಸಿದರು.

‘ಕೇವಲ ನಲಿಕಲಿ ಶಿಕ್ಷಕರಿಗೆ ಮಾತ್ರ ಏರ್ಪಡಿಸಿರುವ ಬೋಧನೋಪಕರಣ ಪ್ರದರ್ಶನವನ್ನು ಮುಂದೆ ಇಡೀ ತಾಲ್ಲೂಕಿನ ಎಲ್ಲಾ ಶಿಕ್ಷಕರಿಗೆ ಏರ್ಪಡಿಸುತ್ತೇವೆ. ಶಿಕ್ಷಕರ ಜ್ಞಾನಾಭಿವೃದ್ಧಿಗೆ ಪೂರಕವಾದ ಚಟುವಟಿಕೆ ನಡೆಸುತ್ತೇವೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಭರವಸೆ ನೀಡಿದರು.

ಮಾಲೂರು ತಾಲ್ಲೂಕಿನ ಅಗ್ರಹಾರ ಸರ್ಕಾರಿ ಶಾಲಾ ಶಿಕ್ಷಕಿ ಗಾಯತ್ರಿದೇವಿ ನಲಿಕಲಿ ವಸ್ತು ಪ್ರದರ್ಶನದ ಪರಿಕರಗಳ ಕುರಿತು ಮಾಹಿತಿ ನೀಡಿದರು. ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ, ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್, ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಟಿ.ಎಂ.ನಾಗರಾಜ್. ಅರಬಿಂದೋ ಸೊಸೈಟಿ ರಾಜ್ಯ ಸಮನ್ವಯಾಧಿಕಾರಿ ಕುಂತನ್ ಸಿಂಗ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT